ADVERTISEMENT

ನರೇಗಾ ಉದ್ಯೋಗ ಕೊಡಲು ಹಕ್ಕೊತ್ತಾಯ

ವಿವಿಧ ಗ್ರಾಮಗಳಲ್ಲಿ ರೈತರ, ಕೂಲಿಕಾರ್ಮಿಕರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 14 ಮೇ 2021, 5:12 IST
Last Updated 14 ಮೇ 2021, 5:12 IST
ರೈತರು, ಕೂಲಿಕಾರ್ಮಿಕರು, ಮಹಿಳೆಯರಿಗೆ ಆರ್ಥಿಕ ನೆರವು ಘೋಷಿಸಬೇಕು ಎಂದು ಒತ್ತಾಯಿಸಿ ಜನವಾದಿ ಮಹಿಳಾ ಸಂಘಟನೆ, ಪ್ರಾಂತ ರೈತ ಸಂಘದ ಕಾರ್ಯಕರ್ತರು ಭಿತ್ತಿಪತ್ರ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು
ರೈತರು, ಕೂಲಿಕಾರ್ಮಿಕರು, ಮಹಿಳೆಯರಿಗೆ ಆರ್ಥಿಕ ನೆರವು ಘೋಷಿಸಬೇಕು ಎಂದು ಒತ್ತಾಯಿಸಿ ಜನವಾದಿ ಮಹಿಳಾ ಸಂಘಟನೆ, ಪ್ರಾಂತ ರೈತ ಸಂಘದ ಕಾರ್ಯಕರ್ತರು ಭಿತ್ತಿಪತ್ರ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು   

ಕಲಬುರ್ಗಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಎಲ್ಲ ಜಾಬ್ ಕಾರ್ಡುದಾರರಿಗೆ ಉದ್ಯೋಗ ಕೊಡಬೇಕು ಇಲ್ಲವೇ ಪರಿಹಾರ ಧನ ಕೊಡಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ, ಪ್ರಾಂತ ರೈತ ಸಂಘ ಮತ್ತು ಪ್ರಾಂತ ಕೃಷಿ ಕೂಲಿಕಾರ್ಮಿಕರ ಸಂಘಗಳ ಕಾರ್ಯಕರ್ತರು ಗುರುವಾರ ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿ ಕಚೇರಿ ಹಾಗೂ ತಮ್ಮ ಮನೆಗಳ ಎದುರು ಪ್ರತಿಭಟನೆ ನಡೆಸಿದರು.

ಕೊರೊನಾ ಲಾಕ್‌ಡೌನ್‌ನಿಂದ ತತ್ತರಿಸಿರುವ ಎಲ್ಲ ಶ್ರಮಿಕರಿಗೆ ₹ 10 ಸಾವಿರ ಪರಿಹಾರ ಧನ ಕೊಡಬೇಕು. ಖಾತ್ರಿ ಯೋಜನೆಯಡಿ ಕೆಲಸ ಮಾಡಿಸಿಕೊಂಡ ಕೂಲಿ ಬಾಕಿಯನ್ನು ಕೂಡಲೇ ಬಿಡುಗಡೆ ಮಾಡಬೇಕು. ಪ್ರತಿ ಸದಸ್ಯರಿಗೆ 10 ಕಿಲೋ ಅಕ್ಕಿ, ಗೋಧಿ, ದ್ವಿದಳ ಧಾನ್ಯಗಳನ್ನು ಉಚಿತವಾಗಿ ವಿತರಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯ ಹಿನ್ನೆಲೆಯಲ್ಲಿ ಉದ್ಯೋಗ ಖಾತ್ರಿ ಕೆಲಸ ಸ್ಥಗಿತದ ನಿರ್ಣಯ ವಾಪಸ್ ಪಡೆದ ಸರ್ಕಾರ ಹೊಸ ಆದೇಶ ಹೊರಡಿಸಿ ನರೇಗಾ ಯೋಜನೆಯನ್ನು ಕೋವಿಡ್ ನಿಯಮ ಪಾಲನೆಯೊಂದಿಗೆ ಪುನಃ ಆರಂಭಿಸುವುದಾಗಿ ಹೇಳಿದೆ. ಇದನ್ನು ಸ್ವಾಗತಿಸುತ್ತೇವೆ. ಆದರೆ ಇದೇ ಹೊತ್ತಿನಲ್ಲಿ ಉಳಿದ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಸರ್ಕಾರ ಕೂಡಲೇ ಮೂರು ಬೇಡಿಕೆಗಳನ್ನು ಈಡೇರಿಸದಿದ್ದರೆ ಹೋರಾಟ ತೀವ್ರಗೊಳ್ಳಲಿದೆ ಎಂದು ಎಚ್ಚರಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಪ್ರಾಂತ ಕೃಷಿ ಕೂಲಿ ಕಾರ್ಮಿಕರ ಸಂಘದ ಅಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ, ಜನವಾದಿ ಮಹಿಳಾ ಸಂಘಟನೆ ರಾಜ್ಯ ಉಪಾಧ್ಯಕ್ಷೆ ಕೆ. ನೀಲಾ, ಜಿಲ್ಲಾ ಘಟಕದ ಅಧ್ಯಕ್ಷೆ ಅಮೀನಾ ಬೇಗಂ ಹಾಗೂ ಈ ಸಂಘಟನೆಗಳ ಕಾರ್ಯಕರ್ತರು ಚಳವಳಿಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.