ADVERTISEMENT

ಕಲಬುರಗಿ: ‘ಜಿಲ್ಲಾಸ್ಪತ್ರೆಯಲ್ಲಿ ರುಮಟಾಲಜಿ ಒಪಿಡಿ ಆರಂಭಿಸಿ’

ಭಾರತೀಯ ರುಮಟಾಲಜಿ ತಜ್ಞ ವೈದ್ಯರ ಸಂಘದಿಂದ ಮನವಿ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2022, 12:48 IST
Last Updated 30 ಏಪ್ರಿಲ್ 2022, 12:48 IST
ಸಚಿನ್ ಜೀವಣಗಿ
ಸಚಿನ್ ಜೀವಣಗಿ   

ಕಲಬುರಗಿ: ರಾಜ್ಯದ ಪ್ರತಿ ಜಿಲ್ಲಾಸ್ಪತ್ರೆಗಳಲ್ಲಿ ರುಮಟಾಲಜಿ (ಕೀಲು ವಾಯು, ಸಂಧಿವಾತ) ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಹೊರರೋಗಿ ವಿಭಾಗ (ಒಪಿಡಿ)ವನ್ನು ಆರಂಭಿಸಬೇಕು ಎಂದು ಭಾರತೀಯ ರುಮಟಾಲಜಿ ತಜ್ಞ ವೈದ್ಯರ ಸಂಘವು ಒತ್ತಾಯಿಸಿದೆ.

ಈ ಕುರಿತು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಲಬುರಗಿಯ ರುಮಟಾಲಜಿ ತಜ್ಞ ಡಾ. ಸಚಿನ್ ಜೀವಣಗಿ, ‘ಸಂಘದ ಮನವಿಯನ್ನು ಪರಿಗಣಿಸಿ ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ತಿಂಗಳಿಗೆ ಒಂದು ಬಾರಿ ಉಚಿತ ಒಪಿಡಿ ಕ್ಲಿನಿಕ್ ಆರಂಭಿಸಲು ಸಂಸ್ಥೆಯ ನಿರ್ದೇಶಕರು ಅನುಮತಿ ನೀಡಿದ್ದಾರೆ. ಜಿ‌ಮ್ಸ್ ಆಸ್ಪತ್ರೆಯಲ್ಲಿಯೂ ವಾರದಲ್ಲಿ ಕೆಲ ದಿನ ಒಪಿಡಿ ಮಾಡಿದರೆ ಬಡ ರೋಗಿಗಳಿಗೆ ಅನುಕೂಲವಾಗಲಿದೆ. ಎಷ್ಟೋ ಜನರಿಗೆ ರುಮಟಾಲಜಿ ಬಗ್ಗೆ ಮಾಹಿತಿಯೇ ಇರುವುದಿಲ್ಲ’ ಎಂದರು.

ವಾಯು ರೋಗವು ವೃದ್ಧಾಪ್ಯದ ವಯೋಸಹಜ ಕಾಯಿಲೆಗಳೆಂದು ಕಡೆಗಣಿಸಲಾಗುತ್ತದೆ. ಈ ಕಾಯಿಲೆಗಳು ಯುವಕ, ಯುವತಿಯರು ಹಾಗೂ ಮಧ್ಯ ವಯಸ್ಕರಲ್ಲಿ, ಚಿಕ್ಕ ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ರುಮಟಾಯ್ಡ್ ಅರ್ಥರೈಟಿಸ್, ಅಂಕಿಲೊಸಿಂಗ್ ಸ್ಪಾಂಡಿಲೈಟಿಸ್, ಸೋರಿಯಾಟಿಕ್ ಅರ್ಥರೈಟಿಸ್, ಲೂಪಸ್, ಗೌಸ್ ಮೊದಲಾದವು ರುಮಟಾಲಜಿ ಕಾಯಿಲೆಗಳಾಗಿದ್ದು, ಸಕಾಲಕ್ಕೆ ಊಟ, ಉಪಾಹಾರ, ದೈಹಿಕ ಚಟುವಟಿಕೆಗಳನ್ನು ಮಾಡಿದರೆ ಈ ಕಾಯಿಲೆ ಬರುವುದಿಲ್ಲ. ಆದರೆ, ಹೆಚ್ಚು ಬೆಳೆ ತೆಗೆಯಲು ರಾಸಾಯನಿಕ ಸಿಂಪಡಣೆ ಮಾಡುವುದರಿಂದ ಶುದ್ಧ ಆಹಾರವೇ ಮರೀಚಿಕೆಯಾಗಿದೆ ಎಂದು ಹೇಳಿದರು.

ADVERTISEMENT

ರುಮ್ಯಾಟಿಕ್ ಕಾಯಿಲೆಗಳನ್ನು ಆರೋಗ್ಯ ವಿಮೆ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಬಹುತೇಕ ಖಾಸಗಿ ಕಂಪನಿಗಳ ಪಾಲಿಸಿಗಳು ಹಾಗೂ ಸರ್ಕಾರಿ ವಿಮಾ ಸೌಲಭ್ಯಗಳಾದ ಯಶಸ್ವಿನಿ, ಆರೋಗ್ಯ ಭಾಗ್ಯ, ಆಯುಷ್ಮಾನ್ ಭಾರತ್ ಮೊದಲಾದವುಗಳಲ್ಲಿ ಆರೋಗ್ಯ ವಿಮೆ ಸಿಗುವುದಿಲ್ಲ. ಈ ವಿಮೆ ನಿಯಮಗಳನ್ನು ಪರಿಷ್ಕರಿಸುವ ತುರ್ತು ಅಗತ್ಯವಿದೆ ಎಂದರು.

ರಾಜ್ಯದಲ್ಲಿ 75 ಜನ ಮಾತ್ರ ರುಮಟಾಲಜಿ ತಜ್ಞರಿದ್ದು, 50 ಜನ ಬೆಂಗಳೂರಿನಲ್ಲೇ ಇದ್ದಾರೆ. ಮೂರು ಜನ ಕಲ್ಯಾಣ ಕರ್ನಾಟಕದಲ್ಲಿ ಇದ್ದೇವೆ. ವಾರದಲ್ಲಿ ಒಂದೆರಡು ದಿನ ರಾಯಚೂರು, ಯಾದಗಿರಿ, ವಿಜಯಪುರ, ಸೊಲ್ಲಾಪುರಕ್ಕೆ ಹೋಗಿ ರೋಗಿಗಳ ತಪಾಸಣೆ ಮಾಡುತ್ತೇವೆ. ಜಿಲ್ಲಾಸ್ಪತ್ರೆಗಳಲ್ಲಿ ಒಪಿಡಿ ಆರಂಭಿಸಿದರೆ ನಾವು ರೋಗಿಗಳ ಕಾಯಿಲೆಗಳನ್ನು ವಾಸಿ ಮಾಡಬಹುದು ಎಂದು ತಿಳಿಸಿದರು.

ಜನಜಾಗೃತಿ: ಭಾರತೀಯ ರುಮಟಾಲಜಿ ಸಂಘದ ರಾಷ್ಟ್ರೀಯ ಅಧ್ಯಕ್ಷ ಡಾ. ಧರ್ಮಾನಂದ ಅವರ ಪರಿಕಲ್ಪನೆಯಂತೆ ಏಪ್ರಿಲ್ ತಿಂಗಳಲ್ಲಿ ದೇಶದಾದ್ಯಂತ ನಡೆದಿವೆ. ಕರ್ನಾಟಕದಲ್ಲಿ ಸಂಘದ ರಾಜ್ಯ ಅಧ್ಯಕ್ಷ ಡಾ. ಚಂದ್ರಶೇಖರ ಮತ್ತು ಕಾರ್ಯದರ್ಶಿ ನಾಗರಾಜ ನೇತೃತ್ವದಲ್ಲಿ ಜನಜಾಗೃತಿ ಕಾರ್ಯಕ್ರಮ ನಡೆಸಲಾಗಿದೆ ಎಂದರು.

ಡಾ. ರಾಹುಲ್, ಡಾ. ಶಿವಪುತ್ರಪ್ಪ ಘಂಟೆ ಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.