
ಕಲಬುರಗಿ: ‘ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥಸಂಚಲನದ ವಿಷಯವಾಗಿ ಸಚಿವ ಪ್ರಿಯಾಂಕ್ ಖರ್ಗೆ ಅವರು ತಮ್ಮ ಬೇಳೆ ಬೇಯಲಿಲ್ಲ ಎನ್ನುವ ಕಾರಣಕ್ಕೆ ಪರವಾನಗಿ ಕೊಟ್ಟಿದ್ದು ನಾವು ಎಂದು ಹೇಳಿಕೊಂಡಿದ್ದಾರೆ. ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಅನ್ನುವ ಹಾಗಿದೆ ಅವರ ವರ್ತನೆ. ಕದನದೋಳ್ ಆರ್‌ಎಸ್‌ಎಸ್ ಕೆಣಕಿ ಉಳಿದವರಿಲ್ಲ. ಸಚಿವರು ಇದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಶಿವಸೇನಾ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನ್ಯಾಯಾಲಯದಲ್ಲಿ ನಡೆದಂತಹ ಘಟನೆಗಳನ್ನು ವಕೀಲರಿಗೆ ಕೇಳಿ ತಿಳಿದುಕೊಂಡಿದ್ದೇನೆ. ಆರ್‌ಎಸ್‌ಎಸ್ ಪಥಸಂಚಲನಕ್ಕೆ ಪರವಾನಗಿ ನೀವು ಕೊಡ್ತಿರೋ? ನಾವು ಕೊಡಬೇಕೊ ಎಂದು ನ್ಯಾಯಾಧೀಶರು ಸರ್ಕಾರಕ್ಕೆ ಕೇಳಿದ್ದರಂತೆ. ಆಗ ಅನಿವಾರ್ಯವಾಗಿ ಸರ್ಕಾರಕ್ಕೆ ಮುಖಭಂಗ, ಜಿಲ್ಲಾಡಳಿತಕ್ಕೆ ಅವಮಾನ ಆಗುವುದನ್ನು ತಪ್ಪಿಸಿಕೊಳ್ಳಲು ಷರತ್ತುಬದ್ಧವಾಗಿ ನಾವೇ ಪರವಾನಗಿ ಕೊಡುತ್ತಿದ್ದೇವೆ ಎಂದಿದ್ದಾರೆ’ ಎಂದರು.
‘ಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್ ಗುರುದಕ್ಷಿಣೆ ಬಗ್ಗೆ ಲೆಕ್ಕ ಕೊಡ್ತಾ ಇಲ್ಲ ಎಂದು ಮಕ್ಕಳಂತೆ ಅಪಹಾಸ್ಯ ಮಾಡಿದ್ದಾರೆ. ಮುಜರಾಯಿ ದೇವಸ್ಥಾನಗಳ ಹುಂಡಿಗಳನ್ನು ಅಧಿಕಾರಿಗಳ ಸಮ್ಮುಖದಲ್ಲಿ ತೆರೆಯಲಾಗುತ್ತದೆ ಎಂದು ಪ್ರಿಯಾಂಕ್ ಹೇಳಿದ್ದಾರೆ. ಆದರೆ, ಅವರದೇ ಕ್ಷೇತ್ರದ ದಂಡಗುಂಡ ಬಸವೇಶ್ವರ ದೇವಸ್ಥಾನದ ಹುಂಡಿ ತೆರೆಯಲು ಡಿ.ಸಿ, ಎ.ಸಿ, ತಹಶೀಲ್ದಾರ್ ಹೋಗಿದ್ದಾರಾ? ಅಲ್ಲಿ ಕಾಂಗ್ರೆಸ್‌ನ ಹಿಂಬಾಲಕರು ಹುಂಡಿ ತೆರೆಯುತ್ತಾರೆ. ಹುಂಡಿ ಲೆಕ್ಕಪತ್ರದ ಬಗ್ಗೆ ಜಿಲ್ಲಾಧಿಕಾರಿ, ತಹಶೀಲ್ದಾರ್ ಅವರನ್ನು ಕೇಳಿದರೆ ಅದನ್ನೆಲ್ಲ ದೇವಸ್ಥಾನದ ಟ್ರಸ್ಟ್‌ನವರೇ ನೋಡಿಕೊಳ್ಳುತ್ತಾರೆ ಎಂದಿದ್ದಾರೆ. ಹಾಗಿದ್ದರೆ ದಡೋಡೆಕೋರರು ಯಾರು?’ ಎಂದರು.
‘ಅಕ್ಕಿ ಕದ್ದ ಆಹಾರ ಇಲಾಖೆ ಡಿ.ಡಿ, ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದ ಪಿಡಬ್ಲ್ಯುಡಿ ಇಇ, ಪಾಲಿಕೆಯಲ್ಲಿ ಚೆಕ್ ಲೂಟಿ ಮಾಡಿದ, ಘತ್ತರಗಿ ಭಾಗ್ಯವಂತಿ ದೇವಸ್ಥಾನದ ಹುಂಡಿ ಕಳ್ಳತನ ಮಾಡಿದ ಆಪ್ತಕಾರ್ಯದರ್ಶಿ ಸೇರಿದಂತೆ ಅಷ್ಟ ದಿಕ್ಕುಗಳಲ್ಲಿಯೂ ದರೋಡೆಕೋರರನ್ನು ಇಟ್ಟುಕೊಂಡು ಸಚಿವರು ಆಡಳಿತ ನಡೆಸುತ್ತಿದ್ದಾರೆ. ಆರ್‌ಎಸ್‌ಎಸ್‌ನವರು ಕೆಕೆಆರ್‌ಡಿಬಿ ಹಣ ಲೂಟಿ ಮಾಡಿದ್ದನ್ನು 15–20 ದಿನಗಳಲ್ಲಿ ದಾಖಲೆ ಕೊಡುವುದಾಗಿ ತಿಳಿಸಿದ್ದಾರೆ. ಆದರೆ, ಕೆಕೆಆರ್‌ಡಿಬಿ ಮತ್ತು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಅಕ್ರಮಗಳ ತನಿಖೆ ಮಾಡಿಸ್ತೀವಿ ಎಂದು ಎರಡೂವರೆ ವರ್ಷ ಆಯ್ತು. ಅದು ಎಲ್ಲಿಗೆ ಬಂತು?’ ಎಂದು ಕೇಳಿದರು.
ಸಂಘಟನಾ ಕಾರ್ಯದರ್ಶಿ ಮಹಾಲಿಂಗ ಬಾಲಕೋಟೆ, ಜಿಲ್ಲಾಧ್ಯಕ್ಷ ಗುರುಶಾಂತ ಟೆಂಗಳಿ, ಮಲಕಣ್ಣ ಪೂಜಾರಿ, ಶಿವರಾಜ ಇದ್ದರು.
ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್ ಹಿಂದೂ ಸಂಘಟನೆಗಳ ಬಗ್ಗೆ ಅಪಹಾಸ್ಯ ಮಾಡುವುದನ್ನು ಬಿಟ್ಟು ಸರ್ಕಾರ ವಹಿಸಿದ ಕಾರ್ಯ ಮಾಡಲಿ. ಕೆಬಿಎನ್ ಆಸ್ಪತ್ರೆ ಮತ್ತು ವಾಣಿಜ್ಯ ಸಂಕೀರ್ಣಗಳ ₹17 ಕೋಟಿ ತೆರಿಗೆ ಬಾಕಿ ಇದ್ದು ಅದರ ಬಗ್ಗೆ ಗಮನಹರಿಸಲಿ
- ಸಿದ್ಧಲಿಂಗ ಸ್ವಾಮೀಜಿ ಶಿವಸೇನಾ ರಾಜ್ಯ ಘಟಕದ ಅಧ್ಯಕ್ಷ
‘ಪರಿವರ್ತನಾ ಪರ್ವ ರಾಜ್ಯ ಪ್ರವಾಸ’
‘ಶಿವಸೇನಾ ಪಕ್ಷದಿಂದ ‘ಪರಿವರ್ತನಾ ಪರ್ವ’ ರಾಜ್ಯ ಪ್ರವಾಸ ಕೈಗೊಳ್ಳಲಾಗಿದೆ. ಮೊದಲನೇ ಹಂತದಲ್ಲಿ ಕಲಬುರಗಿ ಮೂಲಕ ಮಂಗಳವಾರ ಪ್ರವಾಸ ಆರಂಭವಾಗಿದ್ದು ಬೀದರ್ ರಾಯಚೂರು ಯಾದಗಿರಿ ಹಾವೇರಿ ಕಾರವಾರ ಧಾರವಾಡ ಬಾಗಲಕೋಟೆ ವಿಜಯಪುರ ಜಿಲ್ಲೆಗಳಿಗೆ ತೆರಳಲಿದೆ’ ಎಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಗಂಗಾಧರ ಕುಲಕರ್ಣಿ ತಿಳಿಸಿದರು. ‘ಪಕ್ಷದ ಸಂಘಟನೆ ಬೇರೆಬೇರೆ ಪಕ್ಷಗಳ ನಾಯಕರ ಸೇರ್ಪಡೆ ಪದಾಧಿಕಾರಿಗಳ ಘೋಷಣೆ ಕಾರ್ಯಕ್ರಮ ನಡೆಯುತ್ತಿದೆ. ವಿಶೇಷವಾಗಿ ಬರುವ ಜಿಲ್ಲಾ ಪಂಚಾಯಿತಿ ತಾ.ಪಂ ಗ್ರಾ.ಪಂ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಾಗಿ ಸಿದ್ಧತೆ ನಡೆಸಲಾಗುತ್ತಿದೆ’ ಎಂದರು. ‘ರೈತರ ಸಮಸ್ಯೆ ರಾಜ್ಯದಲ್ಲಿರುವ 10 ಲಕ್ಷ ಬಾಂಗ್ಲಾ ಮತ್ತು ರೋಹಿಂಗ್ಯಾ ಮುಸಲ್ಮಾನ್ ನುಸುಳುಕೋರರನ್ನು ಓಡಿಸುವುದು ಹಾಗೂ ಬಾಲಕಿಯರ ಅಪಹರಣ ಪ್ರಕರಣಗಳ ವಿರುದ್ಧ ಹೋರಾಟ ಕೈಗೆತ್ತಿಕೊಳ್ಳಲಾಗುತ್ತಿದೆ. ಜನವರಿಯಲ್ಲಿ ಏಕನಾಥ ಶಿಂಧೆ ಅವರ ನೇತೃತ್ವದಲ್ಲಿ ಕಲಬುರಗಿಯಲ್ಲಿ ದೊಡ್ಡ ಸಮಾವೇಶ ನಡೆಸಲಾಗುವುದು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.