ADVERTISEMENT

ಕಲಬುರಗಿ | ಚುರುಕು ಪಡೆದ ಬಿಸಿಲು; ಹಿಗ್ಗಿದ ಹಿಂಗಾರು ಬಿತ್ತನೆ ಗುರಿ

ಜಿಲ್ಲೆಯಲ್ಲಿ 2.38 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ನಿರೀಕ್ಷೆ

ಬಸೀರ ಅಹ್ಮದ್ ನಗಾರಿ
Published 22 ಅಕ್ಟೋಬರ್ 2025, 3:38 IST
Last Updated 22 ಅಕ್ಟೋಬರ್ 2025, 3:38 IST
ಕಲಬುರಗಿ ಜಿಲ್ಲೆಯ ಚಿಂಚೋಳಿ ಹೊರವಲಯದ ಐನೋಳ್ಳಿ ರಸ್ತೆಯ ಬದಿಯ ಹೊಲದಲ್ಲಿ ಜೋಳ ಬಿತ್ತನೆ ಬಳಿಕ ರೈತರು ಎತ್ತುಗಳಿಂದ ರಂಟೆ ಹೊಟೆ ಹೊಡೆದ ನೋಟ ಮಂಗಳವಾರ ಕಂಡುಬಂತು  –ಪ್ರಜಾವಾಣಿ ಚಿತ್ರ
ಕಲಬುರಗಿ ಜಿಲ್ಲೆಯ ಚಿಂಚೋಳಿ ಹೊರವಲಯದ ಐನೋಳ್ಳಿ ರಸ್ತೆಯ ಬದಿಯ ಹೊಲದಲ್ಲಿ ಜೋಳ ಬಿತ್ತನೆ ಬಳಿಕ ರೈತರು ಎತ್ತುಗಳಿಂದ ರಂಟೆ ಹೊಟೆ ಹೊಡೆದ ನೋಟ ಮಂಗಳವಾರ ಕಂಡುಬಂತು  –ಪ್ರಜಾವಾಣಿ ಚಿತ್ರ   

ಕಲಬುರಗಿ: ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ ಮುಂಗಾರು ಬೆಳೆಗಳು ಬಹುತೇಕ ಕೈಕೊಟ್ಟಿದ್ದು, ಬಿಸಿಲು ಚುರುಕು ಪಡೆದಂತೆ ಇದೀಗ ಹಿಂಗಾರು ಬಿತ್ತನೆ ವೇಗ ಪಡೆಯುತ್ತಿದೆ. ಅಲ್ಲಲ್ಲಿ ಜೋಳ, ಕಡಲೆ ಬಿತ್ತನೆ ಶುರುವಾಗಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಲ ಹಿಂಗಾರು ಬಿತ್ತನೆಯ ಗುರಿ ಹಿಗ್ಗಿದ್ದು, ಒಟ್ಟು 2.38 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ನಿರೀಕ್ಷಿಸಲಾಗಿದೆ. ಇದರಲ್ಲಿ 21 ಸಾವಿರ ಹೆಕ್ಟೇರ್‌ಗಳಷ್ಟು ನೀರಾವರಿ ಹಾಗೂ 2.17 ಲಕ್ಷ ಹೆಕ್ಟೇರ್‌ಗಳಷ್ಟು ಮಳೆಯಾಶ್ರಿತ ಪ್ರದೇಶ ಸೇರಿದೆ.

ಜಿಲ್ಲೆಯಾದ್ಯಂತ ಆಗಸ್ಟ್‌ ಹಾಗೂ ಸೆಪ್ಟೆಂಬರ್‌ನಲ್ಲಿ ವ್ಯಾಪಕ ಮಳೆ ಸುರಿದಿತ್ತು. ಆ ಅವಧಿಯಲ್ಲಿ ವಾಡಿಕೆಯಂತೆ 331 ಮಿಮೀ ಮಳೆಯಾಗಬೇಕಿತ್ತು. ಆದರೆ, 217 ಮಿಮೀ ಹೆಚ್ಚುವರಿ ಒಟ್ಟು 548 ಮಿಮೀ ಮಳೆ ಸುರಿದಿತ್ತು. ಒಟ್ಟು ಅಂದಾಜು 3.24 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದಿದ್ದ ಬೆಳೆಗಳು ಮಳೆ ಪಾಲಾಗಿದ್ದವು. ರೈತರು ಎರಡೆರಡು ಸಲ ಬಿತ್ತನೆ ಮಾಡಿದ್ದರೂ, ಬೆಳೆಗಳು ಕೈಗೆ ಹತ್ತಿಲ್ಲ. ಹೀಗಾಗಿ ಹೊಲ–ಗದ್ದೆಗಳು ಖಾಲಿ ಬಿದ್ದಿವೆ. ಹಿಂಗಾರಿನಲ್ಲಾದರೂ ಹಿಡಿ ಧಾನ್ಯಗಳು ಸಿಗುವ ನಿರೀಕ್ಷೆಯಲ್ಲಿ ರೈತರು ಬಿತ್ತನೆ ನಡೆಸುವ ವಾತಾವರಣ ಕಂಡುಬರುತ್ತಿದೆ. ಇದರಿಂದ ಸಹಜವಾಗಿಯೇ ಜಿಲ್ಲೆಯಲ್ಲಿ ಹಿಂಗಾರು ಬಿತ್ತನೆ ಪ್ರದೇಶ ಹೆಚ್ಚುವ ನಿರೀಕ್ಷೆಗಳಿವೆ.

ADVERTISEMENT

ಜಿಲ್ಲೆಯಲ್ಲಿ ಕಳೆದ ವರ್ಷ(2024) 1.72 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಹಿಂಗಾರು ಬಿತ್ತನೆ ನಡೆದಿತ್ತು. ಅದಕ್ಕೂ ಹಿಂದಿನ ವರ್ಷ ಅಂದರೆ, 2023ರಲ್ಲಿ 1.72 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿಯಿತ್ತು. ಈ ಸಲ 1.60 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿ ಅಂದಾಜಿಸಲಾಗಿತ್ತು. 

ಯಾವುದು ಎಷ್ಟು?

ಹಿಂಗಾರು ಅವಧಿಯಲ್ಲಿ ಭತ್ತ, ಜೋಳ, ಮೆಕ್ಕೆಜೋಳ, ಗೋಧಿ, ರಾಗಿ, ಸಜ್ಜೆಯಂತಹ ಏಕದಳ ಧಾನ್ಯಗಳನ್ನು ಒಟ್ಟು 99,835 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಇದರಲ್ಲಿ 12,259 ಹೆಕ್ಟೇರ್‌ನಷ್ಟು ನೀರಾವರಿ ಹಾಗೂ 87,576 ಹೆಕ್ಟೇರ್‌ನಷ್ಟು ಮಳೆಯಾಶ್ರಿತ ಪ್ರದೇಶ ಒಳಗೊಂಡಿದೆ.

ಕಡಲೆ, ಉದ್ದು, ಹೆಸರು, ಅಲಸಂದೆ, ಅವರೆ, ಹುರುಳಿಯಂಥ ಬೇಳೆಕಾಳುಗಳನ್ನು (ದ್ವಿದಳ ಧಾನ್ಯ) ಒಟ್ಟು 1,09,862 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಅದರಲ್ಲಿ 4,300 ಹೆಕ್ಟೇರ್‌ ನೀರಾವರಿ ಹಾಗೂ 1,05,562 ಹೆಕ್ಟೇರ್‌ ಮಳೆ ಆಶ್ರಿತ ಪ್ರದೇಶವಿದೆ. 

ಕುಸುಬೆ, ಶೇಂಗಾ, ಸೂರ್ಯಕಾಂತಿಯಂಥ ಎಣ್ಣೆಕಾಳು ಬೆಳೆಗಳನ್ನು ಒಟ್ಟು 26,913 ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದು, ಅದರಲ್ಲಿ 3,948 ಹೆಕ್ಟೇರ್‌ ನೀರಾವರಿ ಹಾಗೂ 22,965 ಹೆಕ್ಟೇರ್‌ ಮಳೆಯಾಶ್ರಿತ ಪ್ರದೇಶವಿದೆ.

ತಗ್ಗಿದ ಕಾಲಾವಕಾಶ:

‘ಜಿಲ್ಲೆಯಲ್ಲಿ ಒಂದೆಡೆ ಆಗಾಗ ಮಳೆ ಸುರಿಯುತ್ತಿದೆ. ಮತ್ತೊಂದೆಡೆ ಹೊಲಗಳಲ್ಲಿನ ತೇವಾಂಶವೂ ಪೂರ್ತಿ ಆರಿಲ್ಲ. ಈ ನಡುವೆ ಜೋಳ ಬಿತ್ತನೆಯ ಅವಧಿ ಬಹುತೇಕ ಮುಗಿದಂತಾಗಿದೆ. ಹೀಗಾಗಿ ಈ ಸಲ ಜೋಳ ಬಿತ್ತನೆಗೆ ಹಿನ್ನಡೆಯಾಗುವ ಸಾಧ್ಯತೆಯಿದೆ. ಅಕ್ಟೋಬರ್‌ ಅಂತ್ಯದ ತನಕ ಕಡಲೆ, ಕುಸುಬೆ, ಶೇಂಗಾ, ಗೋಧಿ ಬಿತ್ತನೆಗೆ ಅವಕಾಶವಿದೆ’ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

‘ಬಿತ್ತನೆ ಬೀಜ ರಸಗೊಬ್ಬರ ದಾಸ್ತಾನು’

‘ಜಿಲ್ಲೆಯಲ್ಲಿ ಹಿಂಗಾರಿನಲ್ಲಿ ರೈತರು ಕಡಲೆ ಶೇಂಗಾ ಹೆಚ್ಚಿನ ಪ್ರಮಾಣದಲ್ಲಿ ಬಿತ್ತುವ ನಿರೀಕ್ಷೆಗಳಿವೆ. ಅದರಂತೆ  ಜಿಲ್ಲೆಯಲ್ಲಿ 29629 ಕ್ವಿಂಟಲ್‌ ಕಡಲೆ ಬಿತ್ತನೆ ಬೀಜ ಬೇಡಿಕೆಯಿದೆ. ಅದರಲ್ಲಿ 21832 ಕ್ವಿಂಟಲ್‌ ಪೂರೈಕೆಯಾಗಿದ್ದು 15490 ಕ್ವಿಂಟಲ್‌ ಬಿತ್ತನೆ ಬೀಜ ಮಾರಾಟವಾಗಿದೆ. 9784 ಕ್ವಿಂಟಲ್‌ಗಳಷ್ಟು ಶೇಂಗಾ ಬಿತ್ತನೆ ಬೀಜಕ್ಕೆ ಬೇಡಿಕೆಯಿದ್ದು 5200 ಕ್ವಿಂಟಲ್ ಪೂರೈಕೆಯಾಗಿದೆ. ಅದರಲ್ಲಿ 4200 ಕ್ವಿಂಟಲ್‌ ರೈತರಿಗೆ ವಿತರಿಸಲಾಗಿದೆ. ಜಿಲ್ಲೆಯಲ್ಲಿ 473 ಕ್ವಿಂಟಲ್‌ ಜೋಳದ ಬಿತ್ತನೆ ಬೀಜಕ್ಕೆ ಬೇಡಿಕೆಯಿದ್ದು 215 ಕ್ವಿಂಟಲ್‌ ಪೂರೈಕೆಯಾಗಿದೆ. ಅದರಲ್ಲಿ 98 ಕ್ವಿಂಟಲ್‌ಗಳಷ್ಟು ಮಾರಾಟವಾಗಿದೆ’ ಎಂದು ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್‌ ‘ಪ್ರಜಾವಾಣಿ’ಗೆ ತಿಳಿಸಿದರು. ‘ಜಿಲ್ಲೆಯಲ್ಲಿ ಹಿಂಗಾರು ಅವಧಿಯಲ್ಲಿ ಯೂರಿಯಾ ಡಿಎಪಿ ಸೇರಿದಂತೆ ವಿವಿಧ ಬಗೆಯ ಒಟ್ಟು 39496 ಮೆಟ್ರಿಕ್‌ ಟನ್‌ ರಸಗೊಬ್ಬರಕ್ಕೆ ಬೇಡಿಕೆ ನಿರೀಕ್ಷಿಸಲಾಗಿದೆ. ಆ ಪೈಕಿ ಅ.17ರಂತೆ  23997 ಮೆಟ್ರಿಕ್‌ ಟನ್‌ ರಸಗೊಬ್ಬರ ವಿತರಿಸಲಾಗಿದೆ. ಇನ್ನೂ 23494 ಮೆ.ಟನ್‌ ರಸಗೊಬ್ಬರ ದಾಸ್ತಾನಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.