ಕಲಬುರಗಿ: ‘2024–25ನೇ ಸಾಲಿನ ಬಿ.ಇಡಿ ಅಂತಿಮ ವರ್ಷದ ನಾಲ್ಕನೇ ಸೆಮಿಸ್ಟರ್ ಫಲಿತಾಂಶ ಪ್ರಕಟಿಸಬೇಕು, ಅಂಕಪಟ್ಟಿ ಮತ್ತು ಕಾನ್ವೊಕೇಷನ್ ಸರ್ಟಿಫಿಕೇಟ್ ಕೊಡಬೇಕು ಎಂದು ಆಗ್ರಹಿಸಿ ಜೂ.13ರಂದು ಗುಲಬರ್ಗಾ ವಿವಿ ಕಾರ್ಯಸೌಧ ಎದುರು ಪ್ರತಿಭಟನೆ ನಡೆಸಲಾಗುವುದು’ ಎಂದು ಗುಲಬರ್ಗಾ ವಿಶ್ವವಿದ್ಯಾಲಯ ಬಿ.ಇಡಿ ವಿದ್ಯಾರ್ಥಿಗಳ ಹೋರಾಟ ಸಮಿತಿ ಸಂಚಾಲಕ ತೇಜಸ್ ಆರ್.ಇಬ್ರಾಹಿಂಪುರ ತಿಳಿಸಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಯಾವುದೇ ಪದವಿ, ಸ್ನಾತಕೋತ್ತರ ಪದವಿ, ವೃತ್ತಿಪರ ಪರೀಕ್ಷೆ ಬರೆದ 45 ದಿನಗಳ ಒಳಗಾಗಿ ಫಲಿತಾಂಶ ಪ್ರಕಟಿಸಬೇಕು ಎಂಬ ನಿಯಮವಿದೆ. ಆದರೆ, ಈ ನಿಯಮವನ್ನು ಗುಲಬರ್ಗಾ ವಿವಿ ಗಾಳಿಗೆ ತೂರಿದೆ. ಜಿಲ್ಲೆಯ ಸುಮಾರು 2 ಸಾವಿರ ವಿದ್ಯಾರ್ಥಿಗಳು 4ನೇ ಸೆಮಿಸ್ಟರ್ ಪರೀಕ್ಷೆ ಬರೆದು ಏಳು ತಿಂಗಳು ಕಳೆದರೂ ಫಲಿತಾಂಶ ಪ್ರಕಟಿಸಿಲ್ಲ’ ಎಂದು ಆರೋಪಿಸಿದರು.
‘ಬಿ.ಇಡಿ ವಿದ್ಯಾರ್ಥಿಗಳ 1, 2 ಮತ್ತು 3ನೇ ಸೆಮಿಸ್ಟರ್ ಪರೀಕ್ಷೆಯ ಆನ್‌ಲೈನ್ ಫಲಿತಾಂಶ ಮಾತ್ರ ಪ್ರಕಟಿಸಲಾಗಿದೆ. ಮುದ್ರಿತ ಅಂಕಪಟ್ಟಿ ಇನ್ನೂ ಕೊಟ್ಟಿಲ್ಲ. ಇದೀಗ 4ನೇ ಸೆಮಿಸ್ಟರ್ ಫಲಿತಾಂಶವನ್ನೇ ಪ್ರಕಟಿಸಿಲ್ಲ. ಈ ಬಗ್ಗೆ ಕುಲಪತಿ, ಕುಲಸಚಿವರನ್ನು ಕೇಳಿದರೆ ಇಂದು, ನಾಳೆ ಎಂದು ಕಾಲ ದೂಡುತ್ತಿದ್ದಾರೆ’ ಎಂದು ಅಳಲು ತೋಡಿಕೊಂಡರು.
‘ಫಲಿತಾಂಶ ಪ್ರಕಟಿಸಿದ್ದರೆ ಅತಿಥಿ ಶಿಕ್ಷಕರ ಹುದ್ದೆಗಾದರೂ ಅರ್ಜಿ ಹಾಕಬಹುದಿತ್ತು. ಅರ್ಜಿ ಸಲ್ಲಿಕೆ ಕೊನೆಯ ದಿನಾಂಕವೂ ಮುಗಿದಿದೆ. ನಮ್ಮ ಜೀವನ ಅತಂತ್ರವಾಗಿದೆ. ವಿಶ್ವವಿದ್ಯಾಲಯವು ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ ಆಡುತ್ತಿದೆ’ ಎಂದು ದೂರಿದರು. ‘ಪ್ರತಿಭಟನೆಗೆ ವಿದ್ಯಾರ್ಥಿ ಹಾಗೂ ಯುವಜನ ಸಂಘಟನೆಗಳು ಬೆಂಬಲ ನೀಡುತ್ತಿವೆ’ ಎಂದರು.
ಪ್ರಭಾಕರ್ ಚಿಂಚೋಳಿ, ಗಣೇಶ ಜಾಧವ, ದತ್ತು ಹುಡೇಕರ್, ರಮೇಶ ದೇವರಕರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.