ADVERTISEMENT

ಕಲಬುರ್ಗಿ: ಅನುದಾನಕ್ಕೆ ಆಗ್ರಹಿಸಿ ಶಾಲೆಗಳ ಬಂದ್

ಆಟ– ಪಾಠ ನಿಲ್ಲಿಸಿ ಧರಣಿ ನಡೆಸಿದ ಶಿಕ್ಷಣ ಸಂಸ್ಥೆಗಳ ಸದಸ್ಯರು, ಶಿಕ್ಷಕರು

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2021, 3:25 IST
Last Updated 16 ಫೆಬ್ರುವರಿ 2021, 3:25 IST
ಕಲಬುರ್ಗಿಯ ಚವದಾಪುರಿ ಶಿಕ್ಷಣ ಸಂಸ್ಥೆಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳನ್ನು ಸೋಮವಾರ ಬಂದ್‌ ಮಾಡಲಾಗಿತ್ತು
ಕಲಬುರ್ಗಿಯ ಚವದಾಪುರಿ ಶಿಕ್ಷಣ ಸಂಸ್ಥೆಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳನ್ನು ಸೋಮವಾರ ಬಂದ್‌ ಮಾಡಲಾಗಿತ್ತು   

ಕಲಬುರ್ಗಿ: ಅನುದಾನ ನೀಡುವಂತೆ ಆಗ್ರಹಿಸಿ ನಗರ ಹಾಗೂ ಜಿಲ್ಲೆಯ ಬುಹುತೇಕ ಖಾಸಗಿ ಅನುದಾನ ರಹಿತ ಕನ್ನಡ ಮತ್ತು ಇಂಗ್ಲಿಷ್‌ ಮಾಧ್ಯಮ ಶಾಲೆಗಳನ್ನು ಸೋಮವಾರ ಬಂದ್‌ ಮಾಡಲಾಯಿತು. ಆಯಾ ಶಿಕ್ಷಣ ಸಂಸ್ಥೆಗಳ ಸದಸ್ಯರು ಮತ್ತು ಶಿಕ್ಷಕರು ಶಾಲೆಗಳ ಬಾಗಿಲು ಹಾಕಿ, ಕಪ್ಪು ಪಟ್ಟಿ ಧರಿಸಿ ಗೇಟ್‌ಗಳ ಎದುರು ಧರಣಿ ನಡೆಸಿದರು.

ಕಲ್ಯಾಣ ಕರ್ನಾಟಕ ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಕರೆಗೆ ಸ್ಪಂದಿಸಿದ ಶಿಕ್ಷಣ ಸಂಸ್ಥೆಗಳು ಆಟ– ಪಾಠ ನಿಲ್ಲಿಸಿ ಬಂದ್‌ನಲ್ಲಿ ಪಾಲ್ಗೊಂಡವು. ವಾರದ ಹಿಂದೆ ಭಿಕ್ಷೆ ಬೇಡುವ ಮೂಲಕ ವಿನೂತನ ಪ್ರತಿಭಟನೆ ಮಾಡಿದ್ದ ಶಿಕ್ಷಕರು, ಮತ್ತೊಂದು ಹೆಜ್ಜೆ ಮುಂದಿಟ್ಟರು. ಬಂದ್‌ ವಿಚಾರವನ್ನು ಸಂಸ್ಥೆಗಳು ಮುಂಚೆಯೇ ಪಾಲಕರಿಗೆ ತಿಳಿಸಿದ್ದರಿಂದ ಹೆಚ್ಚಿನ ಮಕ್ಕಳು ಶಾಲೆಗಳತ್ತ ಬರಲಿಲ್ಲ. ಮಾಹಿತಿ ಇಲ್ಲದೇ ಪಾಲಕರ ಸಮೇತ ಬಂದಿದ್ದ ಕೆಲ ಮಕ್ಕಳನ್ನು ಶಾಲಾ ವಾಹನಗಳಲ್ಲಿಯೇ ಮನೆಗೆ ಕಳುಹಿಸಲಾಯಿತು.

‘1995ರಿಂದ 2015ರ ಅವಧಿಯಲ್ಲಿ ಆರಂಭಗೊಂಡ ಶಾಲೆಗಳನ್ನು ವೇತನಾನುದಾನಕ್ಕೆ ಒಳಪಡಿಸಬೇಕು. ಕೆಕೆಆರ್‌ಡಿಬಿಗೆ ಶೈಕ್ಷಣಿಕ ಕಾರ್ಯಕ್ಕಾಗಿ ಬಂದ ಕೋಟ್ಯಂತರ ರೂಪಾಯಿ ಅನುದಾನವನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ಹಾಗೂ ವಿದ್ಯಾರ್ಥಿಗಳ ಏಳ್ಗೆಗೆ ಬಳಸಬೇಕು. ಕನ್ನಡ, ಇಂಗ್ಲಿಷ್‌, ಉರ್ದು ಸೇರಿದಂತೆ ಈ ಭಾಗದ ಎಲ್ಲ ಮಾಧ್ಯಮಗಳ ಶಾಲೆಗಳಿಗೂ ಮೂಲಸೌಕರ್ಯ ಕಲ್ಪಿಸಬೇಕು’ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ADVERTISEMENT

ನೇತೃತ್ವ ವಹಿಸಿದ್ದ ಒಕ್ಕೂಟದ ಅಧ್ಯಕ್ಷ ಸುನಿಲ್‌ ಹುಡಗಿ ಮಾತನಾಡಿ, ‘ಕೊರೊನಾ ಲಾಕ್‌ಡೌನ್‌ಗಿಂತ ಮುಂಚೆ ಅನುದಾನ ರಹಿತ ಶಾಲೆಗಳು ಹೇಗೋ ನಡೆದುಕೊಂಡು ಹೋಗುತ್ತಿದ್ದವು. ಆದರೆ, ಲಾಕ್‌ಡೌನ್‌ ಕಾರಣ ಎಲ್ಲವೂ ನಷ್ಟ ಅನುಭವಿಸುತ್ತಿವೆ. ದೊಡ್ಡ ಸಂಸ್ಥೆಗಳು ₹ 50 ಸಾವಿರಕ್ಕೂ ಹೆಚ್ಚು ಶುಲ್ಕ ಪಡೆಯುತ್ತವೆ. ಹಾಗಾಗಿ, ಅವುಗಳಿಗೆ ಸಮಸ್ಯೆ ಆಗುವುದಿಲ್ಲ. ಆದರೆ, ನಗರ ಹಾಗೂ ಗ್ರಾಮೀಣ ಪ್ರದೇಶದ ಸಣ್ಣಪುಟ್ಟ ಸಂಸ್ಥೆಗಳು ₹ 5 ಸಾವಿರಕ್ಕಿಂತ ಕಡಿಮೆ ಶುಲ್ಕ ಪಡೆಯುತ್ತವೆ. ಇದಕ್ಕೂ ಸರ್ಕಾರ ಅವಕಾಶ ನೀಡುತ್ತಿಲ್ಲ. ಈಗಾಗಲೇ ಹಲವಾರು ಕನ್ನಡ ಶಾಲೆಗಳು ಬಾಗಿಲು ಮುಚ್ಚಿವೆ’ ಎಂದರು.

ಒಕ್ಕೂಟದ ಮುಖಂಡರಾದ ಅರುಣ ಕುಮಾರ ಪೋಚಾಳ, ಚನ್ನಬಸಪ್ಪ ಗಾರಂಪಳ್ಳಿ, ರಾಜಶೇಖರ ಮರಡಿ, ಸಾಹೇಬಗೌಡ ಪುರದಾಳ, ಶಿವಕುಮಾರ ಗವಾಡಿಯಾ, ಶಹಾಬಾದ್‌ನ ವಾಸು ಚವ್ಹಾಣ್‌, ಸೇಡಂ ವಿಜಯಕುಮಾರ, ಚಿಂಚೋಳಿಯ ಶೆಟ್ಟಿ, ಕಾಳಗಿಯ ಸಿದ್ದಾರೆಡ್ಡಿ, ಆಳಂದದ ಬಾಬು ಸುಳ್ಳದ, ಜೇವರ್ಗಿಯ ಇಬ್ರಾಹಿಂ ಪಟೇಲ್‌, ಯಡ್ರಾಮಿಯ ಗೊಲ್ಲಾಪ್ಪಗೌಡ ಬಿರಾದಾರ, ಶಿಕ್ಷಕಿಯರಾದ ಅರುಣಾ, ರೇಣುಕಾ, ಸುಧಾ, ಪಲ್ಲವಿ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.