ADVERTISEMENT

17 ಕ್ವಿಂಟಲ್ ಪಡಿತರ ಜಪ್ತಿ

ಪೊಲೀಸ್ ಸಿಬ್ಬಂದಿ ಕುಟುಂಬದಿಂದ ಅಕ್ಕಿ ಅಕ್ರಮ ದಾಸ್ತಾನು

​ಪ್ರಜಾವಾಣಿ ವಾರ್ತೆ
Published 8 ಜೂನ್ 2022, 4:15 IST
Last Updated 8 ಜೂನ್ 2022, 4:15 IST

ಕಲಬುರಗಿ: ಚಿತ್ತಾಪುರ ಪಟ್ಟಣದ ಸ್ಟೇಷನ್ ತಾಂಡಾದ ಮನೆಯೊಂದರಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ 17.20 ಕ್ವಿಂಟಲ್ ಪಡಿತರ ಅಕ್ಕಿ ಜಪ್ತಿ ಮಾಡಿಕೊಂಡ ಪೊಲೀಸರು ಇಬ್ಬರ ವಿರುದ್ಧ ಸೋಮವಾರ ರಾತ್ರಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಕರಣದ ವಿವರ: ಸ್ಟೇಷನ್ ತಾಂಡಾದ ಸೇವಾಲಾಲ ಗುಡಿ ಹತ್ತಿರ ಇರುವ ಗೋಪಿ ಬಾಮಲಾ ರಾಠೋಡ ಅವರ ಮನೆಯಲ್ಲಿ ಪಡಿತರ ವಿತರಣೆಯ ಅಕ್ಕಿ ಅಕ್ರಮವಾಗಿ ಮಾರುವ ಸಲುವಾಗಿ ಸಂಗ್ರಹ ಮಾಡಲಾಗಿದೆ ಎಂದು ಆಹಾರ ಇಲಾಖೆ ಮೇಲಧಿಕಾರಿ ಮಾಹಿತಿ ಆಧರಿಸಿ ಚಿತ್ತಾಪುರ ಆಹಾರ ಇಲಾಖೆ ಶಿರಸ್ತೇದಾರ್ ಮಲ್ಲಿನಾಥ ಹುನ್ನಳಿ ಅವರು ಗೋಪಿ ರಾಠೋಡ ಮನೆಯ ಮೇಲೆ ದಾಳಿ ಮಾಡಿದಾಗ ಅಕ್ಕಿ ಪತ್ತೆಯಾಯಿತು.

ಪ್ರಕರಣ ದಾಖಲಾಗುತ್ತಿದ್ದಂತೆ ಗೋಪಿ ಬಾಮಲಾ ರಾಠೋಡ ಮತ್ತು ಅಶ್ವಥ್ ತುಕಾರಾಮ ರಾಠೋಡ ತಲೆಮರೆಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ADVERTISEMENT

ಪೊಲೀಸ್ ಕುಟುಂಬದಿಂದ ಅಕ್ಕಿ ದಂಧೆ: ಕರ್ತವ್ಯದಲ್ಲಿರುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಕುಟುಂಬದಿಂದ ಸಾರ್ವಜನಿಕ ವಿತರಣೆಯ ಪಡಿತರ ಅಕ್ಕಿ ಅಕ್ರಮ ದಾಸ್ತಾನು ಮಾಡಿ, ಮಾರಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ.

ಒಬ್ಬ ಆರೋಪಿ ಪೊಲೀಸ್ ಸಿಬ್ಬಂದಿಯ ಅಣ್ಣನಾಗಿದ್ದು, ಮತ್ತೊಬ್ಬ ಆರೋಪಿ ಪಿಎಸ್ಐ ತಮ್ಮ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.