ADVERTISEMENT

ಗಣೇಶೋತ್ಸವ ನಿಯಮ ಪಾಲಿಸಿ: ಎಸ್‌ಪಿ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2020, 6:31 IST
Last Updated 20 ಆಗಸ್ಟ್ 2020, 6:31 IST
ಡಾ.ಸಿಮಿ ಮರಿಯಮ್
ಡಾ.ಸಿಮಿ ಮರಿಯಮ್   

ಕಲಬುರ್ಗಿ: ಜಿಲ್ಲೆಯಲ್ಲಿ ಕೋವಿಡ್–19 ಸಾಂಕ್ರಾಮಿಕ ರೋಗವು ಹರಡುತ್ತಿರುವುದರಿಂದ ಸಾರ್ವಜನಿಕರು ಆಗಸ್ಟ್ 22ರಂದು ಗಣೇಶೋತ್ಸವವನ್ನು ಸರಳ ಮತ್ತು ಭಕ್ತಿಪೂರ್ವಕವಾಗಿ ರಾಜ್ಯ ಸರ್ಕಾರದ ಮಾರ್ಗಸೂಚಿಯನ್ವಯ ಆಚರಿಸಬೇಕೆಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಸಿಮಿಮರಿಯಮ್ ಜಾರ್ಜ್ ಅವರು ತಿಳಿಸಿದ್ದಾರೆ.

ದೇವಸ್ಥಾನಗಳಲ್ಲಿ, ಮನೆಗಳಲ್ಲಿ ಆಥವಾ ಸರ್ಕಾರಿ, ಖಾಸಗಿ, ಸಾರ್ವಜನಿಕ ಬಯಲು ಪ್ರದೇಶಗಳಲ್ಲಿ ಕನಿಷ್ಠ ಸಂಖ್ಯೆಯೊಂದಿಗೆ ಆಚರಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುವವರು ಗಣೇಶ ಮೂರ್ತಿಯನ್ನು ನಾಲ್ಕು ಅಡಿ ಎತ್ತರ ಮೀರದಂತೆ ಹಾಗೂ ಮನೆಯೊಳಗೆ ಎರಡು ಅಡಿ ಮೀರದಂತೆ ಪ್ರತಿಷ್ಠಾಪಿಸಬೇಕು ಎಂದು ಸೂಚನೆ ನೀಡಿದ್ದಾರೆ.

ಪಾರಂಪರಿಕ ಗಣೇಶೋತ್ಸವಕ್ಕಾಗಿ ಗಣೇಶೋತ್ಸವ ಸಮಿತಿಗಳು, ಮಂಡಳಿಗಳು ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲು ಸ್ಥಳೀಯ ಆಡಳಿತದಿಂದ ಪೂರ್ವಾನುಮತಿಯನ್ನು ಪಡೆಯಬೇಕು. ಒಂದು ವಾರ್ಡಿಗೆ, ಗ್ರಾಮಕ್ಕೆ ಒಂದು ಸಾರ್ವಜನಿಕ ಗಣೇಶೋತ್ಸವವನ್ನು ಮಾತ್ರ ಆಚರಿಸಲು ಪ್ರೋತ್ಸಾಹಿಸುವುದು. ಇಂತಹ ಸ್ಥಳಲ್ಲಿ 20 ಜನಕ್ಕೆ ಸೀಮಿತವಾದ ಆವರಣವನ್ನು ನಿರ್ಮಿಸಬೇಕು. ಒಮ್ಮೆಲೇ 20ಕ್ಕಿಂತ ಹೆಚ್ಚಿನ ಜನ ಸೇರದಂತೆ ಭಕ್ತಾದಿಗಳಿಗೆ ಅನುವು ಮಾಡಬೇಕು ಎಂದು ಹೇಳಿದ್ದಾರೆ.

ADVERTISEMENT

ಮನರಂಜನಾ ಕಾರ್ಯಕ್ರಮಕ್ಕೆ ನಿರ್ಬಂಧ: ಗಣೇಶಮೂರ್ತಿ ಪ್ರತಿಷ್ಠಾಪನೆ ಸ್ಥಳದಲ್ಲಿ ಯಾವುದೇ ರೀತಿಯ ಸಾಂಸ್ಕೃತಿಕ, ಸಂಗೀತ, ನೃತ್ಯ ಇನ್ನಿತರೆ ಯಾವುದೇ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲು ಅವಕಾಶವಿರುವುದಿಲ್ಲ. ಮೂರ್ತಿಗಳನ್ನು ತರುವಾಗ ಹಾಗೂ ವಿಸರ್ಜಿಸುವಾಗ ಯಾವುದೇ ಸಂದರ್ಭಗಳಲ್ಲಿ ಯಾವುದೇ ರೀತಿಯ ಮೆರವಣಿಗೆಯನ್ನು ಮಾಡುವಂತಿಲ್ಲ. ಇದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.

ಪಾರಂಪರಿಕ ಗಣೇಶ ಮೂರ್ತಿ ಮತ್ತು ಮನೆಯಲ್ಲಿ ವಿಗ್ರಹಗಳನ್ನು ಪೂಜಿಸುವವರು ಅವುಗಳನ್ನು ಮನೆಯಲ್ಲಿಯೇ ವಿಸರ್ಜಿಸಬೇಕು. ಸರ್ಕಾರಿ, ಖಾಸಗಿ ಬಯಲು ಪ್ರದೇಶಗಳಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳನ್ನು ಅತಿ ಸಮೀಪವಾಗುವಂತಹ ಮಾರ್ಗಗಳನ್ನು ಬಳಸಿಕೊಂಡು ಪಾಲಿಕೆ, ಜಿಲ್ಲಾಡಳಿತ, ಹತ್ತಿರದ ಸ್ಥಳೀಯ ಸಂಸ್ಥೆಗಳ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಈಗಾಗಲೇ ನಿರ್ಮಿಸಲಾದ ಹೊಂಡ ಅಥವಾ ಮೊಬೈಲ್ ಟ್ಯಾಂಕ್‍ಗಳಲ್ಲಿ ಅಥವಾ ಕೃತಕ ವಿಸರ್ಜನಾ ಟ್ಯಾಂಕರ್‌ಗಳಲ್ಲಿ ವಿಸರ್ಜಿಸಬೇಕು ಎಂದು ಅವರು ಹೇಳಿದ್ದಾರೆ.

ಗಣೇಶ ಚತುರ್ಥಿ ಆಚರಿಸುವ ದೇವಸ್ಥಾನ, ಸಾರ್ವಜನಿಕ ಸ್ಥಳಗಳಲ್ಲಿ ದಿನನಿತ್ಯ ಸ್ಯಾನಿಟೈಸೇಷನ್ ಮಾಡಬೇಕು. ಸಾರ್ವಜನಿಕ ದರ್ಶನಕ್ಕಾಗಿ ಆಗಮಿಸುವ ಭಕ್ತಾದಿಗಳಿಗೆ ಸ್ಯಾನಿಟೈಸರ್ ಹಾಗೂ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆಯನ್ನು ಕಲ್ಪಿಸಬೇಕು. ದರ್ಶನಕ್ಕಾಗಿ ಬರುವ ಭಕ್ತರಿಗೆ ಕನಿಷ್ಠ 6 ಅಡಿ ಸಾಮಾಜಿಕ ಅಂತರವನ್ನು ಗುರುತಿಸುವುದು ಹಾಗೂ ಅದನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಭಕ್ತಾದಿಗಳು ಕಡ್ಡಾಯವಾಗಿ ಮುಖಗವಸು (ಮಾಸ್ಕ್) ಧರಿಸಬೇಕು ಎಂಬ ನಿಯಮ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.