ಕಲಬುರಗಿ: ‘ನಾಗರಿಕತೆಯು ಮಾನವೀಯತೆ ಬೆಳೆಸಿಕೊಳ್ಳುವವರೆಗೂ ಮೀಸಲಾತಿ ಅಸ್ತಿತ್ವದಲ್ಲಿರಲಿದೆ’ ಎಂದು ಚಿಂತಕ ಶಿವಸುಂದರ ಹೇಳಿದರು.
ರಾಜರ್ಷಿ ಛತ್ರಪತಿ ಶಾಹು ಮಹಾರಾಜರ 151ನೇ ಜನ್ಮದಿನದ ಅಂಗವಾಗಿ ನಗರದ ಕನ್ನಡ ಭವನದಲ್ಲಿ ಅಂಬೇಡ್ಕರ್ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಸಮಿತಿ ಶನಿವಾರ ಆಯೋಜಿಸಿದ್ದ ‘ಹಿಂದುಳಿದ ವರ್ಗಗಳ ಮೀಸಲಾತಿ ಮುಂದಿರುವ ಸವಾಲುಗಳು’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸಮಾಜದಲ್ಲಿನ ಮಾನವೀಯತೆ ಕೊರತೆಯೇ ಮೀಸಲಾತಿ ಹುಟ್ಟಿಗೆ ಕಾರಣ. ಜಾತಿ ಆಧಾರಿತ ವರ್ಗೀಕರಣ ಅಮಾನುಷ. ಶ್ರೇಣಿಕೃತ ವ್ಯವಸ್ಥೆಯ ಸಂದರ್ಭದಲ್ಲಿ ಅಸಮಾನತೆ ಸಾಮಾಜಿಕ ಕಾನೂನಾಗಿತ್ತು. ಈ ವ್ಯವಸ್ಥೆ ದೇಶದ ಶೇ 95ರಷ್ಟು ಜನರ ಹಿಂದುಳಿದಿರುವಿಕೆಗೆ ಕಾರಣವಾಗಿದೆ. ಇದೊಂದು ಚಾರಿತ್ರಿಕ ವಂಚನೆಯಾಗಿದೆ’ ಎಂದು ಅಭಿಪ್ರಾಯಪಟ್ಟರು.
‘ಭಾರತಕ್ಕೆ ಬ್ರಿಟಿಷರು ಬಾಹ್ಯ ವಸಾಹತುಶಾಹಿಗಳಾದರೆ, ಬ್ರಾಹ್ಮಣರು ಆಂತರಿಕ ವಸಾಹತುಶಾಹಿಗಳು. ಬ್ರಾಹ್ಮಣ್ಯ ಎನ್ನುವುದು ಆಸ್ತಿವಂತರ ಸಿದ್ಧಾಂತವಾಗಿದೆ. ಗಾಂಧಿಯೂ ಈ ಸಿದ್ಧಾಂತದ ಕಡೆಗಿದ್ದರು. ಶ್ರೇಣಿಕೃತ ವ್ಯವಸ್ಥೆ ಹಿಂದೂ ಧರ್ಮದ ಆಧಾರ ಸ್ತಂಭ ಎಂದು ತಿಳಿಸಿದ್ದರು’ ಎಂದು ಹೇಳಿದರು.
‘ಕಾಂಗ್ರೆಸ್‌ನಲ್ಲೂ ಮೀಸಲಾತಿ ವಿರೋಧಿಸುವವರಿದ್ದರು. ಅವರು ಸಾಮಾಜಿಕ ಸಮಾನತೆ ಇಷ್ಟಪಡುತ್ತಿರಲಿಲ್ಲ. 2010ರಲ್ಲಿ ಯುಪಿಎ ಸರ್ಕಾರ ಇಡಬ್ಲ್ಯೂಎಸ್ ಮೀಸಲಾತಿಯ ಮೂಲ ಕರಡು ತಯಾರಿಸಲಾಯಿತು. ಜಾರಿಗೆ ಮುಂದಾಗುವಷ್ಟರಲ್ಲಿ ಚುನಾವಣೆಗಳು ಘೋಷಣೆಯಾದ ಕಾರಣ ಅದು ಹಾಗೆಯೇ ಉಳಿದಿತ್ತು. ಈಗ ಅದನ್ನು ಬಿಜೆಪಿ ಜಾರಿ ಮಾಡಿದೆ. ಇದನ್ನೂ ಪ್ರಧಾನ ಮಂತ್ರಿ ಮೋದಿಯವರೂ ತಿಳಿಸಿದ್ದಾರೆ. ಇಡಬ್ಲ್ಯೂಎಸ್ ಮೀಸಲಾತಿಯನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಾಗ ಅದನ್ನು ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸ್ವಾಗತಿಸಿದ್ದು ನೋವಿನ ಸಂಗತಿ’ ಎಂದು ಬೇಸರ ವ್ಯಕ್ತಪಡಿಸಿದರು.
‘ಇಡಬ್ಲ್ಯೂಎಸ್ ಮೀಸಲಾತಿ ಜಾರಿ ಮಾಡುವ ಮೂಲಕ ಕೇಂದ್ರ ಸರ್ಕಾರ ಸಾಮಾಜಿಕ ಸಮಾನತೆಯ ಹಂದರವನ್ನು ಟೊಳ್ಳುಗೊಳಿಸುತ್ತಿದೆ’ ಎಂದರು.
‘ಖಾಸಗೀಕರಣ ಮೀಸಲಾತಿ ಮುಂದಿರುವ ದೊಡ್ಡ ಸವಾಲು. ಸರ್ಕಾರ, ತನ್ನ ಸ್ವಾಮ್ಯದಲ್ಲಿರುವ ಲಾಭದಾಯಕ ಉದ್ಯಮಗಳನ್ನೂ ಖಾಸಗೀಕರಣ ಮಾಡುತ್ತಿದೆ. ಖಾಸಗಿ ರಂಗದಲ್ಲಿ ಮೀಸಲಾತಿಗೆ ಅವಕಾಶ ಇರದ ಕಾರಣ ಅದು ಅರ್ಥ ಕಳೆದುಕೊಳ್ಳುತ್ತಿದೆ. ಗುತ್ತಿಗೆ ಆಧಾರದ ಕೆಲಸ ಹಾಗೂ ಖಾಸಗೀಕರಣ ಮೀಸಲಾತಿ ನಿರಾಕರಣೆಯ ಭಾಗವಾಗಿದೆ’ ಎಂದು ಹೇಳಿದರು.
‘ನಿರ್ದಿಷ್ಟ ಜಾತಿಗಳ ಕುರಿತು ಕೋರ್ಟ್‌ಗಳಿಗೆ ಪೂರ್ವಗ್ರಹಗಳಿವೆ. ಖಾಸಗಿ ಕ್ಷೇತ್ರದ ಮೀಸಲಾತಿ ಕುರಿತು ಮಾತನಾಡಿದರೆ ದಕ್ಷತೆಯ ಪ್ರಶ್ನೆ ಎತ್ತುತ್ತವೆ’ ಎಂದರು.
ಜಾತಿ ಶ್ರೇಣಿಕೃತ ವ್ಯವಸ್ಥೆಯ ಭಾಗವಾಗಬೇಕು ಎಂದಿದ್ದರು ಮಹಾತ್ಮ ಗಾಂಧಿ. ಮೀಸಲಾತಿಯಿಂದ ದಕ್ಷತೆ ಕಡಿಮೆ ಆಗುತ್ತದೆ ಎಂದು ಜವಾಹರ್‌ಲಾಲ್ ನೆಹರು ಭಾವಿಸಿದ್ದರು. ಆದರೆ ದೇಶದಲ್ಲಿ ಮೊದಲ ಬಾರಿಗೆ ಜಾತಿ ವಿನಾಶ ಪ್ರತಿಪಾದಿಸಿದ್ದು ಜ್ಯೋತಿಭಾ ಪುಲೆ, ಅಂಬೇಡ್ಕರ್ ಮಾತ್ರ ಎಂದು ಹೇಳಿದರು.
ಉಪನ್ಯಾಸಕ ಅನಿಲ ಟೆಂಗಳಿ ಮಾತನಾಡಿ, ‘ಮೀಸಲಾತಿ ಬಡತನ ನಿರ್ಮೂಲನಾ ಕಾರ್ಯಕ್ರಮವಲ್ಲ. ಅದು ಹಕ್ಕು. ಮೀಸಲಾತಿಯ ಲಾಭ ಪಡೆಯುತ್ತಿದ್ದರೂ ಓಬಿಸಿಗಳು ಸಂವಿಧಾನ, ಮೀಸಲಾತಿ ಕುರಿತು ಪೂರ್ವಗ್ರಹದಿಂದ ಮಾತನಾಡುತ್ತಾರೆ. ಅವರಿಗೆ ಅರಿವು ಮೂಡಿಸಬೇಕಾದ ಅಗತ್ಯವಿದೆ. ಆದ್ದರಿಂದ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದು ತಿಳಿಸಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಕುಲಸಚಿವ ಲಕ್ಷ್ಮಣ ರಾಜನಾಳಕರ್ ಮಾತನಾಡಿದರು. ಒಕ್ಕೂಟದ ಮಾರ್ಗದರ್ಶಕ ಚಂದ್ರಶೇಖರ ಏಕಲೂರೆ ಅಧ್ಯಕ್ಷತೆ ವಹಿಸಿದ್ದರು.
ಇದೇ ವೇಳೆ ಕಲ್ಯಾಣಿ ಅವರನ್ನು ಸನ್ಮಾನಿಸಲಾಯಿತು. ಸಹ ಪ್ರಾಧ್ಯಾಪಕಿ ನಿರ್ಮಲಾ ಸಿರಗಾಪುರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಮಲ್ಲಿಕಾರ್ಜುನ ಮುಕ್ಕ, ಕಸಾಪ ಜಿಲ್ಲಾ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ನಿಲಯ ಪಾಲಕಿ ರೂಪ, ಹೋರಾಟಗಾರ ಬಸವರಾಜ ಎಂ.ರಾವೂರ, ಹಡಪದ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ ಹಡಪದ, ವಕೀಲ ರಾಜಕುಮಾರ ಪೂಜಾರಿ, ಅಂಬೇಡ್ಕರ್ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಸಮಿತಿ ಅಧ್ಯಕ್ಷ ಶೇಖರ ಕೋರೆ ಹಾಜರಿದ್ದರು.
ಅಸಮಾನ ಸಮಾಜದಲ್ಲಿ ಎಲ್ಲವನ್ನೂ ಸಮಾನವಾಗಿ ನೀಡುತ್ತೇವೆ ಎನ್ನುವುದು ಹಾಸ್ಯಾಸ್ಪದ. ಇಡಬ್ಲೂಎಸ್ ಮೀಸಲಾತಿಯು ಸಾಮಾಜಿಕ ನ್ಯಾಯ ಪರಿಕಲ್ಪನೆಯನ್ನೇ ನಾಶಪಡಿಸಿದೆ.–ಶಿವಸುಂದರ್, ಚಿಂತಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.