ADVERTISEMENT

ಸಂಪುಟ, ಸದನದಲ್ಲಿ ಚರ್ಚೆಯಾದ ಬಳಿಕವೇ ವರದಿ ಸ್ವೀಕಾರ: ಪ್ರಿಯಾಂಕ್ ಖರ್ಗೆ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2025, 13:22 IST
Last Updated 15 ಏಪ್ರಿಲ್ 2025, 13:22 IST
<div class="paragraphs"><p>ಪ್ರಿಯಾಂಕ್ ಖರ್ಗೆ</p></div>

ಪ್ರಿಯಾಂಕ್ ಖರ್ಗೆ

   

ಕಲಬುರಗಿ: ‘ಎಚ್. ಕಾಂತರಾಜ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗದ ವರದಿಯ ಅಧ್ಯಯನ ನಡೆಯುತ್ತಿದ್ದು, ಕ್ಯಾಬಿನೆಟ್ ಹಾಗೂ ಸದನದಲ್ಲಿ ಚರ್ಚಿಸಿದ ಬಳಿಕವಷ್ಟೇ ಅದನ್ನು ಸ್ವೀಕರಿಸುವ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್‌ ಖರ್ಗೆ ಸ್ಪಷ್ಟಪಡಿಸಿದರು.

‘ವರದಿಯ ಬಗ್ಗೆ ಆಯೋಗದವರು ಇದೇ 17ರಂದು ಸಚಿವ ಸಂಪುಟದಲ್ಲಿ ಮಾಹಿತಿಯನ್ನು ಹಂಚಿಕೊಳ್ಳಲಿದ್ದಾರೆ. ತಾವು ಹೇಗೆ ಸಮೀಕ್ಷೆ ಮಾಡಿದ್ದೇವೆ. ಅದರ ಉದ್ದೇಶವೇನು ಎಂಬ ಬಗ್ಗೆ ತಿಳಿಸಲಿದ್ದಾರೆ. ನಾವೂ ವರದಿಯ ಅಧ್ಯಯನ ಮಾಡುತ್ತಿದ್ದೇವೆ. ಸಚಿವ ಸಂಪುಟದಲ್ಲಿ ಮಂಡನೆಯಾದ ಬಳಿಕ ವಿಧಾನಮಂಡಲದ ಅಧಿವೇಶನದಲ್ಲಿ ಚರ್ಚಿಸಲಾಗುವುದು. ಆ ನಂತರವಷ್ಟೇ ವರದಿ ಸ್ವೀಕರಿಸುವ ಬಗ್ಗೆ ತೀರ್ಮಾನಿಸಲಾಗುತ್ತದೆ’ ಎಂದು ಅವರು ಮಂಗಳವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

ADVERTISEMENT

‘ಕೆಲ ಜಾತಿಗಳ ಜನಸಂಖ್ಯೆಯ ಪ್ರಮಾಣವನ್ನು ಆಯೋಗವು ಕಡಿಮೆ ತೋರಿಸಿದೆ’ ಎಂಬ ದೂರಿನ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಆಯೋಗದವರು ಮಾಹಿತಿ ನೀಡಲಿದ್ದಾರೆ. ಅಷ್ಟಕ್ಕೂ ಇದು ಜಾತಿ ಗಣತಿಯಲ್ಲ. ಕೇಂದ್ರ ಸರ್ಕಾರವೇ ಜಾತಿ ಗಣತಿ ನಡೆಸಲಿದೆ. ಯೋಜನೆಗಳನ್ನು ರೂಪಿಸುವ ಉದ್ದೇಶದಿಂದ ಸಾಮಾಜಿಕ, ಆರ್ಥಿಕ ಸಮೀಕ್ಷೆ ನಡೆಸಲಾಗಿದೆ. ಈ ಸಮೀಕ್ಷೆ ನಡೆಯದಿದ್ದರೆ ಕಲ್ಯಾಣ ಕಾರ್ಯಕ್ರಮಗಳನ್ನು ಕೈಗೊಳ್ಳಲು ಅಗತ್ಯ ದತ್ತಾಂಶ ಸಿಗುವುದಿಲ್ಲ’ ಎಂದು ಪ್ರಿಯಾಂಕ್ ತಿಳಿಸಿದರು.

‘ವರದಿಯ ಬಗ್ಗೆ ಯಾವ ಸಚಿವರೂ ವಿರೋಧ ವ್ಯಕ್ತಪಡಿಸಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.