ಕಲಬುರಗಿ: ಚಿತ್ತಾಪುರ ತಾಲ್ಲೂಕಿನ ನಾಲವಾರದ ಕೋರಿಸಿದ್ಧೇಶ್ವರ ಮಹಾಸಂಸ್ಥಾನ ಮಠದ ಪ್ರಸ್ತುತ ಪೀಠಾಧಿಪತಿ ಸಿದ್ಧತೋಟೇಂದ್ರ ಶಿವಾಚಾರ್ಯ ಸ್ವಾಮೀಜಿ ಜನ್ಮದಿನೋತ್ಸವ ಹಾಗೂ ಹಿಂದಿನ ಪೀಠಾಧಿಪತಿ ತೋಟೇಂದ್ರ ಶಿವಯೋಗಿಗಳ ಪುಣ್ಯಾರಾಧನಾ ಮಹೋತ್ಸವವು ಆಯುಧಪೂಜೆಯ ದಿನದಂದು ಸಹಸ್ರಾರು ಭಕ್ತರ ಮಧ್ಯೆ ಶ್ರದ್ಧಾಭಕ್ತಿಯಿಂದ ನಡೆಯಿತು.
ಭೀಮಾ ನದಿ ಪ್ರವಾಹ, ಅತಿವೃಷ್ಟಿಯಿಂದ ರೈತರು ಸಂಕಷ್ಟದಲ್ಲಿದ್ದ ಕಾರಣ, ಅದ್ಧೂರಿ ಆಚರಣೆಗೆ ಸಿದ್ಧತೋಟೇಂದ್ರ ಸ್ವಾಮೀಜಿ ತಡೆಯೊಡ್ಡಿದ್ದರೂ ಬುಧವಾರ ಪ್ರಾತಃ ಕಾಲದಿಂದಲೇ ತಂಡೋಪತಂಡಗಳಾಗಿ ಸಹಸ್ರಾರು ಭಕ್ತರು ಶ್ರೀಮಠಕ್ಕೆ ಬಂದು, ಸ್ವಾಮೀಜಿಗೆ ಗುರುವಂದನೆ ಸಲ್ಲಿಸಿದರು.
ಮಠದ ಈ ಹಿಂದಿನ ಪೀಠಾಧಿಪತಿ ತೋಟೇಂದ್ರ ಶಿವಯೋಗಿಗಳ ಪುಣ್ಯಸ್ಮರಣೋತ್ಸವ ಪ್ರಯುಕ್ತ ರಾತ್ರಿ ಕರ್ತೃ ಗದ್ದುಗೆಗೆ ವಿಶೇಷ ಪೂಜೆ, ಮಹಾಮಂಗಳಾರತಿ ನೆರವೇರಿತು.
ಸಿದ್ಧತೋಟೇಂದ್ರ ಸುವರ್ಣ ಭವನದಲ್ಲಿ ನಡೆದ ಪೀಠಾಧಿಪತಿ ಸಿದ್ಧತೋಟೇಂದ್ರ ಶಿವಾಚಾರ್ಯ ಸ್ವಾಮೀಜಿ ಅವರ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಭಕ್ತ ಸಂಗಣ್ಣಸಾಹು ತಿಪ್ಪ ಮತ್ತಿಮಡು ಅವರಿಂದ ನಾಣ್ಯಗಳಿಂದ ತುಲಾಭಾರ ಸೇವೆ ನೆರವೇರಿತು. ಭಕ್ತ ಶಿವಲಿಂಗ ಭೀಮನಹಳ್ಳಿ ಬೆಂಗಳೂರು ಅವರು ರಜತ ಪಾದುಕೆ ಅರ್ಪಿಸಿ ಭಕ್ತಿ ಮೆರೆದರು. 61ನೇ ಜನ್ಮದಿನೋತ್ಸವ ಪ್ರಯುಕ್ತ ಯುವಜನರು ತಂದಿದ್ದ 61 ಕೆಜಿ ತೂಕದ ಬೃಹತ್ ಕೇಕ್‌ಗಳನ್ನು ಕತ್ತರಿಸಿ ಜನ್ಮದಿನ ಆಚರಿಸಲಾಯಿತು.
ಪುಣ್ಯಾರಾಧನೆ ಹಾಗೂ ಜನ್ಮದಿನೋತ್ಸವ ನಿಮಿತ್ತ ನಡೆದ ಸಂಗೀತ ನಾದಾರ್ಚನೆ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಂಗೀತ ಸೇವೆ ಸಲ್ಲಿಸಿದ ವಿವಿಧ ಕಲಾವಿದರು, ವೈದಿಕ ಸೇವೆ ಸಲ್ಲಿಸಿದವರಿಗೆ ಗುರುರಕ್ಷೆ ನೀಡಿ ಗೌರವಿಸಲಾಯಿತು.
ಜನ್ಮದಿನ ಸಮಾರಂಭದಲ್ಲಿ ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಚಿತ್ತಾಪುರ ತಹಶೀಲ್ದಾರ್ ನಾಗಯ್ಯ ಹಿರೇಮಠ, ಸಾಹಿತಿ ಸಿದ್ಧರಾಮ ಹೊನ್ಕಲ್, ಮಹೇಶ ವೀರಯ್ಯಸ್ವಾಮಿ ಚಿಂಚೋಳಿ, ಡಾ.ಶರಣಭೂಪಾಲರೆಡ್ಡಿ ನಾಯ್ಕಲ್, ಆನಂದ ಮದರಿ, ಶಿವಯೋಗಪ್ಪ ಸಾಹು ಸನ್ನತಿ, ಸಿದ್ದು ಅಂಗಡಿ ಜೇವರ್ಗಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಕೇವಲ ನಾಲವಾರ ಮಾತ್ರವಲ್ಲದೆ ಹಲವೆಡೆ ಭಕ್ತರು ಅನ್ನದಾನ, ರಕ್ತದಾನ, ರೋಗಿಗಳಿಗೆ ಹಣ್ಣು, ಪೌರಕಾರ್ಮಿಕರಿಗೆ ಬಟ್ಟೆ ವಿತರಣೆ, ಉಚಿತ ಆರೋಗ್ಯ ತಪಾಸಣಾ ಮತ್ತು ನೇತ್ರ ತಪಾಸಣೆ ಶಿಬಿರಗಳನ್ನು ಆಯೋಜಿಸಿದ್ದು ವಿಶೇಷವಾಗಿತ್ತು. ಜಿಲ್ಲಾ ಹಡಪದ ಸಮಾಜವು ಸಿದ್ಧತೋಟೇಂದ್ರ ಸ್ವಾಮೀಜಿ ಜನ್ಮದಿನದ ಪ್ರಯುಕ್ತ ಕಲಬುರಗಿ ನಗರದಲ್ಲಿ ನಿರ್ಗತಿಕರು, ಅನಾಥ ಮಕ್ಕಳಿಗೆ ಉಚಿತ ಕ್ಷೌರ ಮಾಡಿ ಭಕ್ತಿ ಮೆರೆದರು. ಕಾರ್ಯದರ್ಶಿ ವಿರೂಪಾಕ್ಷಯ್ಯ ಸ್ವಾಮಿ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.