ADVERTISEMENT

ಉದ್ಯಾನಕ್ಕೆ ಕಾಲೊನಿ ನಿವಾಸಿಗಳೇ ‘ಉಸಿರು’

ಕೆಎಚ್‌ಬಿ ಅಕ್ಕಮಹಾದೇವಿ ಕಾಲೊನಿಯಲ್ಲಿನ ಪಾರ್ಕ್ ನಿರ್ವಹಣೆಗೆ ಸಾರ್ವಜನಿಕ ಸಮಿತಿ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2021, 3:01 IST
Last Updated 14 ಫೆಬ್ರುವರಿ 2021, 3:01 IST
ಕಲಬುರ್ಗಿ ನಗರದ ಕೆಎಚ್‌ಬಿ ಅಕ್ಕಮಹಾದೇವಿ ಕಾಲೊನಿಯಲ್ಲಿರುವ ಸಾರ್ವಜನಿಕ ಉದ್ಯಾನದಲ್ಲಿ ಬ್ಯಾಡ್ಮಿಂಟನ್ ಟೂರ್ನಿ ನಡೆಯಿತು –ಪ್ರಜಾವಾಣಿ ಚಿತ್ರಗಳು: ಪ್ರಶಾಂತ್ ಎಚ್‌.ಜಿ
ಕಲಬುರ್ಗಿ ನಗರದ ಕೆಎಚ್‌ಬಿ ಅಕ್ಕಮಹಾದೇವಿ ಕಾಲೊನಿಯಲ್ಲಿರುವ ಸಾರ್ವಜನಿಕ ಉದ್ಯಾನದಲ್ಲಿ ಬ್ಯಾಡ್ಮಿಂಟನ್ ಟೂರ್ನಿ ನಡೆಯಿತು –ಪ್ರಜಾವಾಣಿ ಚಿತ್ರಗಳು: ಪ್ರಶಾಂತ್ ಎಚ್‌.ಜಿ   

ಕಲಬುರ್ಗಿ: ಹಚ್ಚ ಹಸಿರಿನಿಂದ ಕಂಗೊಳಿಸುವ ವಿವಿಧ ತಳಿಯ ಗಿಡ ಮರಗಳು. ಒಂದೆಡೆ ಚೆಂಡಾಟ, ಜೋಕಾಲಿ, ಕಬ್ಬಡ್ಡಿ ಸೇರಿದಂತೆ ವಿವಿಧ ಆಟಗಳಲ್ಲಿ ತಲ್ಲೀನರಾಗಿರುವ ಚಿಣ್ಣರು. ಇನ್ನೊಂದೆಡೆ ಬ್ಯಾಡ್ಮಿಂಟನ್‌ ಆಟವಾಡುವ ಹಿರಿಯರು, ಇದೆಲ್ಲವನ್ನೂ ನೋಡುತ್ತಾ ನಿಧಾನವಾಗಿ ಹೆಜ್ಜೆ ಹಾಕುವ ವೃದ್ಧರು.

ನಗರದ ಹೈಕೋರ್ಟ್ ಬಳಿಯ ಕೆಎಚ್‌ಬಿ ಅಕ್ಕಮಹಾದೇವಿ ಕಾಲೊನಿಯಲ್ಲಿರುವ ಸಾರ್ವಜನಿಕ ಉದ್ಯಾನದಲ್ಲಿ ನಿತ್ಯ ಬೆಳಿಗ್ಗೆ ಹಾಗೂ ಸಂಜೆ ಕಂಡುಬರುವ ದೃಶ್ಯ ಇದು.

ಉತ್ತಮ ನಿರ್ವಹಣೆ ಇಲ್ಲದೆ ಹಾಳಾಗುತ್ತಿರುವ ನಗರದ ಹಲವು ಸಾರ್ವಜನಿಕ ಉದ್ಯಾನಗಳ ನಡುವೆ ಇಲ್ಲಿನ ಉದ್ಯಾನ ಮಾತ್ರ ದಿನದಿಂದ ದಿನಕ್ಕೆ ಅಭಿವೃದ್ಧಿಗೊಳ್ಳುತ್ತಾ ಸಾರ್ವಜನಿಕರ ನೆಚ್ಚಿನ ತಾಣವಾಗಿ ಬದಲಾಗುತ್ತಿದೆ. ಇದೆಲ್ಲಕ್ಕೂ ಕಾರಣ ಇಲ್ಲಿನ ನಿವಾಸಿಗಳೇ ಸ್ಥಾಪಿಸಿಕೊಂಡಿರುವ ‘ಅಕ್ಕಮಹಾದೇವಿ ಕಾಲೊನಿ ಸಮಿತಿ’.

ADVERTISEMENT

2018ರಲ್ಲಿ ಕೇಂದ್ರ ಸರ್ಕಾರದ ‘ಅಮೃತ್’ ಯೋಜನೆಯಡಿಅಭಿವೃದ್ಧಿ ಪಡಿಸಿರುವಈ ಉದ್ಯಾನದ ನಿರ್ವಹಣೆಗಾಗಿ ಇಲ್ಲಿನ ನಿವಾಸಿಗಳೇ ಸೇರಿ ಸಮಿತಿ ರಚಿಸಿಕೊಂಡರು. ಅಂದಿನಿಂದ ಇಂದಿನವರೆಗೂ ಉದ್ಯಾನದ ಬೇಕು ಬೇಡುಗಳನ್ನು ಈ ಸಮಿತಿಯೇ ನಿರ್ವಹಿಸುತ್ತಿದೆ. ಇದು ಇತರ ಕಾಲೊನಿ ಜನರಿಗೆ ಮಾದರಿಯಾಗುವ ಕಾರ್ಯ ಎಂದು ಕಾಲೊನಿ ನಿವಾಸಿ, ಮಾಜಿ ಶಾಸಕ ಬಿ.ಆರ್.ಪಾಟೀಲ ಪ್ರಶಂಸೆ ವ್ಯಕ್ತಪಡಿಸಿದರು.

‘ಅರಣ್ಯ ಇಲಾಖೆಗೆ ಮನವಿ ಮಾಡಿ ವಿವಿಧ ತಳಿಯ ಸಸಿಗಳನ್ನು ತಂದು ನೆಟ್ಟಿದ್ದೇವೆ. ಅವುಗಳ ನಿರ್ವಹಣೆಗಾಗಿ ಬೋರ್‌ವೆಲ್‌ ಕೊರೆಸಿದ್ದೇವೆ. ನಿತ್ಯವೂ ಗಿಡ ಮರಗಳಿಗೆ ನೀರುಣಿಸುವ ಕಾರ್ಯ ಮಾಡುತ್ತೇವೆ. ಪೌರಕಾರ್ಮಿಕರು ಹಾಗೂ ಬಡಾವಣೆ ನಿವಾಸಿಗಳ ಸಹಕಾರದಿಂದ ಸ್ವಚ್ಛತೆ ಕಾರ್ಯವೂ ನಿತ್ಯ ನಡೆಯುತ್ತದೆ’ ಎನ್ನುತ್ತಾರೆ ಸಮಿತಿಯ ಅಧ್ಯಕ್ಷ ಪ್ರಕಾಶ ಯಂಕಂಚಿ.

ಉದ್ಯಾನದಲ್ಲಿರುವ ಮಲ್ಲಿಗೆ, ಗುಲಾಬಿ ಸೇರಿದಂತೆ ವಿವಿಧ ತಳಿಯ ಹೂವಿನ ಗಿಡಗಳು ಕಣ್ಮನ ಸೆಳೆಯುತ್ತವೆ. ಬೇವು ಹಾಗೂ ಇನ್ನಿತರ ಮರಗಳು ನೆರಳು ನೀಡುತ್ತಿವೆ. ಉದ್ಯಾನದ ಒಳಗೆ ಹಾಗೂ ಸುತ್ತಲೂ ಬೀದಿ ದೀಪ ಅಳವಡಿಸಲಾಗಿದೆ. ಶೌಚಾಲಯ ವ್ಯವಸ್ಥೆಯೂ ಇದೆ.

ಉದ್ಯಾನದ ಸುತ್ತ ಹಾಗೂ ಮಧ್ಯದಲ್ಲಿ ನಡಿಗೆ ಪಥ ಇವೆ. ಅಲ್ಲಲ್ಲಿ ಕುಳಿತು ವಿಶ್ರಾಂತಿ ಪಡೆಯಲು ಆಸನಗಳಿವೆ. ಮಧ್ಯದಲ್ಲಿ ಆಕರ್ಷಣೆಯ ಗೋಪುರ ಇದೆ.

ಇಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಿಸಿ, ಉದ್ಯಾನಕ್ಕೆ ಭದ್ರತಾ ಸಿಬ್ಬಂದಿಯನ್ನು ನೇಮಿಸಿದರೆ ಹೆಚ್ಚಿನ ಅನುಕೂಲ. ಈ ಬಗ್ಗೆ ಮಹಾನಗರ ಪಾಲಿಕೆ ಅಧಿಕಾರಿಗಳು ಗಮನ ಹರಿಸಬೇಕು ಎಂಬುದು ಸಮಿತಿಯ ಮುಖಂಡರಾದ ಸುಶೀಲ ಕುಮಾರ ಎಂ. ಮಾಮಡಿ, ಭಗವಾನ ಚಾಕೂರೆ, ರವಿ ನಂದೂರು, ಶ್ರೀಕಾಂತ ನಿರೋಣಿ, ಮಲ್ಲಿನಾಥ ಮಂಗಲಗಿ, ಶಿವಕುಮಾರ ಪಾಟೀಲ, ನರಸಿಂಹ ಗೋಟೆ, ಹನಮಂತ ಚಾಂಡೂರೆ, ಅಮರೇಶ ಪಾಟೀಲ, ಲಿಂಗರಾಜ ಪಾಟೀಲ ಅವರ ಮನವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.