ADVERTISEMENT

ಪಿಎಸ್‌ಐ ಅಕ್ರಮ ನೇಮಕ; ಆರೋಪಿ ಸುಪ್ರಿಯಾ ಮಲ್ಲಿಕಾರ್ಜುನ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2022, 21:04 IST
Last Updated 2 ನವೆಂಬರ್ 2022, 21:04 IST
ಸುಪ್ರಿಯಾ
ಸುಪ್ರಿಯಾ   

ಕಲಬುರಗಿ: ಪಿಎಸ್ಐ ಅಕ್ರಮ ನೇಮಕ ಕುರಿತು ತನಿಖೆ ಕೈಗೊಂಡಿರುವ ಸಿಐಡಿ ಅಧಿಕಾರಿಗಳ ತಂಡವು ಬುಧವಾರ ಜೇವರ್ಗಿ ತಾಲ್ಲೂಕಿನ ಸುಪ್ರಿಯಾ ಮಲ್ಲಿಕಾರ್ಜುನ ಹುಂಡೆಕರ್ (26) ಎಂಬುವರನ್ನು ವಶಕ್ಕೆ ಪಡೆದಿದೆ.

ಪರೀಕ್ಷಾ ಕೇಂದ್ರದಲ್ಲಿ ಬ್ಲೂಟೂತ್ ಡಿವೈಸ್ ಬಳಸಿದ ಪ್ರಕರಣದಡಿ ಸುಪ್ರಿಯಾ ಅವರನ್ನು ಸಿಐಡಿ ತನಿಖಾಧಿಕಾರಿಗಳಾದ ಶಂಕರಗೌಡ ಪಾಟೀಲ, ಪ್ರಕಾಶ ರಾಠೋಡ ಅವರು ವಶಕ್ಕೆ ಪಡೆದಿದ್ದಾರೆ.

‘ಸರ್ಕಾರಿ ಪದವಿ ಕಾಲೇಜಿನಲ್ಲಿ ಬ್ಲೂಟೂತ್ ಡಿವೈಸ್ ಬಳಸಿ ಪಿಎಸ್‌ಐ ನೇಮಕ ಪರೀಕ್ಷೆ ಬರೆದ ಆರೋಪದಡಿ ದೂರು ದಾಖಲಾಗಿತ್ತು. ಈ ಬಗ್ಗೆ ನಡೆಸುತ್ತಿದ್ದ ತನಿಖೆಯಲ್ಲಿ ಸುಪ್ರಿಯಾ ಅವರ ಮೇಲಿದ್ದ ಸಂಶಯ ಖಚಿತವಾದ ಕಾರಣ ವಶಕ್ಕೆ ಪಡೆದು, ವಿಚಾರಣೆ ನಡೆಸಿದ್ದೇವೆ’ ಎಂದು ಸಿಐಡಿ ತನಿಖಾಧಿಕಾರಿ ಶಂಕರಗೌಡ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಉದ್ಯಮಿ ಮನೆಯಲ್ಲಿ ಐ.ಟಿ ಶೋಧ

ಬೆಂಗಳೂರು: ತೆರಿಗೆ ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯದ ಸಚಿವರೊಬ್ಬರ ಸಂಬಂಧಿಯಾಗಿರುವ ರಿಯಲ್‌ ಎಸ್ಟೇಟ್‌ ಉದ್ಯಮಿ ಚಂದ್ರಶೇಖರ್‌ ಎಂಬುವವರ ಮನೆಯ ಮೇಲೆ ಆದಾಯ ತೆರಿಗೆ (ಐ.ಟಿ) ಇಲಾಖೆ ಅಧಿಕಾರಿಗಳು ಬುಧವಾರ ದಾಳಿ ಮಾಡಿ ಶೋಧ ನಡೆಸಿದ್ದಾರೆ.

ಕಗ್ಗದಾಸಪುರದಲ್ಲಿರುವ ಚಂದ್ರಶೇಖರ್‌ ಮನೆಯ ಮೇಲೆ ದಾಳಿ ಮಾಡಿದ ಐ.ಟಿ ಅಧಿಕಾರಿಗಳು, ಹಲವು ಗಂಟೆಗಳ ಕಾಲ ಶೋಧ ನಡೆಸಿದರು. ರಿಯಲ್‌ ಎಸ್ಟೇಟ್‌ ವಹಿವಾಟು, ಬ್ಯಾಂಕ್‌ನಲ್ಲಿ ನಡೆಸಿರುವ ಹಣಕಾಸು ವಹಿವಾಟು, ತೆರಿಗೆ ಪಾವತಿಗೆ ಸಂಬಂಧಿಸಿದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.

ಕಾರು ಬಾವಿಗೆ ಬಿದ್ದು ತಂದೆ, ಮಗ ಸಾವು

ಕಣ್ಣೂರು, ಕೇರಳ (ಪಿಟಿಐ): ಮಗನಿಗೆ ಕಾರು ಚಾಲನಾ ತರಬೇತಿ ನೀಡುತ್ತಿದ್ದ ವೇಳೆ ಕಾರು ನಿಯಂತ್ರಣ ತಪ್ಪಿ ಮನೆಯ ಬಾವಿಗೆ ಬಿದ್ದುದರಿಂದ ತಂದೆ ಹಾಗೂ ಮಗ ಮೃತಪಟ್ಟಿರುವ ಘಟನೆ ಕೇರಳದ ಕಣ್ಣೂರಿನ ನೆಲ್ಲಿಕುನ್ನು ಗ್ರಾಮದಲ್ಲಿ ನಡೆದಿದೆ.

ಮನೆಯ ಬಳಿ ನಿಲ್ಲಿಸಿದ್ದ ಕಾರಿನಲ್ಲಿ ತರಬೇತಿ ನೀಡುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ತಂದೆ ಮ್ಯಾಥುಕುಟ್ಟಿ (55) ಸ್ಥಳದಲ್ಲೇ ಮೃತಪಟ್ಟಿದ್ದು, ಪುತ್ರ ವೆನ್ಸ್‌ ಮ್ಯಾಥ್ಯೂಗೆ (18) ಹೆಚ್ಚಿನ ಗಾಯಗಳಾಗಿದ್ದು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.