ADVERTISEMENT

ವಾಡಿ | ಕುಸಿದ ಶಾಲೆ ಚಾವಣಿ: ತಪ್ಪಿದ ಅನಾಹುತ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2025, 8:12 IST
Last Updated 15 ಅಕ್ಟೋಬರ್ 2025, 8:12 IST
ವಾಡಿ ಪಟ್ಟಣದ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆಯ ಚಾವಣಿ ಪದರು ಕಳಚಿ ಕುರ್ಚಿಗಳು ಮುರಿದಿರುವುದು
ವಾಡಿ ಪಟ್ಟಣದ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆಯ ಚಾವಣಿ ಪದರು ಕಳಚಿ ಕುರ್ಚಿಗಳು ಮುರಿದಿರುವುದು   

ವಾಡಿ: ಪಟ್ಟಣದ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆಯ ಚಾವಣಿ ಸೋಮವಾರ ಕುಸಿದುಬಿದ್ದಿದ್ದು, ರಜೆಯ ಕಾರಣ ದೊಡ್ಡ ಅನಾಹುತ ತಪ್ಪಿದಂತಾಗಿದೆ.

ಶಾಲೆ ಕಟ್ಟಡದ ಮೇಲೆ ಮಳೆ ನೀರು ನಿಂತು ಛತ್ತು ಸಂಪೂರ್ಣ ಹಾಳಾಗಿದೆ. ಕಚೇರಿ ಕೋಣೆಯ ಮೇಲೆ ಈಚೆಗೆ ಸುರಿದ ಮಳೆ ನೀರು ನಿಂತು ಹಾಳಾಗಿದ್ದು, ಸೋಮವಾರ ಮಧ್ಯಾಹ್ನ ಏಕಾಏಕಿ ದೊಡ್ಡ ದೊಡ್ಡ ಪದರಗಳು ಕಳಚಿ ಬಿದ್ದಿವೆ.

ಸಾಮಾಜಿಕ ಮತ್ತು ಶೈಕ್ಷಣಿಕ ಕಾರ್ಯ ಹಿನ್ನೆಲೆಯಲ್ಲಿ ಶಾಲೆಗೆ ರಜೆ ಘೋಷಿಸಲಾಗಿತ್ತು. ಸಮೀಕ್ಷೆ ಕಾರ್ಯ ಮುಗಿಸಿಕೊಂಡು ಶಿಕ್ಷಕರು ಮಧ್ಯಾಹ್ನ ಶಾಲೆಗೆ ಬಂದಿದ್ದರು. ಆದರೆ ಶಾಲೆಯ ಹೊರಗಡೆ ಕುಳಿತಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ.

ADVERTISEMENT

ಪದರುಗಳು ಬಿದ್ದ ರಭಸಕ್ಕೆ ಕುರ್ಚಿ ಟೇಬಲ್‌ಗಳು ಮುರಿದಿವೆ. ಶಾಲಾ ದಾಖಲಾತಿಗಳು ಹಾಳಾಗಿವೆ. 50 ವರ್ಷಗಳ ಹಿಂದೆ ನಿರ್ಮಿಸಿರುವ ಕಟ್ಟಡ ಇದಾಗಿದ್ದು, 10 ವರ್ಷಗಳಿಂದ ದುರಸ್ತಿ ಭಾಗ್ಯ ಕಾಣದೇ ಇಲ್ಲಿಯೇ ಪಾಠ ಪ್ರವಚನಗಳು ನಡೆಯುತ್ತಿದ್ದವು. ದುರಸ್ತಿಗೊಳಿಸುವ ಕಾರ್ಯಕ್ಕೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮುಂದಾಗದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

90 ವಿದ್ಯಾರ್ಥಿಗಳು ಅಭ್ಯಾಸ: ಪ್ರಮುಖ ರಸ್ತೆಗೆ ಹೊಂದಿಕೊಂಡಿರುವ ಶಾಲೆ ಇದಾಗಿದ್ದು, ಕನ್ನಡ, ಹಿಂದಿ, ಉರ್ದು ಮತ್ತು ಮರಾಠಿ ಮಾಧ್ಯಮದ ಶಾಲೆಗಳು ಇಲ್ಲಿ ನಡೆಯುತ್ತವೆ. ಕನ್ನಡ ಮಾಧ್ಯಮದಲ್ಲಿ 90 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ.

ಬಹುತೇಕ ಬಡ ವಿದ್ಯಾರ್ಥಿಗಳೇ ಇಲ್ಲಿ ಓದುತ್ತಿದ್ದು, ಹಲವಾರು ಮೂಲಸೌಕರ್ಯಗಳ ಕೊರತೆಯಿಂದ ಶಾಲೆ ನಲುಗುತ್ತಿದ್ದರೂ ಯಾರೂ ಗಮನ ಹರಿಸುತ್ತಿಲ್ಲ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.

ಕನ್ನಡ ಮಾಧ್ಯಮ ಶಾಲೆಯ 10 ಕೋಣೆಗಳ ಪೈಕಿ ಎಲ್ಲವೂ ಸಂಪೂರ್ಣ ಸೋರುತ್ತಿದ್ದು, ಮಳೆ ಬಂದರೆ ಸದಾ ಆತಂಕದಲ್ಲಿ ಪಾಠ ಇಲ್ಲಿ ನಡೆಯುತ್ತದೆ. ಮಳೆ ನೀರು ನಿಂತು ತೇವಗೊಳ್ಳುವ ಛತ್ತಿನಿಂದ ತಿಂಗಳುಗಟ್ಟಲೇ ನೀರು ಜಿನುಗುತ್ತದೆ. ಛತ್ತಿನ ಪದರು ಕಳಚಿ ಬೀಳುವ ಆತಂಕದಲ್ಲಿಯೇ ಶಿಕ್ಷಕರು ಪಾಠ ನಡೆಸುತ್ತಿದ್ದರೆ, ಮಕ್ಕಳ ಗಮನ ಪಾಠದ ಕಡೆಗಿಂತ ಕಳಚುವ ಛತ್ತಿನ ಕಡೆ ಇರುತ್ತದೆ.

ವಾಡಿ ಪಟ್ಟಣದ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆಯ ಚಾವಣಿ ಪದರು ಕುಸಿದಿರುವುದು

ಎಐಡಿಎಸ್ಒ ಆಕ್ರೋಶ

‘ವಾಡಿಯ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆಯ ಕಟ್ಟಡದ ಚಾವಣಿ ಕುಸಿದು ಬಿದ್ದಿರುವುದು ಪೊಷಕರು ಮತ್ತು ವಿದ್ಯಾರ್ಥಿಗಳಲ್ಲಿ ಆತಂಕ ಮನೆಮಾಡಿದೆ. 10 ವರ್ಷಗಳಿಂದ ಸಮಸ್ಯೆ ಇದ್ದರೂ ಕ್ರಮ ಕೈಗೊಳ್ಳದಿರುವುದು ಆಡಳಿತದ ದಿವ್ಯ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ’ ಎಂದು ಎಐಡಿಎಸ್ಒ ಜಿಲ್ಲಾ ಕಾರ್ಯದರ್ಶಿ ತುಳಜರಾಮ ಎನ್.ಕೆ. ಸ್ಥಳೀಯ ಸಮಿತಿ ಅಧ್ಯಕ್ಷ ವೆಂಕಟೇಶ ದೇವದುರ್ಗ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಕಲ್ಯಾಣ ಕರ್ನಾಟಕ ಭಾಗದಲ್ಲಿ 5000ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳು ಶಿಥಿಲ ಕಟ್ಟಡಗಳಲ್ಲಿ ತರಗತಿಗಳು ನಡೆಯುತ್ತಿವೆ. ಇದರಲ್ಲಿ 1700 ಶಾಲೆಗಳು ಕಲಬುರಗಿ ಜಿಲ್ಲೆಯಲ್ಲೇ ಇವೆ. ಇತ್ತೀಚಿಗೆ ಸುರಿದ ಭೀಕರ ಮಳೆಯಿಂದಾಗಿ ಈ ಶಾಲೆಗಳು ಕುಸಿದು ಬೀಳುವ ಸ್ಥಿತಿಯಲ್ಲಿವೆ. ಶಿಥಿಲ ಶಾಲೆಗಳ ಸಮೀಕ್ಷೆ ನಡೆಸಿ ಹೊಸ ಕಟ್ಟಡ ನಿರ್ಮಿಸಬೇಕು. ಅಧಿಕಾರಿಗಳು ವಿದ್ಯಾರ್ಥಿಗಳ ಜೀವನದ ಜೊತೆ ಆಟವಾಡದೆ ವಾಡಿ ಶಾಲೆಯನ್ನು ಸ್ಥಳಾಂತರಿಸಬೇಕು ಮತ್ತು ಹೊಸ ಕಟ್ಟಡ ನಿರ್ಮಿಸಬೇಕು’ ಎಂದು ಆಗ್ರಹಿಸಿದ್ದಾರೆ.

ಸತತ ಮಳೆಯ ಕಾರಣದಿಂದ ಶಾಲೆ ನಡೆಸಲು ಯೋಗ್ಯವಿಲ್ಲ ಎಂದು ನಿರ್ಧರಿಸಲಾಗಿದ್ದು ಪಕ್ಕದ ಮರಾಠಿ ಶಾಲೆಯ ಕೋಣೆಯಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಕಟ್ಟಡವನ್ನೇ ಸಂಪೂರ್ಣ ಕೆಡವಲು ಪ್ರಸ್ತಾವ ಕಳಿಸಿದ್ದು ವಿಷಯ ಸಚಿವರ ಗಮನಕ್ಕೆ ಇದೆ
ಶಶಿಧರ ಬಿರಾದಾರ, ಚಿತ್ತಾಪುರ ಬಿಇಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.