ADVERTISEMENT

ಈದ್‌ ಕಾರ್ಯಕ್ರಮಗಳಿಗೆ ಅವಕಾಶ ನೀಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2021, 4:01 IST
Last Updated 19 ಅಕ್ಟೋಬರ್ 2021, 4:01 IST
ಭಾರತ ಕಮ್ಯುನಿಸ್ಟ್‌ ಪಕ್ಷದ (ಮಾರ್ಕ್ಸ್‌ವಾದಿ) ಮುಖಂಡರು ಕಲಬುರಗಿ ಜಿಲ್ಲಾಧಿಕಾರಿ ಕಚೇರಿಯ ಎದುರು ಸೋಮವಾರ ಪ್ರತಿಭಟನೆ ನಡೆಸಿದರು
ಭಾರತ ಕಮ್ಯುನಿಸ್ಟ್‌ ಪಕ್ಷದ (ಮಾರ್ಕ್ಸ್‌ವಾದಿ) ಮುಖಂಡರು ಕಲಬುರಗಿ ಜಿಲ್ಲಾಧಿಕಾರಿ ಕಚೇರಿಯ ಎದುರು ಸೋಮವಾರ ಪ್ರತಿಭಟನೆ ನಡೆಸಿದರು   

ಕಲಬುರಗಿ: ಈದ್‌ ಮಿಲಾದ್‌ ಸಂದರ್ಭದಲ್ಲಿ ಪ್ರವಾದಿ ಮಹಮದ್‌ ಪೈಗಂಬರ ಅವರ ಕುರಿತು ಸಾರ್ವಜನಿಕ ಕಾರ್ಯಕ್ರಮ ಮಾಡಬಾರದು ಎಂದು ರಾಜ್ಯ ಸರ್ಕಾರ ಹೊರಡಿಸಿದ ಆದೇಶವನ್ನು ಖಂಡಿಸಿ, ಭಾರತ ಕಮ್ಯುನಿಸ್ಟ್‌ ಪಕ್ಷದ (ಮಾರ್ಕ್ಸ್‌ವಾದಿ) ಮುಖಂಡರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಕೊರೊನಾ ನೆಪ ಹೇಳಿಕೊಂಡು ಸರ್ಕಾರ ಮುಸ್ಲಿಂ ಸಮುದಾಯದ ಹಬ್ಬಗಳ ಮೇಲೆ ನಿಯಂತ್ರಣ ಹೇರುತ್ತಿದೆ. ಇದು ಸಾಂವಿಧಾನಿಕ ಕ್ರಮವಲ್ಲ. ಈ ಹಿಂದೆ ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿಯೇ ವಿಧಾನಸಭೆ ಉಪಚುನಾವಣೆಗಳನ್ನು ಮಾಡಲಾಗಿದೆ. ಪಕ್ಷದ ಪ್ರಚಾರ, ಮೆರವಣಿಗೆ, ವೇದಿಕೆ ಕಾರ್ಯಕ್ರಮಗಳಲ್ಲೂ ಸಾವಿರಾರು ಮಂದಿಯನ್ನು ಸೇರಿಸಿದ್ದಾರೆ. ಅಲ್ಲದೇ, ಕೇಂದ್ರ ಮಂತ್ರಿ ಮಂಡಳದಲ್ಲಿ ಸ್ಥಾನ ಪ‍ಡೆದವರು ಜನಾಶೀರ್ವಾದ ಯಾತ್ರೆ ಮಾಡಿ, ಮೆರವಣಿಗೆ ನಡೆಸಿದ್ದಾರೆ. ಕಾರ್ಯಕರ್ತರ ದೊಡ್ಡ ಗುಂಪು ಸೇರಿಸಿ ಸಭೆ– ಸಮಾರಂಭ ಮಾಡಿದ್ದಾರೆ. ಇದಾವುದಕ್ಕೂ ಕೋವಿಡ್‌ ಅಡ್ಡಿ ಬರಲಿಲ್ಲವೇ? ಎಂದು ಪ್ರತಿಭಟನಾಕಾರರು ಮನವಿಯಲ್ಲಿ ಪ್ರಶ್ನಿಸಿದ್ದಾರೆ.

ತಾರತಮ್ಯ, ಅಸ್ಪೃಶ್ಯತೆ, ಮೂಢನಂಬಿಕೆಗಳನ್ನು ಹೋಗಲಾಡಿಸಲು ಪೈಂಗಬರ ಅವರ ತತ್ವಗಳು ಪ್ರಭಾವ ಬೀರುತ್ತವೆ. ಈದ್‌ ಮಿಲಾದ್‌ ಸಂದರ್ಭದಲ್ಲಿ ಅವರ ತತ್ವಗಳನ್ನು ಪ್ರಚಾರ ಮಾಡುವುದು ಸರ್ಕಾರದ ಕರ್ತವ್ಯವಾಗಬೇಕು. ಅದನ್ನು ಬಿಟ್ಟು ಸಂಘಟನೆಗಳು ಮಾಡುವ ಕಾರ್ಯಕ್ರಮಕ್ಕೂ ತಡೆ ಒಡ್ಡುವುದು ಸರಿಯಲ್ಲ. ಗೃಹಸಚಿವರು ತಕ್ಷಣ ಈ ಆದೇಶ ಹಿಂಪಡೆಯಬೇಕು ಎಂದೂ ಆಗ್ರಹಿಸಿದ್ದಾರೆ.

ADVERTISEMENT

ಪಕ್ಷದ ಮುಖಂಡರಾದ ಶರಣಬಸಪ್ಪ ಮಮಶೆಟ್ಟಿ, ಎಂ.ಬಿ. ಸಜ್ಜನ, ಜಾವೀದ್‌ ಹುಸೇನ್‌ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.