ADVERTISEMENT

ಪಿಎಸ್‌ಐ ಅಕ್ರಮ: ಇಬ್ಬರ ಜಾಮೀನು ಅರ್ಜಿ ತಿರಸ್ಕಾರ

​ಪ್ರಜಾವಾಣಿ ವಾರ್ತೆ
Published 18 ಮೇ 2022, 12:24 IST
Last Updated 18 ಮೇ 2022, 12:24 IST
   

ಕಲಬುರಗಿ: ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಬಂಧಿತರಾಗಿರುವ ಅಭ್ಯರ್ಥಿ ಪ್ರಭು ಹಾಗೂ ಅವರ ತಂದೆ ಶರಣಪ್ಪ ಅವರ ಜಾಮೀನು ಅರ್ಜಿಯನ್ನು ಇಲ್ಲಿನ ಮೂರನೇ ಜೆಎಂಎಫ್‌ ನ್ಯಾಯಾಲಯವು ಬುಧವಾರ ತಿರಸ್ಕರಿಸಿದೆ.

ಕಲಬುರಗಿಯ ಎಂ.ಎಸ್. ಇರಾನಿ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಬ್ಲೂಟೂತ್ ಬಳಸಿ ಪರೀಕ್ಷೆ ಬರೆದ ಪ್ರಭು ಹಾಗೂ ಈ ಅಕ್ರಮಕ್ಕಾಗಿ ಪ್ರಮುಖ ಆರೋಪಿಗಳಿಗೆ ಹಣ ಕೊಟ್ಟಿದ್ದ ಶರಣಪ್ಪ ಅವರನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದರು. ಪ್ರಭು ಹೆಸರು ಪಿಎಸ್‌ಐ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಪ್ರಕಟವಾಗಿತ್ತು.

ಸಿಐಡಿ ತನಿಖಾಧಿಕಾರಿ ಶಂಕರಗೌಡ ಪಾಟೀಲ ವಿಚಾರಣೆ ನಡೆಸಿದ ವೇಳೆ ಪರೀಕ್ಷೆಯಲ್ಲಿ ಅಕ್ರಮ ನಡೆಸಿದ್ದರ ಬಗ್ಗೆ ತಂದೆ, ಮಗ ಇಬ್ಬರೂ ಒಪ್ಪಿಕೊಂಡಿದ್ದರು.

ADVERTISEMENT

ಮೂರನೇ ಜೆಎಂಎಫ್‌ ನ್ಯಾಯಾಲಯದ ನ್ಯಾಯಾಧೀಶ ಬಸವರಾಜ ನೇಸರಗಿ ಅವರು ಜಾಮೀನು ಅರ್ಜಿಯನ್ನು ತಿರಸ್ಕರಿಸಿದರು.

ಇದರೊಂದಿಗೆ ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾದ ಎಲ್ಲ ಆರೋಪಿಗಳ ಜಾಮೀನು ಅರ್ಜಿಗಳನ್ನೂ ತಿರಸ್ಕರಿಸಿದಂತಾಗಿದೆ. ಸಿಐಡಿ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಶಿವಶರಣಪ್ಪ ಹೋತಪೇಟ ಹಾಜರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.