ADVERTISEMENT

ರೌಡಿಶೀಟರ್‌ ಬರ್ಬರ ಕೊಲೆ

ಪೀರ್‌ ಬೆಂಗಾವಲಿ ಮೈದಾನದ ಕಸದ ತೊಟ್ಟಿಯಲ್ಲಿ ಶವ ಹೂತಿಟ್ಟು ಪರಾರಿ

​ಪ್ರಜಾವಾಣಿ ವಾರ್ತೆ
Published 20 ಜೂನ್ 2020, 11:21 IST
Last Updated 20 ಜೂನ್ 2020, 11:21 IST
ಹಸನ್ ಅಲಿ
ಹಸನ್ ಅಲಿ   

ಕಲಬುರ್ಗಿ: ಇಲ್ಲಿನ ಪೀರ್‌ ಬೆಂಗಾವಲಿ ಮೈದಾನದಲ್ಲಿ ಶನಿವಾರ ನಸುಕಿನಲ್ಲಿ, ರೌಡಿಶೀಟರ್‌ ಒಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ, ಪಾಲಿಕೆಯ ಕಸದ ತೊಟ್ಟಿಯಲ್ಲಿ ಎಸೆಯಲಾಗಿದೆ.

ನಗರದ ಬುಲಂದ್ ಪರ್ವೇಜ್ ಕಾಲೊನಿಯ ನಿವಾಸಿ ಹಸನ್ ಅಲಿ ಅಲಿಯಾಸ್‌ ‘ಚಿಂದಿ ಹಸನ್‌’ (24) ಕೊಲೆಯಾದವ. ಇದೇ ಕಾಲೊನಿಯ ಅಬ್ಬಾಸ್‌ ಅಲಿ ಎನ್ನುವವರ ಮಗ. ಸುಮಾರು ಎಂಟು ವರ್ಷಗಳಿಂದ ಈತ ನಗರದಲ್ಲಿ ಪೇಂಟಿಂಗ್‌ ಕೆಲಸ ಮಾಡುತ್ತಿದ್ದ. ಕೆಲವು ವರ್ಷಗಳಿಂದ ದರೋಡೆ ಪ್ರಕರಣ ಪಾಲ್ಗೊಂಡು ಎರಡು ಬಾರಿ ಜೈಲು ಸೇರಿದ್ದ.

2016ರಲ್ಲಿ ಇವರ ಮನೆಯಲ್ಲೇ ಬಾಡಿಗೆಗೆ ಇದ್ದ, ಲಾರಿ ಕ್ಲೀನರ್‌ ರಾಮು ಗೊಲ್ಲಪ್ಪ ಬಲಕುಂಡಿ ಎಂಬ ಯುವಕನ್ನು ಹೊಡೆದು ಕೊಲೆ ಮಾಡಿದ್ದ. ನಾಲ್ಕು ವರ್ಷ ಜೈಲಿನಲ್ಲಿದ್ದು, ಇದೇ ಜನವರಿಯಲ್ಲಿ ಜಾಮೀನಿನ ಮೇಲೆ ಬಿಡುಗಡೆ ಹೊಂದಿ ಮನೆಗೆ ಮರಳಿದ್ದ ಎಂದು ಗ್ರಾಮೀಣ ಠಾಣೆ ಪೊಲೀಸರು ತಿಳಿಸಿದ್ದಾರೆ.‌

ADVERTISEMENT

‘ಶನಿವಾರ ನಸುಕಿನ 4ಕ್ಕೆ ಸ್ನೇಹಿತರು ಫೋನ್‌ ಮಾಡಿ ಕರೆಸಿಕೊಂಡಿದ್ದರು. ಎಲ್ಲರೂ ಸೇರಿಕೊಂಡು ಸಾರಾಯಿ ಕುಡಿದು, ಗಾಂಜಾ ಸೇರಿದ್ದರು. ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ಮಧ್ಯೆ ಜಗಳ ನಡೆದಿದ್ದು, ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.‌ ನಂತರ ಕಸದ ತೊಟ್ಟಿಯಲ್ಲಿ ಶವ ಎಸೆದು, ಅದರ ಮೇಲೆ ಕಸ ಹಾಕಿ ಪರಾರಿಯಾಗಿದ್ದಾರೆ’ ಎಂದೂ ಮೂಲಗಳು ಮಾಹಿತಿ ನೀಡಿವೆ.

ಪೀರ್ ಬೆಂಗಾವಲಿ ಮೈದಾನದ ಮೂಲೆಯಲ್ಲಿ ಇಟ್ಟಿದ್ದ ಕಸದ ತೊಟ್ಟಿಯಲ್ಲಿ ಶವ ಬಿದ್ದಿತ್ತು. ಶನಿವಾರ ನಸುಕಿನಲ್ಲಿ ಸುತ್ತಲಿನ ಜನ ಕಸ ಎಸೆಯಲು ಹೋದಾಗಲೇ ವಿಷಯ ಬಹಿರಂಗಗೊಂಡಿದೆ.‌‌

ಸಿಂದಿ ಕುಡಿಯುತ್ತಿದ್ದ ಚಿಂದಿ ಹಸನ್‌: ಕೊಲೆಯಾದ ಹಸನ್‌ ಅಲಿ ಸಿಂದಿ (ಸೇಂದಿ) ಪ್ರಿಯನಾಗಿದ್ದ. ಕಾರಣ ಗೆಳೆಯರು ಈತನಿಗೆ ಸಿಂದಿ ಹಸನ್‌– ಚಿಂದಿ ಹಸನ್‌ ಎಂದು ಅಡ್ಡ ಹೆಸರು ಹಿಡಿದು ಕರೆಯುತ್ತಿದ್ದರ ಎನ್ನಲಾಗಿದೆ.‌

ಡಿಸಿಪಿ ಡಿ.ಕಿಶೋರ್‌ ಬಾಬು, ಗ್ರಾಮೀಣ ಠಾಣೆಯ ಇನ್‌ಸ್ಪೆಕ್ಟರ್ ಸೋಮಲಿಂಗ ಕಿರೇದಳ್ಳಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.‌ ಹಸನ್ ಅಲಿಗೆ ಫೋನ್‌ ಮಾಡಿದ ಮೊಬೈಲ್ ನಂಬರ್‌ನ ಜಾಡು ಹಿಡಿದು ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ.

ಮೃತ ದೇಹವನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿ, ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದವರಿಗೆ ಹಸ್ತಾಂತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.