ADVERTISEMENT

ಅಕ್ರಮ ಮರಳು ಸಾಗಣೆ: ಆರೋಪ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2020, 5:28 IST
Last Updated 9 ನವೆಂಬರ್ 2020, 5:28 IST
ಯಡ್ರಾಮಿ ಪಟ್ಟಣದ ಪೊಲೀಸ್ ಠಾಣೆ ಹಿಂಭಾಗದ 2ನೇ ವಾರ್ಡ್‌ನ ರಸ್ತೆಯಲ್ಲಿ ಟ್ರ್ಯಾಕ್ರರ್‌ನಲ್ಲಿ ಅಕ್ರಮ ಮರಳು ತೆಗೆಕೊಂಡು ಹೋಗುತ್ತಿರುವುದು ಕಂಡು ಬಂದಿದ್ದು ಹೀಗೆ
ಯಡ್ರಾಮಿ ಪಟ್ಟಣದ ಪೊಲೀಸ್ ಠಾಣೆ ಹಿಂಭಾಗದ 2ನೇ ವಾರ್ಡ್‌ನ ರಸ್ತೆಯಲ್ಲಿ ಟ್ರ್ಯಾಕ್ರರ್‌ನಲ್ಲಿ ಅಕ್ರಮ ಮರಳು ತೆಗೆಕೊಂಡು ಹೋಗುತ್ತಿರುವುದು ಕಂಡು ಬಂದಿದ್ದು ಹೀಗೆ   

ಯಡ್ರಾಮಿ: ತಾಲ್ಲೂಕಿನಲ್ಲಿ ಅಕ್ರಮ ಮರಳು ಸಾಗಣೆ ನಿರಾತಂಕವಾಗಿ ನಡೆದಿದ್ದು, ಇದನ್ನು ನಿಯಂತ್ರಿಸುವಲ್ಲಿ ತಾಲ್ಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ವಿಫಲವಾಗಿವೆ ಎಂದು ರೈತ ಮುಖಂಡರು ಆರೋಪಿಸಿದ್ದಾರೆ.

ಪಟ್ಟಣದ ದುಮ್ಮದ್ರಿ, ಕಡಕೋಳ, ಖೈನೂರ, ಯತ್ನಾಳ, ವಡಗೇರಾ ಸೇರಿದಂತೆ ಹಲವು ಗ್ರಾಮಗಳ ಹಳ್ಳಗಳಿಂದ ನಿತ್ಯ ಸಾವಿರಾರು ಟ್ರ್ಯಾಕ್ಟರ್‌ಗಳಲ್ಲಿ ಮರಳು ತುಂಬಿಕೊಂಡು ಸಾಗಿಸಲಾಗುತ್ತಿದೆ.

ಜೇವರ್ಗಿಗೆ ಹೊಸದಾಗಿ ಬಂದ ಸರ್ಕಲ್ ಇನ್ಸ್‌ಪೆಕ್ಟರ್ ರಮೇಶ ರೊಟ್ಟಿ ಈ ಭಾಗದಲ್ಲಿ ಅಕ್ರಮ ಮರಳು ಸಾಗಣೆ ತಡೆಗಟ್ಟಲು ಅಗತ್ಯ ಕ್ರಮ ಕೈಗೊಂಡಿದ್ದರು. ಆದರೆ, ನಂತರದ ದಿನಗಳಲ್ಲಿ ಇದಕ್ಕೆ ಯಾರೂ ಕಡಿವಾಣ ಹಾಕಲಿಲ್ಲ ಎಂದು ಸ್ಥಳೀಯರು ಟೀಕಿಸುತ್ತಾರೆ.

ADVERTISEMENT

ಹಗಲು ರಾತ್ರಿಯೆನ್ನದೆ ನೂರಾರು ಟ್ರ್ಯಾಕ್ಟರ್‌ಗಳು ಸಂಚರಿಸುವುದರಿಂದ ವಡಗೇರಾ, ಮಳ್ಳಿ, ದುಮ್ಮದ್ರಿ, ಸುಂಬಡ, ಕಾಚಾಪುರ ಗ್ರಾಮಗಳ ಜನರಿಗೆ ನಿದ್ರಿಸಲು ತೀವ್ರ ತೊಂದರೆಯಾಗುತ್ತಿದೆ.

ದುಮ್ಮದ್ರಿ ಗ್ರಾಮದ ಮರಳಿಗೆ ಭಾರಿ ಬೇಡಿಕೆ ಇರುವುದರಿಂದ ವಿಜಯಪುರ ಜಿಲ್ಲೆಯ ಸಿಂದಗಿ, ಗೋಲಗೇರಿ, ಯಂಕಂಚಿ, ಯಾದಗಿರಿ ಜಿಲ್ಲೆಯ ಕೆಂಭಾವಿ, ಯಾಳವಾರ, ಹದನೂರ ಸೇರಿದಂತೆ ಹಲವು ಕಡೆ ಮರಳನ್ನು ಇಲ್ಲಿಂದ ಸಾಗಣೆ ಮಾಡಲಾಗುತ್ತಿದೆ. ಈ ಗ್ರಾಮದಲ್ಲಿರುವ ಮನೆಗಳಿಗಿಂತಲೂ ಟ್ರ್ಯಾಕ್ಟರ್‌ಗಳ ಸಂಖ್ಯೆಯೇ ಜಾಸ್ತಿ ಇದೆ. ಗ್ರಾಮದ ಹಳ್ಳದಲ್ಲಿ ಕೆಂಪು ಮರಳು ಸಿಗುತ್ತಿರುವುದರಿಂದ ಪ್ರತಿ ಟ್ರ್ಯಾಕ್ಟರ್‌ಗೆ ₹5ರಿಂದ ₹6 ಸಾವಿರ ತೆಗೆದುಕೊಳ್ಳಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.