ADVERTISEMENT

ಹುಚ್ಚು ನಾಯಿ ಕಡಿತದಿಂದ ಅಸ್ವಸ್ಥಗೊಂಡಿದ್ದ ಹಸುವಿಗೆ ಮತ್ತೆ ಕಚ್ಚಿದ ನಾಯಿಗಳು!

ಪಾಲ್ತ್ಯಾ ತಾಂಡಾದಲ್ಲಿ‌ ಮನೆ ಮಾಡಿದ ಆತಂಕ‌

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2025, 5:12 IST
Last Updated 30 ಆಗಸ್ಟ್ 2025, 5:12 IST
<div class="paragraphs"><p>ಕಲಬುರಗಿ ಜಿಲ್ಲೆಯ ಚಿಂಚೋಳಿ ‌ತಾಲ್ಲೂಕಿನ ಪಾಲ್ತ್ಯಾ ತಾಂಡಾದಲ್ಲಿ ಹುಚ್ಚು ಬಾಧಿಸಿರುವ ಹಸು ಕಟ್ಟಿ ಹಾಕಿರುವುದು</p></div>

ಕಲಬುರಗಿ ಜಿಲ್ಲೆಯ ಚಿಂಚೋಳಿ ‌ತಾಲ್ಲೂಕಿನ ಪಾಲ್ತ್ಯಾ ತಾಂಡಾದಲ್ಲಿ ಹುಚ್ಚು ಬಾಧಿಸಿರುವ ಹಸು ಕಟ್ಟಿ ಹಾಕಿರುವುದು

   

ಚಿಂಚೋಳಿ (ಕಲಬುರಗಿ‌ ಜಿಲ್ಲೆ): ತಾಲ್ಲೂಕಿನ ಪಾಲ್ತ್ಯಾ ತಾಂಡಾದಲ್ಲಿ ಹುಚ್ಚು ನಾಯಿ ಕಡಿತಕ್ಕೆ‌ ಒಳಗಾಗಿದ್ದ ಹಸುವಿನಲ್ಲಿ‌ ಈಗ ಹುಚ್ಚು ಕಾಣಿಸಿಕೊಂಡಿದೆ.

ಅಸ್ವಸ್ಥ ಹಸು ತಾಂಡಾದ ತುಂಬೆಲ್ಲಾ ಎಲ್ಲೆಂದರಲ್ಲಿ‌ ಓಡಾಡಿ ಗೋಡೆಗೆ ಹಣೆ ಗುದ್ದಿಕೊಂಡಿದೆ. ಇದರಿಂದ ಕೊಂಬು‌ಮುರಿದುಕೊಂಡಿದ್ದು ರಕ್ತಸ್ರಾವವಾಗಿದೆ. ಹೀಗೆ ರಕ್ತಸಿಕ್ತ ಹಸುವನ್ನು ಹಿಂಬಾಲಿಸಿದ ತಾಂಡಾದ ಹತ್ತಾರು‌ ನಾಯಿಗಳು ಹಸುವಿನ‌ ರಕ್ತ ನೆಕ್ಕಿವೆ. ಜತೆಗೆ ಹಸುವಿನ‌ ಮೇಲೂ ದಾಳಿ‌ ಮಾಡಿದ ಘಟನೆ ನಡೆದಿದ್ದು ತಾಂಡಾದಲ್ಲಿ‌ ಆತಂಕ‌ ಮನೆ ಮಾಡಿದೆ ಎಂದು ತಾಂಡಾದ ಮುಖಂಡ ತಾರಾಸಿಂಗ್ ದಳಪತಿ ತಿಳಿಸಿದ್ದಾರೆ.

ADVERTISEMENT

ತಾಂಡಾದ ನಿವಾಸಿ ಪ್ರೇಮಸಿಂಗ್ ರಾಠೋಡ ಅವರ ಹಸುವಿಗೆ ಹುಚ್ಚು ಹಿಡಿದಿದೆ. ತಾಂಡಾದ ತುಂಬಾ ಓಡಾಡುತ್ತಿದ್ದ ಹಸುವನ್ನು ತಾಂಡಾ ಜನರು ಶನಿವಾರ ಬೆಳಿಗ್ಗೆ ಕಟ್ಟಿ ಹಾಕಿ ನಾಯಿಗಳನ್ನು ಓಡಿಸಿದ್ದಾರೆ. ಆದರೆ, ಹುಚ್ಚು ಹಿಡಿದ ಅಸ್ವಸ್ಥ ಹಸುವಿನ ರಕ್ತ ಸೇವಿಸಿದ ನಾಯಿಗಳಿಂದ ರೋಗ ವ್ಯಾಪಕವಾಗಿ ಹರಡುವ ಆತಂಕ ಸ್ಥಳೀಯರಿಗೆ ಕಾಡುತ್ತಿದೆ. ಈ ಪ್ರಯುಕ್ತ ತಾಲ್ಲೂಕು ಆಡಳಿತ ತಾಂಡಾದ ಎಲ್ಲಾ ನಾಯಿಗಳನ್ನು ಕೊಲ್ಲಬೇಕೆಂದು ಅವರು ಒತ್ತಾಯಿಸಿದ್ದಾರೆ.

ದನ‌ಕರುಗಳು‌ ಮನೆ ಮನೆ ಮುಂದೆಯೇ ಕಟ್ಟುತ್ತೇವೆ. ಅಸ್ವಸ್ಥ ನಾಯಿಗಳು‌ ದನಗಳಿಗೆ ಕಚ್ಚಿದರೆ ಮತ್ತು‌ ಜನರಿಗೆ ಕಚ್ಚಿದರೆ ಏನು‌ ಮಾಡಬೇಕು. ವಿಷಯ ಗಂಭೀರವಾಗಿ ತೆಗೆದುಕೊಳ್ಳಬೇಕೆಂದು ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

ಉಪ ವಿಭಾಗಾಧಿಕಾರಿ‌ ಗಮನ ಸೆಳೆದ ಮಾಜಿ ಸಂಸದ: ವಿಷಯ ತಿಳಿದ ಮಾಜಿ ಸಂಸದ ಡಾ. ಉಮೇಶ ಜಾಧವ ಅವರು ಘಟನೆಯ ಕುರಿತು ಸೇಡಂ ಕಂದಾಯ ಉಪ ವಿಭಾಗಾಧಿಕಾರಿ ಪ್ರಭುರೆಡ್ಡಿ ಅವರ ಗಮನ ಸೆಳೆದಿದ್ದು, ನಾಯಿಗಳ ಹಾವಳಿ ನಿಯಂತ್ರಣಕ್ಕೆ ಹಾಗೂ ರೇಬಿಸ್ ಹರಡಂತೆ ಮುನ್ನೆಚ್ಚರಿಕೆ ವಹಿಸುವಂತೆ ಕೋರಿದ್ದಾರೆ.

ನಾನು ತಾಂಡಾಕ್ಕೆ ತೆರಳುತ್ತಿದ್ದೇನೆ: ನಾಯಿ‌ ಹಚ್ಚಿದ್ದರಿಂದ ಹಸು‌ ಅಸ್ವಸ್ಥಗೊಂಡಿದ್ದು ಅದರಲ್ಲಿ ರೇಬಿಸ್ ಲಕ್ಷಣಗಳು ಗೋಚರಿಸಿವೆ. ಸಲಗರ ಬಸಂತಪುರ ಗ್ರಾಮೀಣ ಪಶು‌ ಆಸ್ಪತ್ರೆಯ ವೈದ್ಯಾಧಿಕಾರಿ ತೃಪ್ತಿ ಕಟ್ಟಿಮನಿ ಹಸುವಿಗೆ ಎರಡು ದಿನಗಳಿಂದ ಚಿಕಿತ್ಸೆ‌ ನೀಡಿದ್ದಾರೆ. ಈ‌ ನಡುವೆ ಕಟ್ಟಿ ಹಾಕಿದ್ದ ಹಸು ಬಿಚ್ಚಿಕೊಂಡು ಹೋಗಿ ಬೇರೆ ಹಸುಗಳೊಂದಿಗೆ‌ ಕಾದಾಡಿದೆ. ತಾಂಡಾದಲ್ಲಿ ಕೆಲ ನಾಯಿಗಳಲ್ಲೂ ರೋಗದ ಲಕ್ಷಣ ಗೋಚರಿಸಿದ ಕುರಿತು ಸ್ಥಳೀಯರು ನನ್ನ‌ ಗಮನಕ್ಕೆ ತಂದಿದ್ದಾರೆ. ನಾನು ತೆರಳುತ್ತಿದ್ದೇನೆ ಎಂದು ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಸಹಾಯಕ‌ ನಿರ್ದೇಶಕ‌ ಡಾ. ಮಲ್ಲಿಕಾರ್ಜುನ ಗುತ್ತೇದಾರ 'ಪ್ರಜಾವಾಣಿ'ಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.