ಸೇಡಂ: ತಾಲ್ಲೂಕಿನ ಮಲ್ಕಾಪಲ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ಕಟ್ಟಡದಿಂದ ನೂತನ ನಿರ್ಮಾಣಗೊಂಡ ಶಾಲೆಗೆ ಸ್ಥಳಾಂತರಿಸುವಂತೆ ಅಧಿಕಾರಿಗಳು ಮೌಖಿಕವಾಗಿ ಭರವಸೆ ನೀಡಿದ್ದಾರೆ.
ಮಲ್ಕಾಪಲ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಗ್ರಾಮಸ್ಥರು ಹಾಗೂ ಪಾಲಕರು ನಡೆಸಿದ ಪ್ರತಿಭಟನಾ ಸ್ಥಳಕ್ಕೆ ಡಿಡಿಪಿಐ ಸೂರ್ಯಕಾಂತ ಮದಾನಿ ಶನಿವಾರ ಭೇಟಿ ನೀಡಿ, ಪರಿಸ್ಥಿತಿ ಅವಲೋಕಿಸಿ ಶಾಲೆ ಸ್ಥಳಾಂತರದ ಭರವಸೆ ನೀಡಿದರು.
ಗ್ರಾಮಸ್ಥರೊಂದಿಗೆ ನೂತನ ಶಾಲಾ ಕಟ್ಟಡಕ್ಕೆ ತೆರಳಿದ ಅವರು, ಶಾಲೆಗೆ ಸಂಪರ್ಕಿಸುವ ರಸ್ತೆ ನಿರ್ಮಾಣದ ಕುರಿತು ಪೊಲೀಸ್ ಅಧಿಕಾರಿಗಳು ಮತ್ತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಜೊತೆಗೆ ಚರ್ಚಿಸಿದರು. ರಸ್ತೆ ನಿರ್ಮಾಣದ ಭರವಸೆಯನ್ನು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ನೀಡಿದರು.
ವರದಿ ಪರಿಣಾಮ: ‘ಆತಂಕದಲ್ಲಿಯೇ ವಿದ್ಯಾರ್ಥಿಗಳ ಕಲಿಕೆ’ ಎಂಬ ಶಿರ್ಷಿಕೆಯಡಿ ಪ್ರಜಾವಾಣಿ ಶನಿವಾರ ವಿಶೇಷ ವರದಿ ಪ್ರಕಟಿಸಿತ್ತು. ವರದಿಯಲ್ಲಿ ಶಾಲೆಯ ಚಾವಣಿ ಸಿಮೆಂಟ್ ಪದರು ಕಳಚಿ ವಿದ್ಯಾರ್ಥಿಗಳಿಗೆ ಗಾಯವಾಗಿರುವ ಕುರಿತು ಉಲ್ಲೇಖಿಸಿತ್ತು.
ತಾತ್ಕಾಲಿಕ ರಸ್ತೆ ನಿರ್ಮಾಣ: ಶಾಲೆಯಿಂದ ಗ್ರಾಮಕ್ಕೆ ನೇರಸಂಪರ್ಕ ಕಲ್ಪಿಸುವಂತೆ ಗ್ರಾಮಸ್ಥರ ಆಗ್ರಹಕ್ಕೆ ಅಧಿಕಾರಿಗಳು ಶನಿವಾರ ಪೊಲೀಸ್‌ರ ಸಮ್ಮುಖದಲ್ಲಿ ತಾತ್ಕಾಲಿಕ ರಸ್ತೆ ನಿರ್ಮಾಣಕ್ಕೆ ಮುಂದಾದರು.
ಲೋಕೋಪಯೋಗಿ ಇಲಾಖೆ ಎಇಇ ಶಿವಶರಣಪ್ಪ ಜೇವರ್ಗಿ, ಡಿಡಿಪಿಐ ಸೂರ್ಯಕಾಂತ ಮದಾನಿ, ಬಿಇಒ ಮಾರುತಿ ಹುಜರಾತಿ ಡಿವೈಎಸ್‌ಪಿ ಸಂಗಮನಾಥ ಹಿರೇಮಠ, ಪೊಲೀಸ್ ಇನ್‌ಸ್ಪೆಕ್ಟರ್ ದೌಲತ್ ಕುರಿ ಸಮ್ಮುಖದಲ್ಲಿಯೇ ಜೆಸಿಬಿ ಮೂಲಕ ರಸ್ತೆ ನಿರ್ಮಾಣಕ್ಕೆ ಮುಂದಾದಾಗ ಕೆಲವರು ಅಡ್ಡಿಪಡಿಸಿದರು. ಪೊಲೀಸ್ ಇಲಾಖೆ ಅಧಿಕಾರಿಗಳು ಮಧ್ಯಸ್ಥಿಕೆ ವಹಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ದಿನವಿಡಿ ಪೊಲೀಸ್ ಇಲಾಖೆಯ ಗಸ್ತಿನಲ್ಲಿ ರಸ್ತೆ ನಿರ್ಮಾಣಕ್ಕಾಗಿ ನೆಲವನ್ನು ಸಮಗೊಳಿಸಲಾಯಿತು. ಇನ್ನೆರಡು ದಿನಗಳಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.
ಸಮನ್ವಯಧಿಕಾರಿ ಶಂಕರಲಿಂಗಪ್ಪ, ಜೆಇ ಗುರುಪ್ರಸಾದ, ರವಿ ಚಿಕ್ಕಳಗಿ, ಬಿಆರ್‌ಪಿ ಉಮಾಕಾಂತ, ಶಿವಕುಮಾರ, ಕಾಶಿನಾಥ್, ಮುಖ್ಯಶಿಕ್ಷಕ ದೇವರಾಜ ಕೋರಿ, ಗ್ರಾಮ ಪಂಚಾಯಿತಿ ಸದಸ್ಯ ನವಾದರೆಡ್ಡಿ, ವೆಂಕಟರೆಡ್ಡಿ ಪೋತುಲ್, ಬಸಿರೆಡ್ಡಿ ಮುನಕನಪಲ್ಲಿ, ಶಿವಾರೆಡ್ಡಿ ಅಂಡೆಡಿ, ರಾಜಶೇಖರ ಗೌಡ , ವಿನೋದ ಕುಮಾರ, ನರಸರೆಡ್ಡಿ ಮುನಕನಪಲ್ಲಿ, ವೀರೇಶ ಸಜ್ಜನ, ಗುಂಡಪ್ಪ ಸಜ್ಜನ, ಭೀಮು ತಿಪಡಮಪಲ್ಲಿ, ವೆಂಕಟಪ್ಪ, ನರಸಿಂಹಲು ಕಾವಲಿ, ರಾಜು ಸಿದ್ದಾಪುರ, ಬಸವರಾಜ ಯಾದವ, ಕಾಶಪ್ಪ, ಶೇಖರ ಸೇರಿದಂತೆ ಅನೇಕರಿದ್ದರು.
ಶಾಲೆಯಲ್ಲಿ ಚಾವಣಿ ಕುಸಿದು ಗಾಯಗೊಂಡ ವಿದ್ಯಾರ್ಥಿನಿ ಕುಟುಂಬದವರಿಗೆ ಭೇಟಿಯಾಗಿದ್ದು ವಿದ್ಯಾರ್ಥಿನಿಯ ವೈದ್ಯಕೀಯ ಚಿಕಿತ್ಸೆಗೆ ಇಲಾಖೆ ಸಹಕಾರ ನೀಡಲಿದೆ. ಶಾಲೆಯನ್ನು ಸೋಮವಾರ ನೂತನ ಕಟ್ಟಡಕ್ಕೆ ಸ್ಥಳಾಂತರಿಸುವಂತೆ ಸೂಚಿಸಲಾಗಿದೆ.– ಸೂರ್ಯಕಾಂತ ಮದಾನಿ, ಡಿಡಿಪಿಐ ಕಲಬುರಗಿ
ಶಾಲೆಯಲ್ಲಿ ಕುಸಿದ ಹಾಜರಾತಿ
ಶಾಲೆಯ ಚಾವಣಿ ಕುಸಿದು ವಿದ್ಯಾರ್ಥಿಗಳಿಗೆ ಗಾಯಗಳಾದ ಹಿನ್ನೆಲೆ ಪಾಲಕರು ಆತಂಕಕ್ಕೆ ಒಳಗಾಗಿದ್ದಾರೆ. ಶನಿವಾರ ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಲು ಹಿಂದೇಟು ಹಾಕಿದರು. ಒಟ್ಟು 256 ವಿದ್ಯಾರ್ಥಿಗಳ ಪೈಕಿ ಶನಿವಾರ 60 ವಿದ್ಯಾರ್ಥಿಗಳು ಮಾತ್ರ ಹಾಜರಾಗಿದ್ದರು.
ಶಾಲೆಯನ್ನು ನೂತನ ಕಟ್ಟಡಕ್ಕೆ ಸ್ಥಳಾಂತರಿಸಿದರೆ ಮಾತ್ರ ಮಕ್ಕಳನ್ನು ಶಾಲೆಗೆ ಕಳುಹಿಸುತ್ತೇವೆ ಎಂದು ಪಾಲಕರು ತಿಳಿಸಿದರು. ಸೋಮವಾರ ಸ್ಥಳಾಂತರದ ಭರವಸೆ ಬಂದಿದ್ದು ಮುಂದಿನ ಬೆಳವಣಿಗೆ ಕಾದು ನೋಡಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.