ವಾಡಿ: ಕಲಬುರಗಿ- ಯಾದಗಿರಿ ರಾಷ್ಟ್ರೀಯ ಹೆದ್ದಾರಿ 150ರ ವಾಡಿ ನಿಜಾಮ್ ಗೇಟ್‌ಗೆ ರೈಲ್ವೆ ಮೇಲು ಸೇತುವೆ ನಿರ್ಮಿಸುವ ಕಾಮಗಾರಿ ವಿಳಂಬ ಹಿನ್ನೆಲೆಯಲ್ಲಿ ಟ್ರಾಫಿಕ್ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ. ತಾಸುಗಟ್ಟಲೆ ವಾಹನಗಳು ನಿಲುಗಡೆಯಿಂದ ಟ್ರಾಫಿಕ್ ಸಮಸ್ಯೆ, ಸಮಯ ಮತ್ತು ಇಂಧನ ವ್ಯರ್ಥವಾಗುತ್ತಿದ್ದು ಜತೆಗೆ ಕಿರಿಕಿರಿ ಉಂಟಾಗುತ್ತಿದೆ.
ಕಳೆದ 5 ವರ್ಷಗಳಿಂದ ಕಾಮಗಾರಿ ನನೆಗುದಿಗೆ ಬಿದ್ದಿದ್ದು ಪ್ರಯಾಣಿಕರ ನಿತ್ಯ ಸಂಕಷ್ಟಕ್ಕೆ ಕಾರಣವಾಗುತ್ತಿದೆ. ಪ್ರತಿ 10 ನಿಮಿಷಕ್ಕೊಮ್ಮೆ ರೈಲ್ವೆ ಗೇಟ್ ಹಾಕುತ್ತಿದ್ದು ಎರಡೂ ಕಡೆ ನೂರಾರು ವಾಹನಗಳು ಸಾಲುಗಟ್ಟಿ ನಿಲ್ಲುತ್ತಿವೆ. ರೋಗಿಗಳು ಸಕಾಲಕ್ಕೆ ಆಸ್ಪತ್ರೆಗೆ ತೆರಳಲು ಸಾಧ್ಯವಾಗದೇ ನರಳುವಂತಾಗಿದೆ. ವಿದ್ಯಾರ್ಥಿಗಳಿಗೂ ರೈಲ್ವೆ ಗೇಟ್ ದುಸ್ವಪ್ನದಂತೆ ಕಾಡುತ್ತಿದೆ.
ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಮಂತ್ರಾಲಯವು ರಾಜ್ಯ ಸರ್ಕಾರದ ಮನವಿ ಮೇರೆಗೆ ಮೇಲ್ಸೇತುವೆ ಬಾಕಿ ಕಾಮಗಾರಿ ಪೂರ್ಣಗೊಳಿಸಲು ₹150 ಕೋಟಿ ಮಂಜೂರು ಮಾಡಿ ಒಂದು ವರ್ಷ ಗತಿಸಿದೆ. ಆದರೆ ಕಾಮಗಾರಿ ಮಾತ್ರ ಆರಂಭಗೊಂಡಿಲ್ಲ.
ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿದ್ದರಿಂದ ಕಲಬುರಗಿ– ಯಾದಗಿರಿ– ಬೆಂಗಳೂರು– ಮುಂಬೈ ಮತ್ತು ಹೈದರಾಬಾದ್ ಮಧ್ಯೆ ಸಾವಿರಾರು ಸಂಖ್ಯೆಯಲ್ಲಿ ನಿತ್ಯ ವಾಹನಗಳು ಓಡಾಡುತ್ತವೆ. ದಿನಕ್ಕೆ ಕನಿಷ್ಠ 50ಕ್ಕೂ ಅಧಿಕ ಬಾರಿ ರೈಲ್ವೆ ಗೇಟ್ ಬಂದ್ ಮಾಡುವುದರಿಂದ, ಹಲವು ಬಾರಿ ಆಂಬುಲೆನ್ಸ್‌ನಲ್ಲಿ ಇದ್ದವರೂ ತೊಂದರೆ ಅನುಭವಿಸಿದ್ದಾರೆ. ಗೂಡ್ಸ್ ರೈಲುಗಳ ಸಂಖ್ಯೆ ಈಚೆಗೆ ಹೆಚ್ಚಿದ್ದು ಒಂದು ಗಾಡಿ ದಾಟಲು ಕನಿಷ್ಠ 20 ನಿಮಿಷ ಸಮಯ ಬೇಕು. ಕೆಲವೊಮ್ಮೆ 2-3 ಗಾಡಿಗಳು ಬರುವುದರಿಂದ ತಾಸುಗಟ್ಟಲೆ ಸಮಯ ಹಿಡಿದು ಸಕಾಲಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಹಲವರು ಬೇಸರ ವ್ಯಕ್ತಪಡಿಸುತ್ತಾರೆ. ಕೂಡಲೇ ಮೇಲುಸೇತುವೆ ಕಾಮಗಾರಿ ಆರಂಭಿಸಬೇಕು ಎನ್ನುವುದು ಆಗ್ರಹವಾಗಿದೆ.
ನಿಜಾಮ್ ಗೇಟ್‌ಗೆ ಬೇಕಿದೆ ಮೇಲುಸೇತುವೆ ಕೇಂದ್ರ ಸರ್ಕಾರದಿಂದ ₹150 ಕೋಟಿ ಮಂಜೂರು ಟೆಂಡರ್ ಪ್ರಕ್ರಿಯೆ ಮುಗಿದರೂ ಆರಂಭವಾಗದ ಕಾಮಗಾರಿ
ಬಾಕಿ ಉಳಿದ ಸೇತುವೆ ಕಾಮಗಾರಿ ಪೂರ್ಣಗೊಳಿಸಲು ಟೆಂಡರ್ ಪ್ರಕ್ರಿಯೆ ಈಗಾಗಲೇ ಮುಗಿದಿದ್ದು ಗುತ್ತಿಗೆದಾರರು ಕೆಲಸ ಆರಂಭಿಸಬೇಕು. ಶೀಘ್ರ ಕಾಮಗಾರಿ ಆರಂಭಕ್ಕೆ ಸೂಚಿಸಲಾಗುವುದು
-ಮಹಮ್ಮದ್ ಇಬ್ರಾಹಿಂ ಎಇಇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಲಬುರಗಿ
ಹಗಲಲ್ಲಿ ಗೂಡ್ಸ್ ರೈಲು ನಿರ್ಬಂಧಿಸಿ ಹಗಲು ವೇಳೆ ಪ್ರತಿ 10 ನಿಮಿಷಕ್ಕೊಮ್ಮೆ ಗೇಟ್ ಹಾಕುತ್ತಿರುವುದು ವಾಹನ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತಿದೆ. ಹೀಗಾಗಿ ಮೇಲುಸೇತುವೆ ಕಾಮಗಾರಿ ಮುಗಿಯುವರೆಗೂ ಹಗಲಲ್ಲಿ ಗೂಡ್ಸ್‌ರೈಲುಗಳ ಓಡಾಟಕ್ಕೆ ಕಡಿವಾಣ ಹಾಕಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.