
ಶಹಾಬಾದ್: ಬಿಸಿಲು ಮತ್ತು ಬಿಸಿಗಾಳಿಯಿಂದ ತತ್ತರಿಸಿದ್ದ ಜನರಿಗೆ ಬುಧವಾರ ರಾತ್ರಿ ಸುರಿದ ಮಳೆ ತಂಪೆರೆಯಿತು.
ಬಿಸಿಲ ಧಗೆಯಿಂದ ಬೇಸತ್ತಿದ್ದ ಜನರು, ಮಳೆರಾಯನ ನಿರೀಕ್ಷೆಯಲ್ಲಿದ್ದರು. ಬುಧವಾರ ಮಧ್ಯರಾತ್ರಿ ಗುಡುಗು, ಸಿಡಿಲು ಆರ್ಭಟದೊಂದಿಗೆ ಬಿರುಸಿನ ಮಳೆ ಸುರಿಯಿತು. ಬಿಸಿಗಾಳಿಯು ತಂಪಾಯಿತು ಎಂದು ಜನರು ನಿಟ್ಟುಸಿರು ಬಿಟ್ಟರು.
ಮಧ್ಯರಾತ್ರಿ ಸುರಿದ ಧಾರಾಕಾರ ಮಳೆಯಿಂದ ನಗರದ ಚರಂಡಿಗಳು ತುಂಬಿ, ರಸ್ತೆ ಹಾಗೂ ಅಕ್ಕಪಕ್ಕದ ಮನೆಗಳಲ್ಲಿ ನೀರು ನುಗ್ಗಿದೆ. ಹನುಮಾನ ನಗರದ ಬಾಲಕರ ವಸತಿ ನಿಲಯದ ಆವರಣಕ್ಕೆ ನುಗ್ಗಿದ ಚರಂಡಿಯ ನೀರು ಮತ್ತು ತ್ಯಾಜ್ಯವಸ್ತು ಸೇರಿಕೊಂಡು ಗಬ್ಬೆದ್ದು ನಾರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನಗರದಲ್ಲಿ ಎಲ್ಲೆಂದರಲ್ಲಿ ಚರಂಡಿಗಳು ತುಂಬಿ ರಸ್ತೆಯ ಮೇಲೆ ನೀರು ಹರಿದುಬಂದ ಪರಿಣಾಮ ಮೂಗು ಮುಚ್ಚಿಕೊಂಡು ಓಡಾಡುವಂತಾಯಿತು. ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟು ಮಾಡಿದೆ. ಅದರ ಬಗ್ಗೆ ನಗರಸಭೆ ಮುಂಜಾಗ್ರತೆ ಕ್ರಮ ವಹಿಸಬೇಕಾಗಿರುವುದು ಅವಶ್ಯ ಎಂದು ಜನರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.