ADVERTISEMENT

ಲಂಚ ಪಡೆದ ಸಹಕಾರ ಸಂಘದ ವ್ಯವಸ್ಥಾಪಕನಿಗೆ ಜೈಲು

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2020, 3:58 IST
Last Updated 16 ಸೆಪ್ಟೆಂಬರ್ 2020, 3:58 IST
   

ಕಲಬುರ್ಗಿ: ರೈತರೊಬ್ಬರಿಗೆ ಉದ್ದಿನ ಬೆಳೆ ಮಾರಾಟ ಮಾಡಿದ ಚೆಕ್ ವಿತರಿಸಲು ₹ 15 ಸಾವಿರ ಲಂಚ ಪಡೆದ ಆರೋಪ ಸಾಬೀತಾಗಿದ್ದರಿಂದ ಚಿತ್ತಾಪುರದ ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ವ್ಯವಸ್ಥಾಪಕ ಬಸವರಾಜ ಗುಳೇದಗೆ ಜಿಲ್ಲಾ ಪ್ರಧಾನ ಹಾಗು ವಿಶೇಷ ಸೆಷನ್ಸ್ ನ್ಯಾಯಾಧೀಶ ಆರ್.ಜೆ. ಸತೀಶ ಸಿಂಗ್ ಅವರು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.

ಚಿತ್ತಾಪುರದ ಅಂತಯ್ಯ ಸಾತಪ್ಪ ಕಲಾಲ ಅವರು ಸಂಘಕ್ಕೆ ಮಾರಾಟ ಮಾಡಿದ ಉದ್ದಿನ ಚೆಕ್‍ಗಳನ್ನು ಕೇಳಲು ಹೋದಾಗ ವ್ಯವಸ್ಥಾಪಕ ಬಸವರಾಜ ಚೆಕ್ಕಿಗೆ ತಲಾ ₹ 5 ಸಾವಿರದಂತೆ ಮೂರು ಚೆಕ್‍ಗಳಿಗೆ ಒಟ್ಟು ₹ 15 ಸಾವಿರ ಲಂಚವನ್ನು ನೀಡಲು ಒತ್ತಾಯಿಸಿದ್ದರು.
ಈ ಬಗ್ಗೆ ಅಂತಯ್ಯ ನೀಡಿದ ದೂರಿನ ಆಧಾರದ ಲೋಕಾಯುಕ್ತ ಪೊಲೀಸ್ ಇನ್‌ಸ್ಪೆಕ್ಟರ್ ಜೇಮ್ಸ್ ಮೆನೇಜಸ್ ಅವರು 18 ಮಾರ್ಚ್‌ 2013ರಂದು ಪ್ರಕರಣ ದಾಖಲು ಮಾಡಿಕೊಂಡು, ಅಂದೇ ಹಣ ಪಡೆಯುವ ಸಂದರ್ಭದಲ್ಲಿ ಬಲೆಗೆ ಕೆಡವಿದರು.

ನಂತರ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಆರ್.ಜೆ. ಸತೀಶ ಸಿಂಗ್ ರವರು ವರು ಕಲಂ. 7 ಪಿ.ಸಿ ಆಕ್ಟ್‌ನಡಿ 3 ವರ್ಷ ಶಿಕ್ಷೆ ₹ 5 ಸಾವಿರ ದಂಡ, ಜೊತೆಗೆ ಲಂಚ ಪ್ರತಿಬಂಧಕ ಕಾಯ್ದೆ ಅಡಿಯಲ್ಲಿ 3 ವರ್ಷ ಶಿಕ್ಷೆ ₹ 5 ಸಾವಿರ ದಂಡ ವಿಧಿಸಿ ತೀರ್ಪು ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.