ADVERTISEMENT

ಸೇಡಂ: ಮಾದಾರ ಚನ್ನಯ್ಯನವರ ಮೂರ್ತಿ ಅನಾವರಣ

ಎರಡು ವರ್ಷಗಳ ನಂತರ ಮೂರ್ತಿಗೆ ದೊರಕಿದ ಅನಾವರಣ ಭಾಗ್ಯ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2025, 5:53 IST
Last Updated 29 ಡಿಸೆಂಬರ್ 2025, 5:53 IST
ಸೇಡಂ ಪಟ್ಟಣದ ಪುರಸಭೆ ಮುಂಭಾಗದಲ್ಲಿ ಶಿವಶರಣ ಮಾದಾರ ಚನ್ನಯ್ಯನವರ ಮೂರ್ತಿಯನ್ನು ಭಾನುವಾರ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ, ಆರ್.ಬಿ.ತಿಮ್ಮಾಪುರ, ಕೆ.ಎಚ್.ಮುನಿಯಪ್ಪ ಅನಾವರಣಗೊಳಿಸಿದರು
ಸೇಡಂ ಪಟ್ಟಣದ ಪುರಸಭೆ ಮುಂಭಾಗದಲ್ಲಿ ಶಿವಶರಣ ಮಾದಾರ ಚನ್ನಯ್ಯನವರ ಮೂರ್ತಿಯನ್ನು ಭಾನುವಾರ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ, ಆರ್.ಬಿ.ತಿಮ್ಮಾಪುರ, ಕೆ.ಎಚ್.ಮುನಿಯಪ್ಪ ಅನಾವರಣಗೊಳಿಸಿದರು   

ಸೇಡಂ: ಪಟ್ಟಣದಲ್ಲಿ ತಂದಿರಿಸಲಾಗಿದ್ದ ಶಿವಶರಣ ಮಾದಾರ ಚನ್ನಯ್ಯವರ ಪಂಚಲೋಹದ ಮೂರ್ತಿ ಕಡೆಗೂ ಎರಡು ವರ್ಷಗಳ ನಂತರ ಅನಾವರಣ ಸಮಾರಂಭ ಎರಡು ವರ್ಷಗಳ ನಂತರ ಸಂಭ್ರಮದಿಂದ ಭಾನುವಾರ ಜರುಗಿತು.

ಪಟ್ಟಣದ ಕೊತ್ತಲ ಬಸವೇಶ್ವರ ದೇವಾಲಯದಿಂದ ಆರಂಭಗೊಂಡ ಶಿವಶರಣ ಮಾದಾರ ಚನ್ನಯ್ಯವರ ಭಾವಚಿತ್ರ ಮೆರವಣಿಗೆ ಪುತ್ಥಳಿವರೆಗೆ ಸಾಗಿತು. ಮೆರವಣಿಗೆಯುದ್ದಕ್ಕೂ ಹಲಿಗೆ ವಾದ್ಯಗಳು ಗಮನ ಸೆಳೆದವು. ಸಚಿವರಾದ ಡಾ.ಶರಣಪ್ರಕಾಶ ಪಾಟೀಲ, ಆರ್.ಬಿ.ತಿಮ್ಮಾಪುರ, ಕೆ.ಎಚ್.ಮುನಿಯಪ್ಪ ಮೂರ್ತಿ ಅನಾವರಣಗೊಳಿಸಿದರು. ಈ ವೇಳೆ ಡಾ.ಬಸವ ಮೂರ್ತಿ ಸ್ವಾಮೀಜಿ, ಷಡಕ್ಷರಿ ಮುನಿ ಸ್ವಾಮೀಜಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಚಿತ್ರದುರ್ಗ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಸ್ವಾಮೀಜಿ ಮಾತನಾಡಿ, ‘ಮಾದಿಗ ಸಮಾಜದ ಶ್ರೇಯೋಭಿದ್ಧಿಗಾಗಿ ರಾಜ್ಯದಲ್ಲಿ ಮಹಾಸಭಾ ಪ್ರಾರಂಭಿಸಲಾಗುತ್ತಿದ್ದು, ಇದಕ್ಕೆ ಪ್ರತಿಯೊಬ್ಬರ ಸಹಕಾರ ಬೇಕಿದೆ. ಅಲ್ಲದೆ ಮಾದಿಗ ಸಮಾಜವನ್ನು ಬಲಪಡಿಸುವ ನಿಟ್ಟಿನಲ್ಲಿ ರಾಜಕೀಯ ಮರೆತು ಪಕ್ಷಾತೀತವಾಗಿ ಸಮಾಜ ಸಂಘಟಿಸಬೇಕಿದೆ’ ಎಂದರು.

ADVERTISEMENT

ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, ‘ಸಮಾಜದ ಇತಿಹಾಸ ಅರಿತು ಸರ್ವ ಸಮಾಜದವರ ಜೊತೆಗೆ ಒಟ್ಟಾಗಿ ಬಾಳಿ, ಸಂಘಟಿತರಾಗುವುದು ಅವಶ್ಯವಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಸಮಾಜವನ್ನು ಸಂಘಟಿಸುವ ಕೆಲಸ ನಡೆಯಲಿ’ ಎಂದು ಆಶಿಸಿದರು.

ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿ, ‘12ನೇ ಶತಮಾನದಲ್ಲಿನ ರಚನೆಯಾದ ವಚನಗಳಲ್ಲಿ ಶೋಷಿತ ಸಮುದಾಯದ ಕೊಡುಗೆ ಸಿಂಹಪಾಲಿದೆ. ಸಮಾಜಕ್ಕೆ ಬೇಕಾದ ಸಹಕಾರವನ್ನು ಸರ್ಕಾರ ಸದಾ ಮಾಡಲು ಸಿದ್ಧವಿದೆ’ ಎಂದು ಹೇಳಿದರು.

ಮಾಜಿ ಶಾಸಕ ರಾಜಕುಮಾರ ಪಾಟೀ‍ಲ ತೇಲ್ಕೂರ ಮಾತನಾಡಿ, ‘ಶಿವಶರಣ ಮಾದಾರ ಚನ್ನಯ್ಯನವರ ಜಯಂತ್ಯುತ್ಸವನ್ನು ಸರ್ಕಾರ ಆಚರಿಸಬೇಕು. ಸಮಾಜದ ಹಿರಿಯ ನಾಯಕ ಕೆ.ಎಚ್.ಮುನಿಯಪ್ಪ ಅವರನ್ನು ಮುಖ್ಯಮಂತ್ರಿ ಮಾಡಿದರೆ ಸಮಾಜ ಬಲಿಷ್ಠಗೊಳಿಸಲು ಸಾಧ್ಯವಾಗುತ್ತದೆ’ ಎಂದರು.

ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ, ಆದಿ ಜಾಂಬವ ಷಡಕ್ಷರಿ ಮುನಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿದರು.

ಜೈಭಾರತ ಮಾತಾ ಸೇವಾ ಸಮಿತಿಯ ಹವಾ ಮಲ್ಲಿನಾಥ ಮಹಾರಾಜ, ಶಿವಶಂಕರ ಶಿವಾಚಾರ್ಯ, ಪಂಚಾಕ್ಷರ ಸ್ವಾಮೀಜಿ, ಬಸವ ಹರಳಯ್ಯಾ ಸ್ವಾಮೀಜಿ, ಸೈಯದ್ ಮುಸ್ತಫಾ ಖಾದ್ರಿ, ಮಾಜಿ ಸಚಿವರಾದ ಆಲ್ಕೋಡ ಹನುಮಂತಪ್ಪ, ಜೆಡಿಎಸ್ ಜಿಲ್ಲಾಧ್ಯಕ್ಷ ಬಾಲರಾಜ್ ಗುತ್ತೇದಾರ, ಸಂತೋಷಿರಾಣಿ ಪಾಟೀಲ, ಬಸವರಾಜ ಪಾಟೀಲ ಊಡಗಿ, ಚಂದ್ರಿಕಾ ಪರಮೇಶ್ವರಿ, ಶಿವಶರಣರೆಡ್ಡಿ ಪಾಟೀಲ, ವಿಜಯಕುಮಾರ ಆಡಕಿ, ವಿಜಯಕುಮಾರ ಜಿ.ಆರ್., ಬಸವರಾಜ ಕಾಳಗಿ, ರಾಮು ಕಣೇಕಲ್, ನಾಗರಾಜ ನಂದೂರ, ಮಾರುತಿ ಮುಗುಟಿ ಸೇರಿದಂತೆ ಇನ್ನಿತರರು ಇದ್ದರು.

ಮಾರುತಿ ಕೋಡಂಗಲಕರ್ ಸ್ವಾಗತಿಸಿದರು. ಜಗನ್ನಾಥ ಚಿಂತಪಳ್ಳಿ ಪ್ರಾಸ್ತಾವಿಕ ಮಾತನಾಡಿದರು. ನವಲಿಂಗ ಪಾಟೀಲ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.