ADVERTISEMENT

ಚುನಾವಣೆ ಸುಧಾರಣೆಗೆ ಯುವಜನರ ಆಸಕ್ತಿ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2022, 4:33 IST
Last Updated 1 ಡಿಸೆಂಬರ್ 2022, 4:33 IST
ಕಾರ್ಯಕ್ರಮದಲ್ಲಿ ಮಾತನಾಡಿದ ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ
ಕಾರ್ಯಕ್ರಮದಲ್ಲಿ ಮಾತನಾಡಿದ ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ   

ಕಲಬುರಗಿ: ನಗರದ ಡಾ. ಎಸ್‌.ಎಂ. ಪಂಡಿತ್ ರಂಗಮಂದಿರದಲ್ಲಿ ಬುಧವಾರ ‘ಚುನಾವಣೆ ವ್ಯವಸ್ಥೆಯಲ್ಲಿ ಸುಧಾರಣೆಗಳ ಅಗತ್ಯ’ ಕುರಿತು ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಯುವಜನರು ಆಸಕ್ತಿಯಿಂದ ಪಾಲ್ಗೊಂಡರು. ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂವಾದದಲ್ಲಿ ಯುವಕರು ಹಲವು ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆದುಕೊಂಡರು.

‘ಚುನಾವಣೆ ವ್ಯವಸ್ಥೆಯಲ್ಲಿ ಸಮಗ್ರ ಬದಲಾವಣೆ ಆಗಬೇಕು’ ಎಂದು ಒಬ್ಬರು ಪ್ರಸ್ತಾಪಿಸಿದರೆ, ‘ಕಠಿಣ ನಿಯ
ಮಾವಳಿಗಳನ್ನು ರೂಪಿಸಿದರೆ ಪರಿಸ್ಥಿತಿ ಸುಧಾರಿಸಬಹುದು’ ಎಂಬ ಸಲಹೆ ಇನ್ನೊ
ಬ್ಬರು ನೀಡಿದರು. ಹೀಗೆ ಒಬ್ಬೊಬ್ಬರು ಅಭಿಪ್ರಾಯಗಳನ್ನು ಹಂಚಿಕೊಂಡರು.

‘ಒಬ್ಬ ವ್ಯಕ್ತಿ ಒಂದು ಸ್ಥಾನದಲ್ಲಿ ಮಾತ್ರ ಸ್ಪರ್ಧಿಸಬೇಕು. ಮಹಿಳಾ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು. ಚುನಾವಣೆ ಸ್ಪರ್ಧೆಗೆ ಕನಿಷ್ಠ ವಿದ್ಯಾರ್ಹತೆಯ ಮಾನ
ದಂಡ ನಿಗದಿ ಮಾಡಬೇಕು. ಚುನಾವಣೆ
ಯಲ್ಲಿ ಗೆದ್ದು ಬಂದು ಸರಿಯಾಗಿ ಕೆಲಸ ಮಾಡದೇ ಇದ್ದವರನ್ನು ಕೆಳಗಿಳಿಸುವ ಅಧಿಕಾರ ಮತದಾರರಿಗೆ ಕೊಡಬೇಕು. ಮತದಾನದ ವಯಸ್ಸಿನ ಮಿತಿ ಇನ್ನೂ ಕಡಿಮೆ ಮಾಡಬೇಕು’ ಎಂಬ ಸಲಹೆಗಳು ವ್ಯಕ್ತವಾದವು.

ADVERTISEMENT

‘ಲೋಕಸಭೆ, ವಿಧಾನಸಭೆಗಳ ಚುನಾವಣೆಯನ್ನು ಏಕಕಾಲದಲ್ಲಿ ನಡೆಸಬೇಕು, ಅಭ್ಯರ್ಥಿಗಳು ಚುನಾವಣಾ ಪ್ರಣಾ
ಳಿಕೆಯ ಭರವಸೆಗಳನ್ನು ಒಂದು ವರ್ಷದೊಳಗೆ ಈಡೇರಿಸುವ ಒಪ್ಪಂದ ಪತ್ರ ಬರೆದು ಕೊಡಬೇಕು. ಭರವಸೆ ಈಡೇರಿ
ಸದಿದ್ದಲ್ಲಿ, ಅವರ ಅಧಿಕಾರ ಮೊಟಕುಗೊಳಿಸಬೇಕು’ ಎಂಬ ಸಲಹೆಗಳೂ ಕೆಲವರು ನೀಡಿದರು.

‘ಸ್ಥಳೀಯ ಸಂಸ್ಥೆಗಳ ಚುನಾವಣೆ ಸಕಾಲದಲ್ಲಿ ನಡೆಸಬೇಕು. ಮತದಾನದ ಮಹತ್ವ ಎಲ್ಲರಿಗೂ ತಿಳಿಪಡಿಸಬೇಕು, ಚುನಾವಣೆಗೆ ಸ್ಪರ್ಧಿಸುವ ಪ್ರತಿ ಅಭ್ಯರ್ಥಿಗಳಿಗೆ ಪ್ರವೇಶ ಪರೀಕ್ಷೆ ನಡೆಸಬೇಕು. ಅಭ್ಯರ್ಥಿಯೊಬ್ಬರ ಚುನಾವಣೆ ಮುನ್ನ ₹5 ಕೋಟಿ ಆಸ್ತಿ ವಿವರದ ಘೋಷಣೆ ಬಳಿಕ 5 ವರ್ಷದಲ್ಲಿ ₹50 ಕೋಟಿ ಆಗುವಷ್ಟು ಸಂಬಳ ಕೊಡುತ್ತೀರಾ’ ಎಂದು ಕೆಲವರು ಪ್ರಶ್ನಿಸಿದರು. ಸಾರ್ವಜನಿಕರು, ಪತ್ರಕರ್ತರು, ವಿದ್ಯಾರ್ಥಿಗಳು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಕಾನೂನು-ಪತ್ರಿಕೋದ್ಯಮ ವಿದ್ಯಾರ್ಥಿಗಳು ಸಲಹೆ ನೀಡಿದರು.

ಅಭಿಪ್ರಾಯಗಳಿಗೆ ಪ್ರತಿಕ್ರಿಯಿಸಿದ ವಿಶ್ವೇಶ್ವರ ಹೆಗಡೆ ಕಾಗೇರಿ, ‘ಪ್ರಜಾಪ್ರಭುತ್ವದ ಆಶಯ ಮತ್ತು ಹಾಗೂ ಸಂವಿಧಾನ ಬಲಪಡಿಸಲು ‘ನನ್ನ ಮತ ಮಾರಾಟಕ್ಕಿಲ್ಲ’ ಎಂಬ ಅಭಿಯಾನವನ್ನು ಎಲ್ಲರೂ ಕೈಗೊಳ್ಳಬೇಕು’ ಎಂದರು.

‘ಯುವಜನರು ಚುನಾವಣೆ ಸುಧಾರಣೆ ಮತ್ತು ಪ್ರಜಾಪ್ರಭುತ್ವ ಮೌಲ್ಯ ಎತ್ತಿ ಹಿಡಿಯುವಲ್ಲಿ ಪ್ರಜಾಪ್ರಭುತ್ವದ ಕಾವಲುಗಾರರಾಗಿ ಹೊರ
ಹೊಮ್ಮಬೇಕು. ಮತದ ಹಕ್ಕು ಚಲಾಯಿಸುವಂತೆ ತಿಳಿ ಹೇಳಬೇಕು’ ಎಂದರು.

ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ, ಕೆಕೆಆರ್‌ಟಿಸಿ ಅಧ್ಯಕ್ಷ ರಾಜಕುಮಾರ ಪಾಟೀಲ ತೇಲ್ಕೂರ, ಶಾಸಕರಾದ ಎಂ.ವೈ.ಪಾಟೀಲ, ಬಸವರಾಜ ಮತ್ತಿಮಡು, ವಿಧಾನ ಪರಿಷತ್ ಶಾಸಕ ಬಿ.ಜಿ.ಪಾಟೀಲ, ನಗರ ಪೊಲೀಸ್ ಆಯುಕ್ತ ಡಾ. ವೈ.ಎಸ್.ರವಿಕುಮಾರ, ಡಿಸಿಪಿ ಅಡ್ಡೂರು ಶ್ರೀನಿವಾಸಲು, ಆಂತರಿಕ ಭದ್ರತಾ ವಿಭಾಗದ ಎಸ್.ಪಿ. ಅರುಣ ರಂಗರಾಜ, ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ, ಹೆಚ್ಚುವರಿ ಪ್ರಾದೇಶಿಕ ಆಯುಕ್ತೆ ಕೆ.ಪ್ರಮೀಳಾ, ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗಳ್ಳಿ, ಗುಲಬರ್ಗಾ ವಿವಿ ಕುಲಪತಿ ಪ್ರೊ. ದಯಾನಂದ ಅಗಸರ್, ಸಹಾಯಕ ಆಯುಕ್ತೆ ಮಮತಾ ಕುಮಾರಿ, ತಹಶೀಲ್ದಾರ್ ಪ್ರಕಾಶ ಕುದರಿ, ಚುನಾವಣಾ ತಹಶೀಲ್ದಾರ್ ಮಹಾಂತೇಶ ಮುಡಬಿ ಇದ್ದರು.

‘ಶೇ 62ರಷ್ಟು ಆಧಾರ್–ಮತದಾರ ಚೀಟಿ ಜೋಡಣೆ’

‘ಮತದಾರರ ಗುರುತಿನ ಚೀಟಿಯನ್ನು ಆಧಾರ್ ಕಾರ್ಡ್‌ನೊಂದಿಗೆ ಜೋಡಣೆ ಮಾಡುವ ಅಭಿಯಾನ ಜಿಲ್ಲೆಯಲ್ಲಿ ಭರದಿಂದ ಸಾಗುತ್ತಿದ್ದು, ಶೇ 62ರಷ್ಟು ಮತದಾರರು ಜೋಡಣೆ ಮಾಡಿಸಿಕೊಂಡಿದ್ದಾರೆ’ ಎಂದು ಜಿಲ್ಲಾಧಿಕಾರಿ ಯಶವಂತ ಗುರುಕರ್ ಹೇಳಿದರು.

‘ಮತಗಟ್ಟೆ ಮಟ್ಟದ ಅಧಿಕಾರಿಗಳು(ಬಿಎಲ್‌ಒ) ಮನೆ ಮನೆಗೆ ತೆರಳಿ ಜೋಡಣೆ ಕಾರ್ಯದಲ್ಲಿ ನಿರತರಾಗಿದ್ದಾರೆ. ಕೆಲವರು 2–3 ಕಡೆ ಮತದಾನ ಗುರಿತಿನ ಚೀಟಿ, ಪಡಿತರ ಚೀಟಿ ಹೊಂದಿದ್ದಾರೆ. ಜೋಡಣೆ ಮಾಡಿಸಿದೆ. ಅದನ್ನು ಕಳೆದುಕೊಳ್ಳತ್ತೇವೆ ಎಂಬ ಭಯದಿಂದ ಮುಂದೆ ಬರುತ್ತಿಲ್ಲ’ ಎಂದರು.

*ಜಾತಿ, ಹಣಬಲ, ತೋಳ್ಬಲ, ಗುಂಪು ಶಕ್ತಿಯ ಬಲದಿಂದ ನಡೆಯುತ್ತಿರುವ ಚುನಾವಣೆಗಳು ಕೊನೆಗೊಂಡು ಜನರು ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಮತ ಚಲಾಯಿಸಿದಾಗ ಪಾರದರ್ಶಕ ಚುನಾವಣೆ ವ್ಯವಸ್ಥೆ ಸಾಕಾರಗೊಳ್ಳುತ್ತದೆ –ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಸಭಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.