ಕಲಬುರಗಿ: ನಗರದ ಜೆಸ್ಕಾಂ ಕಚೇರಿ, ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ ಮಹಾನಗರ ಪಾಲಿಕೆ, ಜಿಲ್ಲಾ ಪಂಚಾಯಿತಿ ಕಚೇರಿ ಸೇರಿದಂತೆ ವಿವಿಧೆಡೆ ಭಾನುವಾರ ಗಣರಾಜ್ಯೋತ್ಸವ ಸಡಗರ ಮನೆ ಮಾಡಿತ್ತು.
‘ವಿದ್ಯುತ್ ಅಪಘಾತ ತಪ್ಪಿಸೋಣ’
ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿಯ ಪ್ರಧಾನ ಕಚೇರಿಯಲ್ಲಿ ಗಣರಾಜ್ಯೋತ್ಸವ ಸಂಭ್ರಮದಿಂದ ಆಚರಿಸಲಾಯಿತು.
ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಕರಲಿಂಗಣ್ಣವರ್ ಧ್ವಜಾರೋಹಣ ನೆರವೇರಿಸಿ, ‘ವಿದ್ಯುತ್ ಅಪಘಾತಗಳಾಗದಂತೆ ಮುಂಜಾಗ್ರತೆ ವಹಿಸೋಣ. ವಿದ್ಯುತ್ ಅವಘಡಗಳ ಕುರಿತು ಜನರಲ್ಲಿ ಅರಿವು ಮೂಡಿಸಿ, 36 ಲಕ್ಷ ಗ್ರಾಹಕರಿಗೆ ಉತ್ತಮ ರೀತಿಯಲ್ಲಿ ಸೇವೆ ನೀಡೋಣ. ಕಂಪನಿಯ ಆರ್ಥಿಕ ನಷ್ಟ ಹಾಗೂ ವಿದ್ಯುತ್ ನಷ್ಟ ತಗ್ಗಿಸುವ ದಿಸೆಯಲ್ಲಿ ಶ್ರಮವಹಿಸೋಣ’ ಎಂದರು.
ಸಮಾರಂಭದಲ್ಲಿ ಮುಖ್ಯ ಆರ್ಥಿಕ ಅಧಿಕಾರಿ ಮುರಳೀಧರ್ ನಾಯಕ್, ಪ್ರಭಾರ ಪೊಲೀಸ್ ಅಧೀಕ್ಷಕ ಶರಣಬಸಪ್ಪ ಸುಬೇದಾರ, ಕಂಪನಿ ಕಾರ್ಯದರ್ಶಿಗಳಾದ ಕಿರಣ ಪೊಲೀಸ್ ಪಾಟೀಲ, ಪ್ರಭಾರ ಪ್ರಧಾನ ವ್ಯವಸ್ಥಾಪಕ ಅನಿಲಕುಮಾರ ಶೇರಿಕಾರ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಜೆಸ್ಕಾಂ ನಿಗಮ ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು. ಹಿರಿಯ ಆಪ್ತ ಕಾರ್ಯದರ್ಶಿ ಮಹ್ಮದ್ ಮಿನ್ವಾಜುದ್ದೀನ್ ಕಾರ್ಯಕ್ರಮ ನಿರೂಪಿಸಿದರು.
‘ಭ್ರಾತೃತ್ವ ತತ್ವಗಳ ನೆನಪಿಸಿಕೊಳ್ಳೋಣ’
ನಗರದಲ್ಲಿರುವ ಹೈಕೋರ್ಟ್ ಕಲಬುರಗಿ ಪೀಠದ ಆವರಣದಲ್ಲಿ 76ನೇ ಗಣರಾಜ್ಯೋತ್ಸವ ಆಚರಿಸಲಾಯಿತು. ಹಿರಿಯ ನ್ಯಾಯಮೂರ್ತಿ ಎಸ್.ಸುನೀಲ್‌ದತ್ತ ಯಾದವ್ ರಾಷ್ಟ್ರಧ್ವಜಾರೋಹಣ ಮಾಡಿ, ಮಹಾತ್ಮ ಗಾಂಧಿ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
‘ಪ್ರಜಾಪ್ರಭುತ್ವದ ಅಡಿಪಾಯವು ಸಂವಿಧಾನದ ಪೀಠಿಕೆಯಲ್ಲಿ ಪ್ರತಿಪಾದಿಸಲಾದ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ತತ್ವಗಳ ತಳಹದಿಯ ಮೇಲೆ ನಿಂತಿದೆ ಎಂಬುದನ್ನು ಪ್ರತಿಯೊಬ್ಬರು ನೆನಪಿಸಿಕೊಳ್ಳುವುದು ಅಗತ್ಯ’ ಎಂದರು.
‘ಸಾರ್ವಜನಿಕ ಕ್ಷೇತ್ರದಲ್ಲಿ ವೈಯಕ್ತಿಕ ನಂಬಿಕೆಗಳು, ಧರ್ಮ, ಸಿದ್ಧಾಂತಗಳೇನೇ ಇರಲಿ, ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಆದರ್ಶಗಳು, ಕರ್ತವ್ಯಗಳು ಮತ್ತು ಹಕ್ಕುಗಳು ಆಡಳಿತವನ್ನು ನಡೆಸುತ್ತವೆ. ಪ್ರತಿಯೊಬ್ಬ ನಾಗರಿಕನು ಕಾನೂನಿಗೆ ಬದ್ಧನಾಗಿರುವ ಸಂಸ್ಕೃತಿ ಬೆಳೆಸಿಕೊಳ್ಳುವ ಸಮಯ ಬಂದಿದೆ’ ಎಂದರು.
ಇದೇ ವೇಳೆ, ನ್ಯಾಯಮೂರ್ತಿಗಳಾದ ಆರ್.ನಟರಾಜ್, ಎಸ್.ವಿಶ್ವಜಿತ್ ಶೆಟ್ಟಿ, ಜೆ.ಎಂ.ಖಾಜಿ, ರಾಜೇಶ ರೈ.ಕೆ., ಹೆಚ್ಚುವರಿ ಮಹಾವಿಲೇಖನಾಧಿಕಾರಿ ಬಸವರಾಜ ಚೇಂಗಟಿ, ಹೆಚ್ಚುವರಿ ವಿಲೇಖನಾಧಿಕಾರಿ (ನ್ಯಾಯಾಂಗ) ದಯಾನಂದ ವಿ.ಎಚ್., ಗುಲಬರ್ಗಾ ವಕೀಲರ ಸಂಘದ ಅಧ್ಯಕ್ಷ ಗುಪ್ತಲಿಂಗ ಪಾಟೀಲ, ಹೈಕೋರ್ಟ್ ಘಟಕದ ಉಪಾಧ್ಯಕ್ಷ ಅಶೋಕ ಮೂಲಗೆ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಕಲಬುರಗಿಯಲ್ಲಿರುವ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಬಾಲರಾಜ ಗುತ್ತೇದಾರ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.
‘ಸಂವಿಧಾನ ಪ್ರಜಾಪ್ರಭುತ್ವ ರಾಷ್ಟ್ರದ ಆತ್ಮ’
ಕಲಬುರಗಿ: ‘ಈ ಸಂವಿಧಾನ ಕೇವಲ ದಾಖಲೆಯಲ್ಲ. ಅದು ನಮ್ಮ ಪ್ರಜಾಪ್ರಭುತ್ವ ರಾಷ್ಟ್ರದ ಆತ್ಮವಾಗಿದೆ. ಎಲ್ಲರಿಗೂ ನ್ಯಾಯ ಸಮಾನತೆ ಭ್ರಾತೃತ್ವ ಸಹಬಾಳ್ವೆ ಮತ್ತು ಸ್ವಾತಂತ್ರ್ಯವನ್ನು ನೀಡಿದೆ’ ಎಂದು ಗುಲಬರ್ಗಾ ವಿವಿ ಪ್ರಭಾರ ಕುಲಪತಿ ಪ್ರೊ. ಗುರು ಶ್ರೀರಾಮುಲು ಹೇಳಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಕಾರ್ಯ ಸೌಧದ ಎದುರು ಹಮ್ಮಿಕೊಂಡಿದ್ದ 76ನೇ ಗಣರಾಜ್ಯೋತ್ಸವದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಇಂದು ದೇಶವು ತಂತ್ರಜ್ಞಾನ ಯುಗದಲ್ಲಿ ಸಾಗುತ್ತಿದೆ. ಆರ್ಥಿಕ ಅಭಿವೃದ್ಧಿ ಸಾಮಾಜಿಕ ಸಾಮರಸ್ಯ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆ ಬೆಳೆಸಲು ದೇಶದ ಯುವಕರು ಶ್ರಮಿಸಬೇಕು’ ಎಂದರು. ಪ್ರಭಾರ ಕುಲಸಚಿವ ಪ್ರೊ. ರಮೇಶ್ ಲಂಡನಕರ್ ವಿತ್ತಾಧಿಕಾರಿ ಗಾಯತ್ರಿ ಇದ್ದರು. ಎನ್.ಜಿ. ಕಣ್ಣೂರ ಸ್ವಾಗತಿಸಿದರು. ಎಚ್.ಎಸ್. ಜಂಗೆ ವಂದಿಸಿದರು.
ಗಣರಾಜ್ಯೋತ್ಸವದ ಅಂಗವಾಗಿ ಕಲಬುರಗಿ ಮಹಾನಗರ ಪಾಲಿಕೆ ಆವರಣದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಲಾಯಿತು.
ಗಣರಾಜ್ಯೋತ್ಸವದ ಅಂಗವಾಗಿ ಭಾನುವಾರ ಕಲಬುರಗಿಯ ಜಗತ್ ವೃತ್ತದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಮೂರ್ತಿ ಎದುರು ಅಂತರ ಧರ್ಮೀಯ ಶಾಂತಿ ಸೌಹಾರ್ದ ವೇದಿಕೆಯಿಂದ ಸಂವಿಧಾನದ ಪೀಠಿಕೆ ಓದುವ ಮೂಲಕ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.