ಕಾಳಗಿ: ಧಾರ್ಮಿಕ ದತ್ತಿ ಇಲಾಖೆಯ ಶ್ರೀಕ್ಷೇತ್ರ ರೇವಗ್ಗಿ (ರಟಕಲ್) ಗುಡ್ಡದ ರೇವಣಸಿದ್ದೇಶ್ವರ ಜಾತ್ರಾ ಮಹೋತ್ಸವ ಶ್ರಾವಣಮಾಸದ ನಡುವಿನ ಸೋಮವಾರ ಬಹು ವಿಜೃಂಭಣೆಯಿಂದ ಜರುಗಿತು.
ವಿವಿಧೆಡೆಯಿಂದ ಆಗಮಿಸಿದ ಅಪಾರ ಭಕ್ತರು ಶ್ರದ್ಧಾಭಕ್ತಿಯಿಂದ ಸರತಿ ಸಾಲಿನಲ್ಲಿ ನಿಂತು ಕಾಯಿ ಕರ್ಪೂರ, ನೈವೇದ್ಯ ಸಲ್ಲಿಸಿ, ಜೈಕಾರ ಹಾಕುತ್ತ ಭಕ್ತಿಭಾವ ಮೆರೆದು ಸಂಭ್ರಮಿಸಿದರು.
ನಸುಕಿನಜಾವ ಗರ್ಭಗುಡಿಯಲ್ಲಿ ರೇವಣಸಿದ್ದೇಶ್ವರ ಮೂರ್ತಿಗೆ ವಿಶೇಷ ಪೂಜೆ, ಅಭಿಷೇಕ ಸಲ್ಲಿಸಲಾಯಿತು. ನಂತರದಲ್ಲಿ ಸುತ್ತಲಿನ ಏಳು ಗ್ರಾಮಗಳ ಭಕ್ತರು ದೇವಸ್ಥಾನಕ್ಕೆ ಬಂದು ಖಾಲಿ ಪಲ್ಲಕ್ಕಿಯೊಂದಿಗೆ ರೇವಗ್ಗಿ ಗ್ರಾಮದ ಚನ್ನಬಸಪ್ಪ ದೇವರಮನೆಗೆ ತೆರಳಿದರು.
ಅಲ್ಲಿಂದ ಉತ್ಸವ ಮೂರ್ತಿ ವಿವಿಧ ವಾದ್ಯಮೇಳಗಳ ಮೆರವಣಿಗೆಯೊಂದಿಗೆ ದೇವಸ್ಥಾನಕ್ಕೆ ತಂದು ಮಂಗಳಾರತಿ ಮಾಡಲಾಯಿತು. ಬಳಿಕ ರಟಕಲ್ ಗ್ರಾಮದಿಂದ ಭಜನೆ ತಂಡ ಬರಮಾಡಿ ಮಹಾಮಂಗಳಾರತಿ ಸಲ್ಲಿಸಿ, ಸಂಜೆ ಅಲಂಕೃತ ಬೆಳ್ಳಿಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಲಾಯಿತು.
ಪಲ್ಲಕ್ಕಿಯು ಗುಡ್ಡದ ಮಧ್ಯೆ ದೇವಸ್ಥಾನದ ಪ್ರದಕ್ಷಿಣೆ ಹಾಕಿತ್ತು. ಅಸಂಖ್ಯಾತ ಭಕ್ತರು ಜಯಘೋಷ ಮೊಳಗಿಸಿ ಉತ್ತತ್ತಿ, ಫಲಪುಷ್ಪ ಪಲ್ಲಕ್ಕಿ ಮೇಲೆ ತೂರಿ ಕೈ ಮುಗಿದು ಕೃತಾರ್ಥರಾದರು.
ಸುತ್ತಲಿನ ಗ್ರಾಮಗಳ ಭಕ್ತರು ಪಾದಯಾತ್ರೆ ಮೂಲಕ ಆಗಮಿಸಿ ನೈವೇದ್ಯ ಸಲ್ಲಿಸಿ ಹರಕೆ ತೀರಿಸಿದರು. ದೇವಸ್ಥಾನ ಸಮಿತಿ ಮತ್ತು ಭಕ್ತರು ವಿವಿಧೆಡೆ ಅನ್ನದಾಸೋಹ, ಕುಡಿಯುವ ನೀರಿನ ವ್ಯವಸ್ಥೆ ಮಾಡಿದರು. ಕಂದಗೂಳ ಕ್ರಾಸ್, ಅರಣಕಲ್, ಬೆಡಸೂರ, ಮಾವಿನಸೂರ ರಸ್ತೆ ಮಾರ್ಗದಲ್ಲಿ 2ಕಿ.ಮೀ ವರೆಗೆ ವಾಹನ ದಟ್ಟಣೆ ಹೆಚ್ಚಿತ್ತು.
ಶಹಾಬಾದ್ ಡಿವೈಎಸ್ಪಿ ಶಂಕರಗೌಡ ಪಾಟೀಲ, ಕಾಳಗಿ ಸಿಪಿಐ ಜಗದೇವಪ್ಪ ಪಾಳಾ, ಕಾಳಗಿ ಪಿಎಸ್ಐ ತಿಮ್ಮಯ್ಯ ಬಿ.ಕೆ ನೇತೃತ್ವದಲ್ಲಿ 150ಕ್ಕೂ ಹೆಚ್ಚು ಪೊಲೀಸರು ಬಂದೋಬಸ್ತ್ ಕಲ್ಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.