ADVERTISEMENT

ಕಲಬುರಗಿ ಜಿಲ್ಲೆಯಲ್ಲಿ 31 ಕೆರೆಗಳ ಪುನಶ್ಚೇತನ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕೆಲಸ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2023, 15:54 IST
Last Updated 6 ಅಕ್ಟೋಬರ್ 2023, 15:54 IST
ಕಲಬುರಗಿಯ ಕೃಷಿ ಮಾರಾಟ ಮಂಡಳಿಯಲ್ಲಿ ಏರ್ಪಡಿಸಿದ್ದ ಕೆರೆ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳ ಸಭೆಯನ್ನು ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಧರ್ಮಸ್ಥಳ ಸಮುದಾಯ ಅಭಿವೃದ್ಧಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಉದ್ಘಾಟಿಸಿದರು
ಕಲಬುರಗಿಯ ಕೃಷಿ ಮಾರಾಟ ಮಂಡಳಿಯಲ್ಲಿ ಏರ್ಪಡಿಸಿದ್ದ ಕೆರೆ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳ ಸಭೆಯನ್ನು ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಧರ್ಮಸ್ಥಳ ಸಮುದಾಯ ಅಭಿವೃದ್ಧಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಉದ್ಘಾಟಿಸಿದರು   

ಕಲಬುರಗಿ: ಜಿಲ್ಲೆಯಲ್ಲಿ 31 ಕೆರೆಗಳನ್ನು ಪುನರುಜ್ಜೀವನಗೊಳಿಸಲಾಗಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಧರ್ಮಸ್ಥಳ ಸಮುದಾಯ ಅಭಿವೃದ್ಧಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ತಿಳಿಸಿದರು.

ಕಲಬುರಗಿಯ ಕೃಷಿ ಮಾರಾಟ ಮಂಡಳಿಯಲ್ಲಿ ಏರ್ಪಡಿಸಿದ್ದ ಕೆರೆ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳ ಪ್ರೇರಣಾ ಸಭೆಯಲ್ಲಿ ಮಾತನಾಡಿದರು.

ರಾಜರುಗಳ ಕಾಲದಲ್ಲಿ ಜನ, ಜಾನುವಾರು, ಪ್ರಾಣಿ ಪಕ್ಷಿ, ಕುಡಿಯಲು ಹಾಗೂ ಮತ್ತು ಜಮೀನುಗಳಿಗೆ ನೀರು ಒದಗಿಸಲು ರಾಜ್ಯದಾದ್ಯಂತ ಸಾವಿರಾರು ಕೆರೆಗಳನ್ನು ಕಟ್ಟಿ ಜನಪರ ಕಾಳಜಿ ಎತ್ತಿಹಿಡಿದಿದ್ದರು. ಕಾಲ ಕ್ರಮೇಣ ಬಹುತೇಕ ಕೆರೆಗಳು ಲೇಔಟ್‌ ಆಗಿ ಪರಿವರ್ತನೆ ಹೊಂದಿದ ಪರಿಣಾಮ ಮಾಯವಾಗಿವೆ ಎಂದರು.

ADVERTISEMENT

ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಗ್ರಾಮೀಣ ಭಾಗದಲ್ಲಿ ನೀರು ಹಾಗೂ ಅಂತರ್ಜಲ ವೃದ್ಧಿ ಸಂಬಂಧ ಅಧ್ಯಯನ ನಡೆಸಿ ಕೆರೆಗಳ ಅಭಿವೃದ್ಧಿಗಾಗಿ ಬೃಹತ್ ಯೋಜನೆ ರೂಪಿಸಿದ್ದಾರೆ. ’ನಮ್ಮೂರು ನಮ್ಮ ಕೆರೆ’ ಯೋಜನೆಯಲ್ಲಿ ಪುನರುಜ್ಜೀವನ ಕೆಲಸ ಮಾಡಲಾಗುತ್ತಿದೆ ಎಂದರು.

ಈಗಾಗಲೇ 31 ಕೆರೆಗಳ ಪುನಶ್ಚೇತನಗೊಳಿಸಿ ಒಂದು ಲಕ್ಷ ಕುಟುಂಬಕ್ಕೆ ಆಸರೆ ಮಾಡಲಾಗಿದೆ. ಸ್ಥಳೀಯ ಗ್ರಾಮ ಪಂಚಾಯತಿ, ಕೆರೆ ಅಭಿವೃದ್ಧಿ ಸಮಿತಿ ಮತ್ತು ರೈತರ ಸಹಭಾಗಿತ್ವದಲ್ಲಿ ₹10 ಕೋಟಿ ವೆಚ್ಚದಲ್ಲಿ ಪುನಶ್ಚೇತನಗೊಂಡ ಎಲ್ಲ ಕೆರೆಗಳು ತುಂಬಿ ತುಳುಕುತ್ತಿವೆ. ಇದರಿಂದ ಕೆರೆಗಳ ಪರಿಸರ, ಜಮೀನು, ಪಕ್ಕದ ಕೊಳವೆ ಬಾವಿ, ತೆರೆದ ಬಾವಿಗಳಿಗೂ ಅನುಕುಲವಾಗುತ್ತಿದೆ ಎಂದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸಮದ್ ಪಟೇಲ್‌ ಮಾತನಾಡಿ, ಕಲಬುರಗಿ ಜಿಲ್ಲೆಯು ಶೇ 90ರಷ್ಟು ಭಾಗ ಮಳೆ ಆಶ್ರಿತ ಪ್ರದೇಶ. ಈ ಭಾಗದಲ್ಲಿ ಧರ್ಮಸ್ಥಳ ಸಂಸ್ಥೆಯ ಮುಖಾಂತರ ಕೆರೆಗಳ ಪುನಶ್ಚೇತನ ಮಾಡಿರುವುದರಿಂದ ಬೊರವೇಲ್ ಮರುಪೂರಣ ಮತ್ತು ತೆರೆದ ಬಾವಿಗಳಿಗೆ ನೀರು ಸಂಗ್ರಹದ ಜತೆಗೆ ಅಂತರ್ಜಲ ಮಟ್ಟ ಹೆಚ್ಚಾಗಿದೆ ಎಂದರು.

ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆಯ ಉಪಾಧ್ಯಕ್ಷ ಅನೀಲಕುಮಾರ ಡಾಂಗೆ ಕಾರ್ಯಕ್ರಮ ಉದ್ಘಾಟಿಸಿದರು.

ಧರ್ಮಸ್ಥಳ ಸಂಸ್ಥೆಯ ಕಲಬುರಗಿ ಪ್ರಾದೇಶಿಕ ನಿರ್ದೇಶಕ ಜಯಂತ ಪೂಜಾರಿ, ಜಿಲ್ಲಾ ನಿರ್ದೇಶಕ ಸತೀಶ ಸುವರ್ಣ, ಸಮುದಾಯ ವಿಭಾಗದ ಅಭಿಯಂತ ಪುಷ್ಪರಾಜ, ಶುದ್ಧಗಂಗಾ ವಿಭಾಗದ ಯೋಜನಾಧಿಕಾರಿ ಫಕೀರಪ್ಪ, ಜಿಲ್ಲಾ ಎಮ್ಐಎಸ್ ಯೋಜನಾಧಿಕಾರಿ ಪ್ರವೀಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.