ಕಲಬುರಗಿ: ಎಸ್‌ಸಿಎಸ್ಪಿ, ಟಿಎಸ್ಪಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸುವ ರಾಜ್ಯ ಸರ್ಕಾರದ ನಿರ್ಧಾರ ಖಂಡಿಸಿ ಬಿಜೆಪಿ ಎಸ್ಸಿ ಮೋರ್ಚಾ ನೇತೃತ್ವದಲ್ಲಿ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.
ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ಮುಖಂಡರು, ಕಾರ್ಯಕರ್ತರು ರಾಜ್ಯ ಸರ್ಕಾರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್, ‘ಕಾಂಗ್ರೆಸ್‌ಗೆ ಪರಿಶಿಷ್ಟರ ಬಗೆಗೆ ನಿಜವಾದ ಕಾಳಜಿ ಇದ್ದರೆ, ಸಚಿವರಾದ ಪ್ರಿಯಾಂಕ್ ಖರ್ಗೆ, ಎಚ್.ಸಿ.ಮಹಾದೇವಪ್ಪ ಅವರಿಗೆ ಧಮ್ ಇದ್ದರೆ, ಇದೇ ಅಧಿವೇಶನದಲ್ಲಿ ಎಸ್‌ಸಿಎಸ್ಪಿ, ಟಿಎಸ್ಪಿ ಕಾಯ್ದೆಯ ‘7ಸಿ’ ಕಲಂ ತೆಗೆದುಹಾಕಲಿ’ ಎಂದು ಸವಾಲು ಹಾಕಿದರು.
‘ಕಾಂಗ್ರೆಸ್ ಸರ್ಕಾರ ಈ ತನಕ ₹39 ಸಾವಿರ ಕೋಟಿ ಎಸ್‌ಸಿಎಸ್ಪಿ, ಟಿಎಸ್ಪಿ ಹಣವನ್ನು ಗ್ಯಾರಂಟಿಗಳಿಗೆ ಬಳಸಿದೆ. ಗ್ಯಾರಂಟಿಗೆ ₹52 ಸಾವಿರ ಕೋಟಿ ತೆಗೆದು ಇಟ್ಟಿದ್ದೀರಲ್ಲ ಆ ದುಡ್ಡಲ್ಲೇ ದಲಿತರಿಗೂ ಗ್ಯಾರಂಟಿ ಯೋಜನೆ ಕೊಡಿ. ನಮ್ಮ ದುಡ್ಡನ್ನು ಯಾಕೆ ತೆಗೆದುಕೊಳುತ್ತಿದ್ದೀರಿ ಸಿದ್ದರಾಮಯ್ಯನವರೇ’ ಎಂದು ಪ್ರಶ್ನಿಸಿದರು.
‘ಎಸ್ಸಿ, ಎಸ್ಟಿ, ಒಬಿಸಿಗಳು ಈ ದೇಶದ ಸಾಮಾಜಿಕ ವ್ಯವಸ್ಥೆಯ ಅತ್ಯಂತ್ಯ ತಳವರ್ಗಗಳು. ಎಸ್ಸಿ, ಎಸ್ಟಿಗಳ ಅಭಿವೃದ್ಧಿಗೆ 75 ವರ್ಷಗಳಲ್ಲಿ 60 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಏನು ಮಾಡಿದೆ. ನಮಗೆ 1947ರಲ್ಲಿ ಸ್ವಾತಂತ್ರ್ಯ ಬಂತು. 1950ರಲ್ಲಿ ಸಂವಿಧಾನ ಬಂತು. 1952ರಲ್ಲಿ ಮೊದಲ ಸರ್ಕಾರ ಬಂತು. 1952ರಲ್ಲೇ ಪಂಚ ವಾರ್ಷಿಕ ಯೋಜನೆಯೂ ಬಂತು. ಈ ಪಂಚವಾರ್ಷಿಕ ಯೋಜನೆಗಳಲ್ಲಿ ಎಷ್ಟು ಹಣವನ್ನು ತೆಗೆದಿರಿಸಿದ್ದೀರಿ? ಎಷ್ಟು ಯೋಜನೆ ರೂಪಿಸಿದ್ದೀರಿ?’ ಎಂದು ಪ್ರಶ್ನೆಗಳ ಸುರಿಮಳೆಗೈದರು.
‘1975ರಲ್ಲಿ ಟಿಎಸ್‌ಪಿ ಜಾರಿಯಾಯಿತು. ಬಳಿಕ ಎಸ್‌ಸಿಪಿ ಬಂತು. ಸಿದ್ದರಾಮಯ್ಯ ಮಾತ್ರ ಎಸ್‌ಸಿಎಸ್ಪಿ, ಟಿಎಸ್‌ಪಿ ತಂದಿದ್ದು ನಾನೇ ಎಂದು ಹೇಳುತ್ತಾರೆ. ಅವರು ಶಾಸನ ಸಭೆಗೆ ಆಯ್ಕೆಯಾಗುವ ಮೊದಲೇ ಎಸ್‌ಸಿಎಸ್ಪಿ, ಟಿಎಸ್‌ಪಿ ಬಂದಿತ್ತು. ಇದು ಸುಳ್ಳು ಎಂದು ಹೇಳಲಿ ನೋಡೋಣ. ಎಲ್ಲವನ್ನೂ ತಾರ್ಕಿಕವಾಗಿ ಮಾತನಾಡುವ ಸಚಿವ ಪ್ರಿಯಾಂಕ್ ಖರ್ಗೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನನ್ನ ಪ್ರಶ್ನೆಗಳಿಗೆ ಉತ್ತರಿಸಲಿ’ ಎಂದು ಸವಾಲು ಹಾಕಿದರು.
ಮುಖಂಡರಾದ ಮಲ್ಲಿಕಾರ್ಜುನ ಜಿನಕೇರಿ, ಮರೆಪ್ಪ ಬಡಿಗೇರ, ಮಾಜಿ ಮೇಯರ್ ವಿಶಾಲ ದರ್ಗಿ, ಹರ್ಷಾನಂದ ಗುತ್ತೇದಾರ ಮಾತನಾಡಿದರು. ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಅಶೋಕ ಬಗಲಿ, ಮುಖಂಡರಾದ ಅಮರನಾಥ ಪಾಟೀಲ, ನಿತಿನ್ ಗುತ್ತೇದಾರ, ಶೋಭಾ ಬಾಣಿ, ಶರಣಪ್ಪ ತಳವಾರ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಬಳಿಕ ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿ ಎದುರಿನ ಸಮಾಜಕಲ್ಯಾಣ ಇಲಾಖೆಯ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಪೊಲೀಸರು ಅವರನ್ನು ತಡೆದರು. ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿಗೆ ಬಂದು ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಅವರಿಗೆ ಮನವಿ ಸಲ್ಲಿಸಿದರು.
ಯಾರು ಏನೆಂದರು...?
ಕಲಬುರಗಿಯಲ್ಲಿ ಪರಿಶಿಷ್ಟರ ಕಲ್ಯಾಣ ನಿರ್ಲಕ್ಷಿಸಲಾಗಿದ್ದು ಇದು ನಿಜಾಮರ ಆಡಳಿತವೇ? ಎನ್.ಮಹೇಶ ಬಿಜೆಪಿ ರಾಜ್ಯ ಉಪಾಧ್ಯಕ್ಷ ಅಹಿಂದ ಹೆಸರು ಹೇಳಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಇದೀಗ ಅಹಿಂದ ಸಮುದಾಯದವರಿಗೇ ಕೈಕೊಡುತ್ತಿದೆ. ಕೈಕೊಡುವುದೇ ಕಾಂಗ್ರೆಸ್. ಕಲಬುರಗಿ ಜನ ಇದನ್ನು ಅರಿಯಬೇಕು
-ಚಂದು ಪಾಟೀಲ ಬಿಜೆಪಿ ನಗರ ಜಿಲ್ಲಾಧ್ಯಕ್ಷ
ಎಸ್‌ಸಿಎಸ್ಪಿ ಟಿಎಸ್‌ಪಿ ಹಣ ದುರ್ಬಳಕೆ ಬಗೆಗೆ ಮಾತನಾಡದಿದ್ದರೆ ದಲಿತ ಸಚಿವರು ಶಾಸಕರ ಮನೆಗಳ ಎದುರು ಧರಣಿ ಮಾಡಬೇಕಾಗುತ್ತದೆ ಅಂಬಾರಾಯ ಅಷ್ಟಗಿ ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಪರಿಶಿಷ್ಟರ ಕಾಳಜಿ ಇದ್ದರೆ ಪರಿಶಿಷ್ಟರ ನಿಗಮಗಳಿಗೆ ಎಷ್ಟೆಷ್ಟು ಅನುದಾನ ಬಿಡುಗಡೆ ಮಾಡಿದೆ ಎಂಬುದರ ದಾಖಲೆ ಕಾಂಗ್ರೆಸ್ ಬಿಡುಗಡೆ ಮಾಡಲಿ
-ಅವ್ವಣ್ಣ ಮ್ಯಾಕೇರಿ ಬಿಜೆಪಿ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.