ADVERTISEMENT

‘ವರದಿ ಜಾರಿಗಾಗಿ ಜನಾಂದೋಲನ’

ಸದಾಶಿವ ಆಯೋಗದ ವರದಿ; ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಅರಿವು ಜಾಥಾ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2020, 15:35 IST
Last Updated 8 ಅಕ್ಟೋಬರ್ 2020, 15:35 IST

ಕಲಬುರ್ಗಿ: ‘ನ್ಯಾ.ಸದಾಶಿವ ಆಯೋಗ ವರದಿ ಜಾರಿಗೆ ಆಗ್ರಹಿಸಿ ರಾಜ್ಯಾದ್ಯಂತ ‘ಮೀಸಲಾತಿಯಲ್ಲಿ ಒಳ ಮೀಸಲಾತಿ ನಮ್ಮ ಜನ್ಮಸಿದ್ಧ ಹಕ್ಕು’ ಜನಾಂದೋಲನ ರೂಪಿಸಲಾಗಿದೆ’ ಎಂದು ನ್ಯಾ.ಎ.ಜೆ.ಸದಾಶಿವ ಆಯೋಗ ವರದಿ ಜಾರಿ ಹೋರಾಟ ಸಮನ್ವಯ ಸಮಿತಿ ಅಧ್ಯಕ್ಷ ಮುತ್ತಣ್ಣ ವೈ.ಬೆಣ್ಣೂರ ತಿಳಿಸಿದರು.

‘ಆಯೋಗದ ವರದಿ ಮಂಡನೆಗೆ ಅಡ್ಡಿಮಾಡುವವರು ಸಂವಿಧಾನ ವಿರೋಧಿಗಳು. ಸಾಮಾಜಿಕ ನ್ಯಾಯಪರವಾಗಿರುವ ವರದಿಯಿಂದ ಒಳ ಮೀಸಲಾತಿ ಪಡೆಯುವುದು ಶೋಷಿತರ ಜನ್ಮಸಿದ್ಧ ಹಕ್ಕು. ಇದಕ್ಕಾಗಿ ಜನಾಂದೋಲನ ಮೂಲಕ ರಾಜ್ಯದ 224 ವಿಧಾನ ಸಭಾ ಕ್ಷೇತ್ರಗಳಲ್ಲಿಯೂ ಸಂಚರಿಸಿ ವರದಿ ಬಗ್ಗೆ ಜನಪ್ರನಿಧಿಗಳಿಗೆ ಮನವರಿಕೆ ಮಾಡಲಾಗುವುದು’ ಎಂದರು.

‘ಈ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುವ ಶಾಸಕರನ್ನು ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಸೋಲಿಸುವ ನಿರ್ಣಯ ಕೈಗೊಳ್ಳಲಾಗುವುದು. ರಾಜ್ಯದಾದ್ಯಂತ ಸಂಚರಿಸಿದ ಬಳಿಕ ಡಿಸೆಂಬರ್‌ 11ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಮಾವೇಶಗೊಂಡು, ಶೋಷಿತ ಜಾತಿಗಳ ಶಕ್ತಿ ಪ್ರದರ್ಶನ ಮಾಡಲಾಗುವುದು’ ಎಂದು ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ADVERTISEMENT

‘₹ 12 ಕೋಟಿ ವಿನಿಯೋಗ ಮಾಡಿ ಸದಾಶಿವ ಆಯೋಗವು ಸಮೀಕ್ಷೆ ಮೂಲಕ ವರದಿ ತಯಾರಿಸಿದೆ. ಯಾವುದೇ ಜಾತಿಗಳನ್ನು ಪಟ್ಟಿಯಿಂದ ಕೈಬಿಡುವುದಾಗಲಿ ಅಥವಾ ಸೇರಿಸುವ ಕುರಿಯಾಗಲಿ ವರದಿಯಲ್ಲಿ ಪ್ರಸ್ತಾಪಿಸಿಲ್ಲ. ಆದರೂ, ವರದಿ ತಯಾರಿಕೆ ಅವೈಜ್ಞಾನಿಕ ಮತ್ತು ಅಸಾಂವಿಧಾನಿಕ ಎಂದು ವಾದಿಸಿ, ಅವಮಾನ ಮಾಡಲಾಗುತ್ತಿದೆ. ಪರಿಶಿಷ್ಟ ಜಾತಿಗಳಲ್ಲಿಯೇ ಸಾಕಷ್ಟು ವೈರುಧ್ಯಗಳು ಇದೆ. ಹಾಗೆಯೇ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕತೆಯಲ್ಲಿ ತುಂಬಾ ವ್ಯಾತ್ಯಾಸ ಇದೆ. ಆದ್ದರಿಂದ ಜನಸಂಖ್ಯೆಗೆ ಅನುಗುಣವಾಗಿ ಶೇ 15ರಷ್ಟು ಮೀಸಲಾತಿಯಲ್ಲಿ ನ್ಯಾಯಬದ್ಧವಾಗಿ ಒಳ ಮೀಸಲಾತಿ ನಿಗದಿ ಪಡಿಸುವ ನ್ಯಾ.ಸದಾಶಿವ ವರದಿಯಿಂದ ಮಾತ್ರ ಸಾಧ್ಯ. ರಾಜ್ಯ ಸರ್ಕಾರವು ಕೂಡಲೇ ಕೇಂದ್ರಕ್ಕೆ ಶಿಫಾರಸು ಮಾಡಬೇಕು’ ಎಂದೂ ಒತ್ತಾಯಿಸಿದರು.

ಹರಳಯ್ಯ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಕಾಶಿರಾಯ ನಂದೂರಕರ, ಢೋರ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ನರೇಶ ಕಟ್ಟೆ, ಉಪಾಧ್ಯಕ್ಷ ರಾಮಚಂದ್ರ ಕಾಂಬಳೆ, ಬಸವರಾಜ ಜವಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.