ADVERTISEMENT

ದೇವಾಲಯ ಅಭಿವೃದ್ಧಿ ಚಿಂತನಾ ಸಮಾವೇಶ

ರಂಭಾಪುರಿ ಸ್ವಾಮೀಜಿ ನೇತೃತ್ವದಲ್ಲಿ ಕೊಲ್ಲಿಪಾಕಿ ಕ್ಷೇತ್ರಾಭಿವೃದ್ಧಿ ಟ್ರಸ್ಟ್ ಸಭೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2021, 3:21 IST
Last Updated 28 ಅಕ್ಟೋಬರ್ 2021, 3:21 IST
ಕಲಬುರಗಿಯಲ್ಲಿ ನಡೆದ ಕೊಲನಪಾಕ ಸೋಮೇಶ್ವರ ದೇವಾಲಯ ಅಭಿವೃದ್ಧಿ ಚಿಂತನಾ ಸಮಾವೇಶದಲ್ಲಿ ಬಾಳೆಹೊನ್ನೂರು ರಂಭಾಪುರಿಯ ವೀರಸೋಮೇಶ್ವರ ಸ್ವಾಮೀಜಿ ಮಾತನಾಡಿದರು. ದೇವಸ್ಥಾನ ಟ್ರಸ್ಟ್‌ನ ಕಾರ್ಯದರ್ಶಿ ಅಣ್ಣಾರಾವ್ ಬಿರಾದಾರ, ಸದಸ್ಯರಾದ ಶಿವಶರಣಪ್ಪ ಸೀರಿ, ಅಮೃತಪ್ಪ ಮಹಾಗಾಂವ ಇತರರು ಇದ್ದರು
ಕಲಬುರಗಿಯಲ್ಲಿ ನಡೆದ ಕೊಲನಪಾಕ ಸೋಮೇಶ್ವರ ದೇವಾಲಯ ಅಭಿವೃದ್ಧಿ ಚಿಂತನಾ ಸಮಾವೇಶದಲ್ಲಿ ಬಾಳೆಹೊನ್ನೂರು ರಂಭಾಪುರಿಯ ವೀರಸೋಮೇಶ್ವರ ಸ್ವಾಮೀಜಿ ಮಾತನಾಡಿದರು. ದೇವಸ್ಥಾನ ಟ್ರಸ್ಟ್‌ನ ಕಾರ್ಯದರ್ಶಿ ಅಣ್ಣಾರಾವ್ ಬಿರಾದಾರ, ಸದಸ್ಯರಾದ ಶಿವಶರಣಪ್ಪ ಸೀರಿ, ಅಮೃತಪ್ಪ ಮಹಾಗಾಂವ ಇತರರು ಇದ್ದರು   

ಕಲಬುರಗಿ: ಪ್ರಾಚೀನ ಇತಿಹಾಸವಿರುವ ತೆಲಂಗಾಣ ರಾಜ್ಯದ ಕೊಲನಪಾಕ ಸ್ವಯಂಭು ಸೋಮೇಶ್ವರ ದೇವಾಲಯವನ್ನು ಪುನರ್ ನಿರ್ಮಾಣ ಮಾಡುವ ಉದ್ದೇಶವಿದೆ ಎಂದು ಟ್ರಸ್ಟಿನ ಅಧ್ಯಕ್ಷರಾದ ಬಾಳೆಹೊನ್ನೂರು ರಂಭಾಪುರಿ ಪೀಠದ ರೇಣುಕ ಪ್ರಸನ್ನ ಡಾ. ವೀರಸೋಮೇಶ್ವರ ಸ್ವಾಮೀಜಿ ತಿಳಿಸಿದರು.

ನಗರದಲ್ಲಿ ಆಯೋಜಿಸಿದ್ದ ಕೊಲ್ಲಿಪಾಕಿ ಕ್ಷೇತ್ರಾಭಿವೃದ್ಧಿ ಟ್ರಸ್ಟಿನ ಚಿಂತನಾ ಸಮಾವೇಶದಲ್ಲಿ ಟ್ರಸ್ಟ್ ಸದಸ್ಯರನ್ನುದ್ದೇಶಿಸಿ ಮಾತನಾಡಿದ ಅವರು, ವೀರಶೈವ ಧರ್ಮ ಸಂಸ್ಥಾಪನಾಚಾರ್ಯರಲ್ಲಿ ಅಗ್ರಗಣ್ಯರಾದ ರೇಣುಕಾಚಾರ್ಯರು ಕೊಲನಪಾಕ ಸೋಮೇಶ್ವರ ಮಹಾಲಿಂಗದಲ್ಲಿ ಅವತರಿಸಿದ ಇತಿಹಾಸವಿದೆ. 18 ಜಾತಿ ಜನಾಂಗಗಳ ಮಠ ನಿರ್ಮಿಸಿ ಅವರೆಲ್ಲರಿಗೂ ಸಂಸ್ಕಾರ ಕೊಟ್ಟು ಸಕಲರ ಶ್ರೇಯೋಭಿವೃದ್ಧಿಗೆ ಶ್ರಮಿಸಿದ್ದಾರೆ. ಪುರಾತನ ದೇವಾಲಯ ಇದಾಗಿರುವುದರಿಂದ ಬಹಳಷ್ಟು ಜೀರ್ಣಗೊಂಡಿದೆ. ಇದನ್ನು ಪುನರ್ ನಿರ್ಮಾಣ ಮಾಡುವ ಉದ್ದೇಶವಿದೆ‘ ಎಂದರು.

ತೆಲಂಗಾಣ ಸರ್ಕಾರದೊಂದಿಗೆ ಪ್ರತಿ ಹಂತದಲ್ಲೂ ಯೋಜನೆಗಳನ್ನು ರೂಪಿಸಿ ಸಹಾಯವನ್ನು ಪಡೆದುಕೊಳ್ಳುವ ಜವಾಬ್ದಾರಿಯನ್ನು ಟ್ರಸ್ಟಿನ ಕಾರ್ಯಾಧ್ಯಕ್ಷರಾದ ಬಿಚಗುಂದ ಸೋಮಲಿಂಗ ಶಿವಾಚಾರ್ಯ ಸ್ವಾಮಿಗಳಿಗೂ, ಉಪಾಧ್ಯಕ್ಷರಾದ ಮೇಹಕರ ಹಿರೇಮಠದ ರಾಜೇಶ್ವರ ಶಿವಾಚಾರ್ಯ ಸ್ವಾಮಿಗಳಿಗೂ ಮತ್ತು ಹೈದರಾಬಾದ್ ವೀರಶೈವ ಸಮಾಜದ ಮುಖಂಡರಾದ ಎಂ. ವೀರಮಲ್ಲೇಶ್ವರ ಅವರಿಗೆ ಜವಾಬ್ದಾರಿಯನ್ನು ವಹಿಸಲಾಗಿದೆ ಎಂದು ಟ್ರಸ್ಟಿನ ಕಾರ್ಯದರ್ಶಿ ಅಣ್ಣಾರಾವ್ ಬಿರಾದಾರ ತಿಳಿಸಿದರು.

ADVERTISEMENT

ಈ ಮೊದಲು ಕೋಶಾಧಿಕಾರಿಯಾಗಿ ಕಾರ್ಯ ನಿರ್ವಹಿಸಿ ನಿಧನರಾದ ಬಾಬುರಾವ್ ಬಿರಾದಾರ ಇವರಿಂದ ತೆರವಾದ ಸ್ಥಾನಕ್ಕೆ ಕಲಬುರಗಿಯ ಅಮೃತಪ್ಪ ಮಹಾಗಾಂವ ಇವರನ್ನು ನಿಯುಕ್ತಿಗೊಳಿಸಿದೆ ಎಂದು ರಂಭಾಪುರಿ ಸ್ವಾಮೀಜಿ ಪ್ರಕಟಿಸಿದರು.

ಕೊಲನಪಾಕ ಕ್ಷೇತ್ರದಲ್ಲಿ ಈ ಮೊದಲು ನಿರ್ಮಿಸಿದ ಸೋಮೇಶ್ವರ ರೇಣುಕ ಯಾತ್ರಿ ನಿವಾಸದ ಮೇಲಂತಸ್ತಿನ ಕಟ್ಟಡ ಕಾರ್ಯ ಮಾಡಲು ಟ್ರಸ್ಟಿನ ಸದಸ್ಯರು ಅನುಮೋದಿಸಿದರು. ರಂಭಾಪುರಿ ಪೀಠದ ಮಾರ್ಗದರ್ಶನದಲ್ಲಿ ಕೊಲನಪಾಕ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಪಡಿಸಲು ನಾಡಿನೆಲ್ಲೆಡೆ ಇರುವ ಧರ್ಮಾಭಿಮಾನಿ ದಾನಿಗಳನ್ನು ಸಂಪರ್ಕಿಸುವ ನಿರ್ಣಯವೊಂದನ್ನು ಕೈಗೊಳ್ಳಲಾಯಿತು. ಟ್ರಸ್ಟಿನ ಸದಸ್ಯರಾದ ಶಿವಶರಣಪ್ಪ ಸೀರಿ, ಅಮೃತಪ್ಪ ಮಹಾಗಾಂವ ಇನ್ನಿತರ ಧರ್ಮಾಭಿಮಾನಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.