
ದ್ವಿತೀಯ ಪಿಯುಸಿ ಮುಗಿತಾ ಬಂತು, ಮುಂದೇನು? ಆರ್ಟ್ಸ್ ಮಾಡು, ಇಲ್ಲಾ ಸೈನ್ಸ್ ಮಾಡು... ಸಾಧ್ಯವಾದ್ರೆ ಕಾಮರ್ಸ್‌ಗೆ ಹೋಗು.. ಬೇಡಬೇಡ ಎಐ ಕೋರ್ಸ್ ಇದ್ರೆ ನೋಡು, ಒಳ್ಳೇ ಫ್ಯೂಚರ್ ಇದೆ. ಎಂಬೆಲ್ಲ ಮಾತುಗಳು ಪಿಯುಸಿ ಮುಗಿಯುತ್ತಿದ್ದಂತೆ ವಿದ್ಯಾರ್ಥಿಗಳಿಗೆ ಕೇಳಿಬರುವುದು ಸಾಮಾನ್ಯ. ನಿಮ್ ಮಗ/ ಮಗಳಿಗೆ ಈ ಕೋರ್ಸ್‌ಗೆ ಕಳ್ಸು... ಇಂತಹ ಸಲಹೆಗಳು ಕೂಡ ಪಾಲಕ–ಪೋಷಕರಿಗೂ ಬರುತ್ತವೆ. ಈ ಸಮಸ್ಯೆ, ಗೊಂದಲಗಳನ್ನು ಪರಿಹರಿಸುವ ಸಣ್ಣ ಪ್ರಯತ್ನ ಇಲ್ಲಿದೆ.
ಪಿಯುಸಿ ನಂತರ ಪದವಿ ಅಥವಾ ಯಾವುದಾದರೂ ಕೋರ್ಸ್ ಆಯ್ಕೆ ಮಾಡುವ ಮೊದಲು ವಿದ್ಯಾರ್ಥಿಗಳ ಆಸಕ್ತಿ ಯಾವ ವಿಷಯದಲ್ಲಿದೆ ಎಂಬುದು ಮುಖ್ಯವಾಗುತ್ತದೆ. ಅವರ ಅಭಿರುಚಿಯಂತೆ ಪದವಿ ಆಯ್ಕೆ ಮಾಡಿಕೊಂಡರೆ ಮುಂದಿನ ಉಜ್ವಲ ಭವಿಷ್ಯಕ್ಕೆ ದಾರಿಯಾಗುವುದರಲ್ಲಿ ಸಂಶಯವಿಲ್ಲ. ಪಾಲಕರ ಒತ್ತಡಕ್ಕೋ ಅಥವಾ ಮತ್ಯಾರ ಸಲಹೆಗೋ ಕಟ್ಟುಬಿದ್ದು ಕೋರ್ಸ್ ಆಯ್ಕೆ ಮಾಡಿಕೊಂಡರೆ ಎಡುವುದು ಸಹಜ. ಈ ಹಂತದಲ್ಲಿ ಸೂಕ್ತ ಆಲೋಚನೆ ಅಗತ್ಯ ಎಂದು ತಜ್ಞರು ಹೇಳುತ್ತಾರೆ.
ಹಲವರು ಮೊದಲು ಫಲಿತಾಂಶ ಬರಲಿ. ಬಳಿಕ ನೋಡೋಣ ಎಂದು ಕಾಯುತ್ತಾರೆ. ಇನ್ನು ಕೆಲವರು ಅದಾಗಲೇ ನಾನು ಇಂಥ ಪದವಿನೇ ಆಯ್ಕೆ ಮಾಡುತ್ತೇನೆ ಎಂದು ನಿರ್ಧರಿಸಿರುತ್ತಾರೆ. ಪಿಯುಸಿ ಪೂರ್ಣಗೊಳಿಸಿದ ಬಳಿಕ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿದ್ಯಾರ್ಥಿಗಳಿಗೆ ಹಲವು ಆಯ್ಕೆಗಳಿವೆ. ಪದವಿ ಮುಗಿಯುವಷ್ಟರಲ್ಲಿ ಸರ್ಕಾರಿ ಅಥವಾ ಖಾಸಗಿ ವಲಯಗಳಲ್ಲಿ ಉದ್ಯೋಗ ಪಡೆಯಬಹುದು ಅಥವಾ ಉನ್ನತ ಅಧ್ಯಯನದತ್ತ ಹೆಜ್ಜೆ ಹಾಕಬಹುದು.
ಕಲಾವಿಭಾಗ: ಪಿಯುಸಿ ಕಲಾ ವಿಭಾಗದ ನಂತರ ಬಿ.ಎ(ಇಂಗ್ಲಿಷ್, ಹಿಂದಿ, ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಮನೋವಿಜ್ಞಾನ, ಭೂಗೋಳ, ತತ್ವಶಾಸ್ತ್ರ ಮತ್ತು ಸಂಗೀತ), ಬಿಎಎಲ್‌ಎಲ್‌ಬಿ, ಪತ್ರಿಕೋದ್ಯಮ, ಹೋಟೆಲ್ ಮ್ಯಾನೇಜ್‌ಮೆಂಟ್, ಫ್ಯಾಷನ್ ಡಿಸೈನ್, ಡಿಜಿಟಲ್ ಮಾರ್ಕೇಟಿಂಗ್, ಇವೆಂಟ್ ಮ್ಯಾನೇಜ್‌ಮೆಂಟ್, ಬ್ಯಾಚುಲರ್ ಆಫ್ ಫೈನ್ ಆರ್ಟ್ಸ್ (ಬಿಎಫ್‌ಎ), ಬ್ಯಾಚುಲರ್ ಆಫ್ ಸೋಶಿಯಲ್ ವರ್ಕ್ (ಬಿಎಸ್‌ಡಬ್ಲ್ಯು) ಮತ್ತು ಬ್ಯಾಚುಲರ್ ಆಫ್ ಬಿಜಿನೆಸ್ ಅಡ್ಮಿನಿಸ್ಟ್ರೇಷನ್ (ಬಿಬಿಎ) ಮುಂತಾದ ಆಯ್ಕೆಗಳಿವೆ.
ಕಲಾವಿಭಾಗದ ವಿದ್ಯಾರ್ಥಿಗಳು ಪಿಯುಸಿ ಮುಗಿದ ತಕ್ಷಣ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಪೊಲೀಸ್ ಇಲಾಖೆಯ ಕಾನ್‌ಸ್ಟೆಬಲ್, ಭಾರತೀಯ ಭೂಸೇನೆ ಮತ್ತು ವಾಯುಪಡೆಯಲ್ಲಿ ‘ಅಗ್ನಿವೀರ್’ ಆಗಿ ಸೇರಬಹುದು. ರೈಲ್ವೆ ಇಲಾಖೆಯಲ್ಲಿ ಗ್ರೂಪ್ ‘ಸಿ’ ಮತ್ತು ‘ಡಿ’ ಹುದ್ದೆಗಳು, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಬ್ಯಾಂಕ್ ಕ್ಲರ್ಕ್ ಅಥವಾ ಇನ್ನಿತರ ಹುದ್ದೆಗಳಿಗೆ ಪರೀಕ್ಷೆ ಬರೆಯಬಹುದು. ಇನ್ನು ಖಾಸಗಿ ವಲಯದಲ್ಲಿ ಸಾಮಾಜಿಕ ಜಾಲತಾಣ ನಿರ್ವಹಣೆ ಮತ್ತು ಕಂಟೆಂಟ್ ರೈಟರ್ ಆಗಿ ಕೆಲಸ ಮಾಡಬಹುದು. ಹೋಟೆಲ್ ಮ್ಯಾನೇಜರ್, ಚೆಫ್ ಅಥವಾ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಉದ್ಯೋಗ ಪಡೆಯಬಹುದು. ಆಸಕ್ತಿ ಇದ್ದರೆ ಗ್ರಾಫಿಕ್ ಡಿಸೈನರ್ ಆದರೆ ಒಳ್ಳೆಯ ಸಂಬಳದ ಕೆಲಸ ಸಿಗುತ್ತದೆ. ಬಿ.ಇಡಿ ಕೋರ್ಸ್ ಮುಗಿಸಿ ಶಿಕ್ಷಕರ ಅರ್ಹತಾ ಪರೀಕ್ಷೆ ಬರೆದು ಉತ್ತೀರ್ಣರಾಗಿ ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಬಹುದು.
ವಿಜ್ಞಾನ ವಿಭಾಗ: ಪಿಯುಸಿ ವಿಜ್ಞಾನದ ನಂತರ ವಿದ್ಯಾರ್ಥಿಗಳು ಎಂಜಿನಿಯರಿಂಗ್ (ಬಿಇ, ಬಿ.ಟೆಕ್), ವೈದ್ಯಕೀಯ (ಎಂಬಿಬಿಎಸ್, ಬಿಡಿಎಸ್), ಫಾರ್ಮಸಿ (ಬಿ.ಫಾರ್ಮ್), ಕೃಷಿ, ಆರ್ಕಿಟೆಕ್ಚರ್, ಪ್ಯಾರಾಮೆಡಿಕಲ್ (ನರ್ಸಿಂಗ್, ಫಿಸಿಯೋಥೆರಪಿ), ಕಂಪ್ಯೂಟರ್ ಸೈನ್ಸ್ (ಬಿಸಿಎ), ಅಥವಾ ವಿಜ್ಞಾನ (ಬಿ.ಎಸ್‌ಸಿ - ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಗಣಿತ) ಸೇರಿ ಅನೇಕ ಆಯ್ಕೆಗಳಿವೆ. ಪಿಯುಸಿ ವಿಜ್ಞಾನ ಮುಗಿಸಿದ ನಂತರ ಶೈಕ್ಷಣಿಕ ಮತ್ತು ಉದ್ಯೋಗ ಮಾರುಕಟ್ಟೆಯಲ್ಲಿ ತಾಂತ್ರಿಕ, ವೈದ್ಯಕೀಯ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಅಪಾರ ಅವಕಾಶಗಳಿವೆ.
ವಾಣಿಜ್ಯ ವಿಭಾಗ: ಪಿಯುಸಿ ವಾಣಿಜ್ಯ ನಂತರ ಬಿ.ಕಾಂ, ಬಿಬಿಎ, ಸಿಎ, ಸಿಎಸ್, ಸಿಎಂಎ, ಬಿಬಿಎ, ಎಲ್‌ಎಲ್‌ಬಿಯಂತಹ ಪದವಿ ಮತ್ತು ವೃತ್ತಿಪರ ಕೋರ್ಸ್‌ಗಳನ್ನು ಆಯ್ಕೆ ಮಾಡಬಹುದು. ಇವು ಅಕೌಂಟಿಂಗ್, ಬ್ಯಾಂಕಿಂಗ್, ಹಣಕಾಸು, ನಿರ್ವಹಣೆ ಮತ್ತು ಕಾನೂನು ಕ್ಷೇತ್ರಗಳಲ್ಲಿ ವೃತ್ತಿಜೀವನಕ್ಕೆ ನೆರವಾಗುತ್ತವೆ. ಅಲ್ಲದೇ ಡಿಪ್ಲೊಮಾ ಮತ್ತು ಸರ್ಟಿಫಿಕೇಟ್ ಕೋರ್ಸ್‌ಗಳು ಕೌಶಲಗಳನ್ನು ಹೆಚ್ಚಿಸಿ ಉದ್ಯೋಗ ಪಡೆಯಲು ಸಹಕಾರಿಯಾಗುತ್ತವೆ.
ವಾಣಿಜ್ಯ ಕೋರ್ಸ್ ಮುಗಿಸಿದ ವಿದ್ಯಾರ್ಥಿಗಳಿಗೆ ಹಣಕಾಸು, ಬ್ಯಾಂಕಿಂಗ್, ಡಿಜಿಟಲ್ ತಂತ್ರಜ್ಞಾನ ಮತ್ತು ನಿರ್ವಹಣಾ ಕ್ಷೇತ್ರಗಳಲ್ಲಿ ಅತ್ಯುತ್ತಮ ಅವಕಾಶಗಳಿವೆ. ಈ ಕ್ಷೇತ್ರಗಳಲ್ಲಿ ವೃತ್ತಿ ಆರಂಭಿಸಲು ಪಿಯುಸಿ ನಂತರ ನಿರ್ದಿಷ್ಟ ವೃತ್ತಿಪರ ಕೋರ್ಸ್‌ಗಳನ್ನು ಮಾಡುವುದು ಅವಶ್ಯಕ. ಲೆಕ್ಕ ಪರಿಶೋಧಕರಾಗುವ ಕನಸು ಇರುವ ವಿದ್ಯಾರ್ಥಿಗಳು ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ (ಐಸಿಎಐ) ನಡೆಸುವ ಸಿಎ ಪರೀಕ್ಷೆಗೆ ತಯಾರಿ ನಡೆಸಬಹುದು. ಚಾರ್ಟರ್ಡ್ ಅಕೌಂಟೆಂಟ್ (ಸಿಎ)ನಲ್ಲಿ ಆಡಿಟಿಂಗ್, ತೆರಿಗೆ ಮತ್ತು ಹಣಕಾಸು ಸಲಹೆಗಾರರಾಗಿ ಕೆಲಸ ಮಾಡಬಹುದು. ಇದು ವಾಣಿಜ್ಯ ವಿಭಾಗದ ಅತ್ಯಂತ ಗೌರವಾನ್ವಿತ ಮತ್ತು ಹೆಚ್ಚಿನ ವೇತನವಿರುವ ಹುದ್ದೆಯಾಗಿದೆ.
ಕೊನೆಯದಾಗಿ ವಿದ್ಯಾರ್ಥಿಗಳಿಗೆ ಸಲಹೆ: ನೀವು ಮುಂದೆ ಏನಾಗಬಯಸುತ್ತೀರಿ? ಜೀವನದ ಗುರಿ ಏನು? ಅನ್ನುವುದಕ್ಕೆ ಸಂಬಂಧಿಸಿದಂತೆ ಕೋರ್ಸ್‌ಗಳಿರುವ ಕಾಲೇಜುಗಳ ಬಗ್ಗೆ ತಿಳಿದುಕೊಳ್ಳಿ. ಕಾಲೇಜು/ ಶಿಕ್ಷಣ ಸಂಸ್ಥೆಗೆ ಸ್ವತಃ ಭೇಟಿ ನೀಡಿ ಸಂಪೂರ್ಣ ಮಾಹಿತಿ ಪಡೆದು ಪ್ರವೇಶ ಪಡೆಯಿರಿ.
‘ವಿಜ್ಞಾನ ವಿಭಾಗದವರಲ್ಲಿ ಗೊಂದಲ ಸಾಮಾನ್ಯ’
‘ಎಸ್‌ಎಸ್‌ಎಲ್‌ಸಿ ಘಟ್ಟಕ್ಕಿಂತ ಪ್ರಸ್ತುತ ಪಿಯುಸಿ ವಿದ್ಯಾರ್ಥಿ ಜೀವನದ ಮಹತ್ವದ ಹಂತವಾಗಿದೆ. ಪಿಯುಸಿಯಲ್ಲಿಯೇ ವಿದ್ಯಾರ್ಥಿಗಳು ಕಲಾ ವಿಜ್ಞಾನ ವಾಣಿಜ್ಯ ವಿಷಯ ಆಯ್ಕೆ ಮಾಡಿರುತ್ತಾರೆ. ಈ ಆಯ್ಕೆಯ ಜೊತೆಗೆ ನಾನು ಮೆಡಿಕಲ್ ಮಾಡಬೇಕು ಎಂಜಿನಿಯರಿಂಗ್ ಮಾಡಬೇಕು... ಎಂಬ ಕನಸು ಸಂಕಲ್ಪ ಇಟ್ಟುಕೊಂಡಿರುತ್ತಾರೆ. ಆದರೂ ಸಾಮಾನ್ಯವಾಗಿ ಗೊಂದಲ ಬರುವುದೇ ವಿಜ್ಞಾನ ವಿಭಾಗದವರಿಗೆ’ ಎಂದು ಎಂಎಸ್‌ಐ ಪಿಯು ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ನರೇಂದ್ರ ಬಡಶೇಷಿ ಹೇಳುತ್ತಾರೆ. ‘ಕಲಾ ವಿಭಾಗದವರು ಇತಿಹಾಸ ಅರ್ಥಶಾಸ್ತ್ರ ರಾಜ್ಯಶಾಸ್ತ್ರ ಮಾನವಶಾಸ್ತ್ರ ಸೇರಿ ಇನ್ನಿತರ ವಿಷಯಗಳನ್ನು ತೆಗೆದುಕೊಂಡಿರುತ್ತಾರೆ. ಹಾಗಾಗಿ ಅವರಿಗೆ ಅಷ್ಟು ಗೊಂದಲ ಇರುವುದಿಲ್ಲ. ಇನ್ನು ವಾಣಿಜ್ಯದವರಿಗೂ ಗೊಂದಲ ಇರುವುದಿಲ್ಲ ಎನ್ನಬಹುದು’ ಎಂದರು. ‘ಪಿಯುಸಿ ವಿಜ್ಞಾನ ಆದ ಮೇಲೆ ಮೆಡಿಕಲ್ ಎಂಜಿನಿಯರಿಂಗ್ ಸಿಗಲಿಲ್ಲವಾದರೆ ಅವರಿಗೆ ಬೇಸಿಕ್ ಸೈನ್ಸ್‌ಸ್(ಭೌತಶಾಸ್ತ್ರ ರಸಾಯನಶಾಸ್ತ್ರ ಗಣಿತ ಸಸ್ಯಶಾಸ್ತ್ರ ಪ್ರಾಣಿಶಾಸ್ತ್ರ) ಆಯ್ಕೆ ಉಳಿಯುತ್ತದೆ. ಆದರೆ ಈಗ ಕೇಂದ್ರೀಯ ವಿಶ್ವವಿದ್ಯಾಲಯ ಮತ್ತು ಬೇರೆಡೆ ಎಂಜಿನಿಯರಿಂಗ್ ಸಮನಾದ ಕೆಲವು ಇಂಟಿಗ್ರೇಟೆಡ್ ಕೋರ್ಸ್ ಕೂಡ ಇವೆ. ಮೆಡಿಕಲ್ ಎಂಜಿನಿಯರಿಂಗ್ ಸಿಕ್ಕರೂ ಬಡತನದಿಂದ ಹೋಗಲು ಸಾಧ್ಯವಾಗದವರು ಬಿಎಸ್‌ಸಿ ಮಾಡಿದರೆ ಉತ್ತಮ. ಮುಂದೆ ಬಿ.ಇಡಿ ಎಂಎಸ್‌ಸಿ ಮಾಡಬಹುದು. ಏಕೆಂದರೆ ಯಾವುದೇ ಕಾಲೇಜುಗಳಲ್ಲಿ ಇಂಗ್ಲಿಷ್ ಭೌತಶಾಸ್ತ್ರ ಗಣಿತ ಸಸ್ಯಶಾಸ್ತ್ರ ಪ್ರಾಣಿಶಾಸ್ತ್ರ ಉಪನ್ಯಾಸಕರು ಸಿಗುತ್ತಿಲ್ಲ’ ಎನ್ನುತ್ತಾರೆ ಅವರು. ‘ಪಿಯುಸಿ ವಿಜ್ಞಾನ ವಿಭಾಗದವರು ರಕ್ಷಣಾ ಸೇವೆಯಲ್ಲಿನ ವಾಯುಪಡೆಯಲ್ಲಿ ಏರ್‌ಮನ್ ಟೆಕ್ನಿಕಲ್ ಕೂಡ ಮಾಡಬಹುದು. ನೌಕಾಪಡೆಗೂ ಹೋಗಬಹುದು. ಬೆಂಗಳೂರಿನ ಕ್ರೈಸ್ಟ್ ಕಾಲೇಜು ಸೇರಿದಂತೆ ಕೆಲವು ಕಾಲೇಜುಗಳು ಬಿಎ ಬಿಎಸ್‌ಸಿ ಬಿಕಾಂನಲ್ಲಿ ನಾಗರಿಕ ಸೇವೆಗಳ ಪರೀಕ್ಷೆ ಸಲುವಾಗಿ ಮೊದಲ ಸೆಮಿಸ್ಟರ್‌ನಿಂದ 6ನೇ ಸಮಿಸ್ಟರ್‌ವರೆಗೆ ಎರಡೆರಡು ತಿಂಗಳು ಕೋರ್ಸ್ ಮಾಡಿಸುತ್ತಾರೆ. ಇದಲ್ಲದೇ ಕಲಬುರಗಿಯಲ್ಲೇ ಪೇಂಟಿಂಗ್ ಡ್ಯಾನ್ಸ್ ಸಂಗೀತ ಫೈನ್ ಆರ್ಟ್ಸ್ ಲೈಬ್ರರಿ ಸೈನ್ಸ್ ಎಐ ಮಾಡಬಹುದು’ ಎಂಬುದು ಬಡಶೇಷಿ ಅವರ ಸಲಹೆ.
ಜನಸೇವೆಗೆ ವೈದ್ಯಕೀಯ ಕ್ಷೇತ್ರ
ವೈದ್ಯಕೀಯ ಪದವಿ ಪಡೆದು ಜನಸೇವೆ ಜೊತೆಗೆ ಬದುಕು ಕಟ್ಟಿಕೊಳ್ಳಬೇಕು ಎನ್ನುವ ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳು ನೀಟ್‌ಗೆ ತಯಾರಿ ನಡೆಸಬಹುದು. ಇತರ ಕೋರ್ಸ್ ಪ್ರವೇಶಕ್ಕೆ ಕೆ–ಸಿಇಟಿ ದೇಶದ ಉನ್ನತ ಸಂಸ್ಥೆಗಳಲ್ಲಿ ಎಂಜಿನಿಯರಿಂಗ್ ಓದಲು ಬಯಸುವವರು ಜೆಇಇಗೆ ತಯಾರಿ ನಡೆಸಬಹುದು. ನೀಟ್‌ನಲ್ಲಿ ಉತ್ತಮ ರ‍್ಯಾಂಕ್ ಪಡೆದವರು ಎಂಬಿಬಿಎಸ್ ಸೀಟು ಪಡೆದುಕೊಳ್ಳಬಹುದು. ರ‍್ಯಾಂಕಿಂಗ್ ಆಧಾರದ ಮೇಲೆ ಬಿಡಿಎಸ್ ಕೋರ್ಸ್ ಸಹ ಆಯ್ಕೆ ಮಾಡಬಹುದು. ಇದಲ್ಲದೆ ವಿಜ್ಞಾನ ವಿದ್ಯಾರ್ಥಿಗಳು ಬಿಇ ಬಿ–ಟೆಕ್ ಬಿಸಿಎ ಮತ್ತು ಬಿ.ಆರ್ಕ್ ಕೋರ್ಸ್‌ಗಳನ್ನೂ ಮಾಡಬಹುದು. ಬಿ.ಎಸ್ಸಿ ಪ್ಯಾರಾ ಮೆಡಿಕಲ್ ಪದವಿ ಮಾಡಿದವರಿಗೆ ಉತ್ತಮ ಉದ್ಯೋಗಾವಕಾಶಗಳಿವೆ. ಈ ಪದವಿಯಡಿ ಆಪರೇಷನ್ ಥಿಯೇಟರ್ ಟೆಕ್ನಾಲಜಿ ಡಯಾಲಿಸಿಸ್ ಟೆಕ್ನಾಲಜಿ ಹಾಸ್ಪಿಟಲ್ ಮ್ಯಾನೇಜ್‌ಮೆಂಟ್ ರೇಡಿಯಾಲಜಿ ಲ್ಯಾಬೋರೇಟರಿ ಟೆಕ್ನಾಲಜಿ ಇಮೇಜಿಂಗ್ ಟೆಕ್ನಾಲಜಿ ಅನಸ್ತೇಷಿಯಾ ಟೆಕ್ನಾಲಜಿ ಕಾರ್ಡಿಯಾಕ್ ಟೆಕ್ನಾಲಜಿ ಕೋರ್ಸ್ ಅನ್ನು ತೆಗೆದುಕೊಳ್ಳಬಹುದು. ಈ ಕೋರ್ಸ್‌ಗಳನ್ನು ಮುಗಿಸಿದವರು ಆಸ್ಪತ್ರೆ ಪ್ರಯೋಗಾಲಯ ಹಾಗೂ ಸೈನ್ಯದಲ್ಲೂ ಕೆಲಸ ಮಾಡಬಹುದು. ಬಿ–ಫಾರ್ಮಾ ಮುಗಿಸಿದವರಿಗೆ ಔಷಧ ಕ್ಷೇತ್ರದಲ್ಲಿ ಬೇಡಿಕೆ ಇರುವುದರಿಂದ ಇದನ್ನೂ ಮಾಡಬಹುದಾಗಿದೆ. ಬಿ.ಎಸ್ಸಿ ಪದವಿ ಮಾಡಿ ಮಾಹಿತಿ ತಂತ್ರಜ್ಞಾನ ಡೇರಿ ಟೆಕ್ನಾಲಜಿ ಬಯೋಟೆಕ್ನಾಲಜಿ ಕೃಷಿ ತೋಟಗಾರಿಕೆ ಮೀನುಗಾರಿಕೆ ಆಹಾರ ತಂತ್ರಜ್ಞಾನ ಪರಿಸರ ವಿಜ್ಞಾನ ವಿಧಿ ವಿಜ್ಞಾನ ಭೂ ವಿಜ್ಞಾನ ನರ್ಸಿಂಗ್ ಫಿಸಿಯೋಥೆರಪಿ ಜೈವಿಕ ತಂತ್ರಜ್ಞಾನ ಹೋಟೆಲ್ ಮ್ಯಾನೇಜ್‌ಮೆಂಟ್ ಯೋಗ ಏವಿಯೇಷನ್ ಇಂಟಿರಿಯರ್ ಡಿಸೈನ್ ಫುಡ್ ಟೆಕ್ನಾಲಜಿ ಕೋರ್ಸ್‌ಗಳನ್ನು ತೆಗೆದುಕೊಳ್ಳಬಹುದು. ಇದಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕೆ–ಸಿಇಟಿ ನಡೆಸುತ್ತದೆ.
ಕೃತಕ ಬುದ್ಧಿಮತ್ತೆ ಎಂಬ ಮಾಯೆ
ಇತ್ತೀಚಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ) ಸದ್ದು ಮಾಡುತ್ತಿದೆ. ಶಿಕ್ಷಣ ಆರೋಗ್ಯ ವಿಜ್ಞಾನ ಸಾಫ್ಟವೇರ್ ಕೃಷಿ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಕಾಲಿಟ್ಟಿದೆ. ಕೃತಕ ಬುದ್ಧಿಮತ್ತೆ ಭವಿಷ್ಯತ್ತಿನ ಯುಗವೆಂದೇ ಬಣ್ಣಿಸಲಾಗುತ್ತಿದೆ. ಹಾಗಾಗಿ ಪಿಯುಸಿ ನಂತರ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಅತ್ಯುತ್ತಮ ಶೈಕ್ಷಣಿಕ ಆಯ್ಕೆಗಳಿವೆ. ವಿಜ್ಞಾನ ವಿಭಾಗದ (ಪಿಸಿಎಂ) ವಿದ್ಯಾರ್ಥಿಗಳು ಬಿಇ/ ಬಿಟೆಕ್ ಇನ್ ಎಐ ಮತ್ತು ಮಷಿನ್ ಲರ್ನಿಂಗ್ ಕಂಪ್ಯೂಟರ್ ಸೈನ್ಸ್‌ನ ಮೂಲಭೂತ ವಿಷಯಗಳ ಜೊತೆಗೆ ಎಐ ಬಗ್ಗೆ ವಿಶೇಷ ಅಧ್ಯಯನ ನಡೆಸಬಹುದು. ವಾಣಿಜ್ಯ ಅಥವಾ ಕಲಾ ವಿಭಾಗದ ವಿದ್ಯಾರ್ಥಿಗಳಿಗೂ (ಗಣಿತ ವಿಷಯವಿದ್ದರೆ ಸುಲಭ) ಕೆಲವು ಆಯ್ಕೆಗಳಿವೆ. ಬಿಸಿಎ ಇನ್ ಎಐ ಸಾಫ್ಟ್‌ವೇರ್ ಅಪ್ಲಿಕೇಶನ್ ಮತ್ತು ಕೋಡಿಂಗ್ ಮೂಲಕ ಎಐ ಕಲಿಯಲು ಇದು ಉತ್ತಮ. ಬಿಸಿಎ ಇನ್ ಡೇಟಾ ಸೈನ್ಸ್ ಆ್ಯಂಡ್ ಎಐ ದತ್ತಾಂಶ ವಿಶ್ಲೇಷಣೆ ಮತ್ತು ಎಐ ಮಾದರಿಗಳ ಬಗ್ಗೆ ಆಳವಾದ ಜ್ಞಾನ ನೀಡುತ್ತದೆ. ಎಐ ಕ್ಷೇತ್ರದ ಕೌಶಲಗಳನ್ನು ಕಲಿಯಲು ಡಿಪ್ಲೊಮಾ ಮತ್ತು ಪ್ರಮಾಣಪತ್ರ ಕೋರ್ಸ್‌ಗಳು ಕೂಡ ಲಭ್ಯ ಇವೆ. ಡಿಪ್ಲೊಮಾ ಇನ್ ಎಐ ಆ್ಯಂಡ್ ಮಷೀನ್ ಲರ್ನಿಂಗ್ ಆನ್‌ಲೈನ್ ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಮಾಡಬಹುದು.
ಜೆಇಇ ಪರೀಕ್ಷಾ ತರಬೇತಿ
ದೇಶದ ಐಐಟಿ ಐಐಎಂ ಎನ್ಐಟಿ ಹಾಗೂ ಜಿಎಫ್‌ಟಿಐಗಳಲ್ಲಿ ಎಂಜಿನಿಯರಿಂಗ್ ಹಾಗೂ ವಾಸ್ತುಶಿಲ್ಪ ಕೋರ್ಸ್‌ಗಳ ಪ್ರವೇಶಕ್ಕೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಜೆಇಇ (ಜಂಟಿ ಪ್ರವೇಶ ಪರೀಕ್ಷೆ) ನಡೆಸುತ್ತದೆ. ಇದು ಎರಡು ಹಂತಗಳಲ್ಲಿ ನಡೆಯುತ್ತದೆ. ಮೇನ್ ಹಾಗೂ ಅಡ್ವಾನ್ಸ್ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಹಲವಾರು ಸಂಸ್ಥೆಗಳು ಈ ಪರೀಕ್ಷೆಗೆ ತರಬೇತಿ ನೀಡುತ್ತವೆ. ಕೆಲ ಸರ್ಕಾರಿ ಇಲಾಖೆಗಳೂ ಉಚಿತವಾಗಿ ತರಬೇತಿ ಕೊಡಿಸುತ್ತವೆ. ಈ ಕೋರ್ಸ್‌ನಲ್ಲಿ ಓದುತ್ತಿರುವವರಿಗೆ ಪ್ರೋತ್ಸಾಹ ಧನವನ್ನೂ ನೀಡುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.