ADVERTISEMENT

ವೀರಶೈವ ಸಮಾಜದ ಇಬ್ಬರಿಗೆ ಸಚಿವ ಸ್ಥಾನ ನೀಡಿ: ರಾಜುಗೌಡ ನಾಗನಳ್ಳಿ ಆಗ್ರಹ

ಅಖಿಲ ಭಾರತ ವೀರಶೈವ ಮಹಾಸಭಾದ ಮುಖಂಡರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2021, 12:56 IST
Last Updated 1 ಆಗಸ್ಟ್ 2021, 12:56 IST

ಕಲಬುರ್ಗಿ: ‘ರಾಜ್ಯದ ಹೊಸ ಸಚಿವ ಸಂಪುಟದಲ್ಲಿ ಜಿಲ್ಲೆಯ ವೀರಶೈವ ಸಮಾಜದ ಇಬ್ಬರಿಗೆ ಸ್ಥಾನ ನೀಡಬೇಕು’ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಉಪಾಧ್ಯಕ್ಷ ರಾಜುಗೌಡ ನಾಗನಳ್ಳಿ ಆಗ್ರಹಿಸಿದರು.

‘ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಈ ಹಿಂದಿನ ಅವಧಿಯಲ್ಲೂ ಜಿಲ್ಲೆಗೆ ಒಂದೂ ಸಚಿವ ಸ್ಥಾನ ನೀಡಿಲ್ಲ. ಬದಲಾದ ವ್ಯವಸ್ಥೆಯಲ್ಲಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದಾರೆ. ಈ ಸಂದರ್ಭ ಪುನರ್‌ ರಚನೆಗೊಳ್ಳುವ ಸರ್ಕಾರದಲ್ಲಾದರೂ ಜಿಲ್ಲೆಯ ಇಬ್ಬರು ವೀರಶೈವ ಸಮುದಾಯದ ಒಬ್ಬ ಶಾಸಕ ಹಾಗೂ ಒಬ್ಬ ವಿಧಾನ ಪರಿಷತ್ ಸದಸ್ಯರಿಗೆ ಮಂತ್ರಿ ಸ್ಥಾನ ನೀಡಲೇಬೇಕು’ ಎಂದು ಅವರು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

‘ಶಾಸಕರಾದ ದತ್ತಾತ್ರೇಯ ಸಿ. ಪಾಟೀಲ ರೇವೂರ, ರಾಜಕುಮಾರ ಪಾಟೀಲ ತೆಲ್ಕೂರ ವೀರಶೈವ ಸಮಾಜದವರು. ಅದೇ ರೀತಿ ವಿಧಾನ ಪರಿಷತ್‌ ಸದಸ್ಯರಾದ ಬಿ.ಜಿ. ಪಾಟೀಲ ಹಾಗೂ ಶಶಿಲ್‌ ಜಿ. ನಮೋಶಿ ಇದ್ದಾರೆ. ಈ ನಾಲ್ವರಲ್ಲಿ ಒಬ್ಬ ಶಾಸಕ ಹಾಗೂ ಒಬ್ಬ ವಿಧಾನ ಪರಿಷತ್ ಸದಸ್ಯರಿಗೆ ಮಂತ್ರಿ ಮಾಡಬೇಕು’ ಎಂದೂ ಕೋರಿದರು.

‘ಜಿಲ್ಲೆಯಲ್ಲಿ ಪ್ರಾಬಲ್ಯ ಹೊಂದಿರುವ ವೀರಶೈವ ಸಮಾಜಕ್ಕೆ ಪ್ರಾತಿನಿಧ್ಯ ನೀಡಬೇಕಾಗಿದೆ. ನಮ್ಮ ನಾಯಕರು ಮಂತ್ರಿ ಸ್ಥಾನ ನಿಭಾಯಿಸುವ ಸಮರ್ಥರಾಗಿದ್ದಾರೆ. ಬಿಜೆಪಿಗೆ ಗೆಲುವು ತಂದುಕೊಡುವಲ್ಲಿ ಸಮಾಜದ ಕೊಡುಗೆ ದೊಡ್ಡದಿದೆ. ಇದನ್ನು ಹೊಸ ಮುಖ್ಯಮಂತ್ರಿಗಳು ಗಮನಿಸಬೇಕು’ ಎಂದೂ ಹೇಳಿದರು.

ADVERTISEMENT

‘ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲು ಶೀಘ್ರದಲ್ಲೇ ಸಮಾಜದ ಮುಖಂಡರ ನಿಯೋಗ ಹೋಗಲಾಗುವುದು. ಅವರು ಸಮಾಜಕ್ಕೆ ನಿರಾಸೆ ಮಾಡುವುದಿಲ್ಲ ಎಂಬ ಭರವಸೆ ಇದೆ. ಒಂದು ವೇಳೆ ಈ ಬಾರಿಯೂ ಸಚಿವ ಸ್ಥಾನ ನೀಡದೇ ಇದ್ದರೆ ಮುಂದಿನ ನಮ್ಮ ನಡೆಯ ಬಗ್ಗೆ ಹಿರಿಯ ಮುಖಂಡರೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು’ ಎಂದು ಮಹಾಸಭಾದ ಕಾರ್ಯದರ್ಶಿ ಅಶೋಕ ಪಟ್ಟಣಶೆಟ್ಟಿ ಹೇಳಿದರು.

ಸಮಾಜದ ಮುಖಂಡರಾದ ಶಿವಲಿಂಗಪ್ಪ ಬಿರಾದಾರ ನೆಲೋಗಿ, ಮೃತ್ಯುಂಜಯ ಪಲ್ಲಾಪೂರಮಠ, ಅಶೋಕ ಹೌದೆ, ಎಂ.ಎಸ್‌. ಪಾಟೀಲ ನರಿಬೋಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.