ಕಲಬುರಗಿ: ‘ಬದುಕು ವಿಶೇಷವಾಗಿದ್ದರೆ ಮಾತ್ರ ಅಂಥವರಿಗೆ ಸಾರ್ವಜನಿಕವಾಗಿ ಗೌರವ ಸಿಗುತ್ತದೆ. ಅವರು ನಡೆದುಬಂದ ದಾರಿ ಇತರರಿಗೆ ಮಾದರಿಯಾಗಲೆಂದು ಜನ್ಮೋತ್ಸವ ಆಚರಣೆ ಮಾಡಲಾಗುತ್ತದೆ’ ಎಂದು ಶಾಸಕ ಎಂ.ವೈ. ಪಾಟೀಲ ಹೇಳಿದರು.
ಇಲ್ಲಿನ ಜಯನಗರದ ಅನುಭವ ಮಂಟಪದಲ್ಲಿ ಶನಿವಾರ ಎಸ್.ವಿ. ಹತ್ತಿ ಅಭಿನಂದನಾ ಸಮಿತಿ ಹಮ್ಮಿಕೊಂಡಿದ್ದ ಆರೋಗ್ಯ ಇಲಾಖೆಯ ನಿವೃತ್ತ ಅಧಿಕಾರಿ ಎಸ್.ವಿ. ಹತ್ತಿಯವರ 75ನೇ ಜನ್ಮದಿನೋತ್ಸವ ಸಂಭ್ರಮ ಮತ್ತು ಅಭಿನಂದನಾ ಸಮಾರಂಭದಲ್ಲಿ ‘ಶಿವನಂದಾ’ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.
‘ಎಸ್.ವಿ. ಹತ್ತಿ ಅವರು ನಡೆದುಬಂದ ದಾರಿ, ಜೀವನದ ಬಗ್ಗೆ ಪುಸ್ತಕ ತಂದಿದ್ದು ಶ್ಲಾಘನೀಯ’ ಎಂದರು.
ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರ ಎಂ. ಬಿದರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಯಾವುದೇ ನಿರೀಕ್ಷೆಗಳಿಲ್ಲದೆ ಆರೋಗ್ಯ ಇಲಾಖೆಯಲ್ಲಿ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿದ ಎಸ್.ವಿ. ಹತ್ತಿ ಅವರು ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಶರಣ ಜೀವನ ನಡೆಸುತ್ತಿದ್ದಾರೆ. ಪ್ರಾಮಾಣಿಕ, ಸರಳ ಮತ್ತು ನುಡಿದಂತೆ ನಡೆಯುವವರಿಗೆ ಎಂದೆಂದಿಗೂ ಗೌರವ ಸಿಗುತ್ತದೆ’ ಎಂದರು.
ಸಾನ್ನಿಧ್ಯ ವಹಿಸಿದ್ದ ಜೇರಟಗಿಯ ಮಹಾಂತ ಸ್ವಾಮೀಜಿ ಮಾತನಾಡಿ, ‘ಆಡಂಬರಕ್ಕೆ ಬೆಲೆ ಕೊಡುವ ಇಂದಿನ ಸಂದರ್ಭದಲ್ಲಿ ಎಸ್.ವಿ. ಹತ್ತಿ ಅವರು ಎಲೆಮರೆಯ ಕಾಯಿಯಂತೆ ಕರ್ತವ್ಯ ನಿರ್ವಹಿಸಿದ್ದಾರೆ. ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ’ ಎಂದು ಹೇಳಿದರು.
ಎಸ್.ವಿ.ಹತ್ತಿ ಮತ್ತು ಮಹಾನಂದಾ ಎಸ್.ಹತ್ತಿ ದಂಪತಿಯನ್ನು ಸನ್ಮಾನಿಸಲಾಯಿತು. ಬಸವ ಸಮಿತಿ ಅಧ್ಯಕ್ಷೆ ವಿಲಾಸವತಿ ಖೂಬಾ, ಅಭಿನಂದನಾ ಸಮಿತಿ ಅಧ್ಯಕ್ಷ ಅಪ್ಪಾರಾವ ಅಕ್ಕೋಣಿ ಮಾತನಾಡಿದರು.
ಕಾಶಪ್ಪ ವಾಂಜರಖೇಡ ಸೇರಿದಂತೆ ಸಾಧಕರು ಮತ್ತು ಕೃತಿಯ ಲೇಖಕರನ್ನು ಸನ್ಮಾನಿಸಲಾಯಿತು.
ಕಲ್ಯಾಣಪ್ಪ ಬಿರಾದಾರ ಪ್ರಾರ್ಥಿಸಿದರು. ‘ಶಿವನಂದಾ’ ಕೃತಿಯ ಸಂಪಾದಕ ಶರಣಬಸಪ್ಪ ವಡ್ಡನಕೇರಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಅಂಬಾರಾಯ ಮಡ್ಡೆ ನಿರೂಪಿಸಿದರು. ಡಾ.ಕೆ.ಎಸ್.ವಾಲಿ ವಂದಿಸಿದರು.
ಎಂಟು ಸಂಘ–ಸಂಸ್ಥೆಗಳು ಕಾರ್ಯಕ್ರಮಕ್ಕೆ ಸಹಕಾರ ನೀಡಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.