ADVERTISEMENT

ಕಲಬುರ್ಗಿ | ಧಾರಾಕಾರ ಮಳೆ: ದಸ್ತಾಪುರ ಜಲಾವೃತ

ಪ್ರವಾಹ: ಹಲವು ಗ್ರಾಮಗಳಿಗೆ ಸಂಪರ್ಕ ಕಡಿತ

​ಪ್ರಜಾವಾಣಿ ವಾರ್ತೆ
Published 24 ಜುಲೈ 2020, 15:52 IST
Last Updated 24 ಜುಲೈ 2020, 15:52 IST
ಕಮಲಾಪುರ ತಾಲ್ಲೂಕಿನ ನವನಿಹಾಳ ಹಳ್ಳಕ್ಕೆ ಪ್ರವಾಹ ಉಂಟಾಗಿದ್ದನ್ನು ಸಾರ್ವಜನಿಕರು ವೀಕ್ಷಿಸಿದರು
ಕಮಲಾಪುರ ತಾಲ್ಲೂಕಿನ ನವನಿಹಾಳ ಹಳ್ಳಕ್ಕೆ ಪ್ರವಾಹ ಉಂಟಾಗಿದ್ದನ್ನು ಸಾರ್ವಜನಿಕರು ವೀಕ್ಷಿಸಿದರು   

ಕಮಲಾಪುರ: ತಾಲ್ಲೂಕಿನಾದ್ಯಂತ ಶುಕ್ರವಾರ ನಾಲ್ಕು ಗಂಟೆಗಳ ಕಾಲ ಧಾರಾಕಾರ ಮಳೆಯಾಗಿದ್ದು, ಹಳ್ಳ, ನಾಲೆಗಳು ತುಂಬಿಕೊಂಡಿವೆ. ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆಗಳ ಮೇಲೆ ನೀರು ಬಂದು ನಿಂತಿದ್ದು, ಪ್ರವಾಹ ಸ್ಥಿತಿ ಉಂಟಾಗಿದೆ.

ನಡುಗಡ್ಡೆಯಾದ ದಸ್ತಾಪುರ: ದಸ್ತಾಪುರ ಗ್ರಾಮದ ಹಿಂದೆ ಗಂಡೋರಿ ನಾಲಾ, ಮುಂದೆ ಹಳ್ಳ ಎರಡಕ್ಕೂ ಪ್ರವಾಹ ಉಂಟಾಗಿದೆ. ಗ್ರಾಮದಲ್ಲೆಲ್ಲ ನೀರು ಹೊಕ್ಕು ಕೆಲವು ಮನೆಗಳಿಗೂ ಧಕ್ಕೆಯಾಗಿದೆ. ನೂರಾರು ಎಕರೆಯಲ್ಲಿ ಬೆಳೆದ ಕಬ್ಬು, ಹೆಸರು, ತೋಟಗಾರಿಕಾ ಬೆಳೆಗಳಲ್ಲಿ ಸಂಪೂರ್ಣ ಕೆರೆಯಂತೆ ನೀರು ಆವರಿಸಿವೆ. ರೈತ ವೀರಣ್ಣ ಕೋಟಿ ಅವರ ತೋಟದಲ್ಲಿರುವ ಕೃಷಿ ಪರಿಕರಗಳು ಪ್ರವಾಹಕ್ಕೆ ಕೊಚ್ಚಿ ಹೋಗಿವೆ. ಪ್ರವಾಹದಿಂದಾಗಿ ಸೇತುವೆ ಮುಳುಗಿದ್ದು, ಸಂಜೆ 7 ರವರೆಗೆ ಗ್ರಾಮದ ಸಂಪರ್ಕ ಕಡಿತಗೊಂಡಿತ್ತು.

ನವನಿಹಾಳ ಸೇತುವೆ ಮುಳುಗಡೆ: ಮಳೆಗೆ ನವನಿಹಾಳ ಗ್ರಾಮದ ಸೇತುವೆ ಮುಳುಗಿ ಸಂಚಾರ ಸ್ಥಗಿತ ಗೊಂಡಿತು. ಬೆಳಕೋಟಾ, ನವನಿಹಾಳ ಗ್ರಾಮಗಳಿಗೆ ತೆರಳುವ ಜನ ಸುಮಾರು 4 ಗಂಟೆಗಳ ಕಾಲ ಕಾಯಬೇಕಾಯಿತು. ಕುದಮೂಡ ಗ್ರಾಮದಲ್ಲೂ ಎರಡೂ ಹಳ್ಳಗಳಿಗೆ ಪ್ರವಾಹ ಉಂಟಾಗಿ ಸಂಪರ್ಕ ಕಡಿತಗೊಂಡಿತ್ತು. ಎರಡೂ ಹಳ್ಳದ ಪ್ರವಾಹದಿಂದ ದಂಡೆಗಿರುವ ನೂರಾರು ಎಕರೆ ಜಮೀನಿನಲ್ಲಿ ಬೆಳೆ ಹಾನಿಯಾಗಿದೆ. ಮಣ್ಣು ಕೊಚ್ಚಿ ಹೋಗಿದೆ ಎಂದು ರೈತರು ಅಳಲು ತೋಡಿಕೊಂಡರು. ಹಿಪ್ಪರಗಾ-ಕಲಕುಟಗಾ ಸೇತುವೆ ಮೇಲು ಪ್ರವಾಹ ಉಂಟಾಗಿ ಸಂಚಾರ ಸ್ಥಗಿತಗೊಂಡಿತು.

ADVERTISEMENT

ಓಕಳಿ- ವರನಾಳ ಸೇತುವೆ ಮೇಲೆ ಪ್ರವಾಹ: ಓಕಳಿ-ವರನಾಳ ಮಧ್ಯದ ಸೇತುವೆ ಮೇಲೆ ಪ್ರವಾಹ ಉಂಟಾಗಿ ಸಂಚಾರ ಸ್ಥಗಿತಗೊಂಡಿತ್ತು. ವರನಾಳ, ಕಲಖೋರಾ, ಚಿಕ್ಕನಾಗಾಂವ, ಬಸವಕಲ್ಯಾಣ ಸಂಚರಿಸುವ ತಡೆಯಲಾಗಿತ್ತು. ಇದರಿಂದ ಪ್ರಯಾಣಿಕರು ಪರದಾಡಿದರು.

ಈಚೆಗೆ ಸುರಿದ ಮಳೆಯಿಂದ ಕೆರೆ, ಕಟ್ಟೆ, ಹಳ್ಳ, ಕೊಳ್ಳಗಳೆಲ್ಲ ತುಂಬಿದ್ದವು. ಎಲ್ಲಡೆಯ ಸೇತುವೆ, ಬ್ರಿಜ್ ಕಂ ಬ್ಯಾರೇಜ್ ಮೇಲಿಂದ ನೀರು ಹರಿದಿವೆ. ಗೊಬ್ಬರವಾಡಿ, ಸೊಂತ, ಹೊನ್ನಳ್ಳಿ, ಪಟವಾದ, ಕಲಮೂಡ ಮತ್ತಿತರ ಗ್ರಾಮಗಳ ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.