ಸೇಡಂ: ‘ತಾಲ್ಲೂಕಿನ ನೀಲಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಪಕ್ಕದಲ್ಲಿ ಸ್ಥಾಪನೆಯಾಗುತ್ತಿರುವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತ್ಯಾಜ್ಯ ವಿಲೇವಾರಿ ಘಟಕ ಯಾವುದೇ ಕಾರಣಕ್ಕೂ ಸ್ಥಾಪಿಸಬಾರದು’ ಎಂದು ವಿದ್ಯಾರ್ಥಿಗಳು ಶುಕ್ರವಾರ ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.
ನೀಲಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ವಿದ್ಯಾರ್ಥಿಗಳು ಬೆಳಿಗ್ಗೆ ಶಾಲಾ ತರಗತಿ ಅವಧಿ ತೊರೆದು ಪ್ರತಿಭಟನೆ ನಡೆಸಿ, ಅಧಿಕಾರಿಗಳಿಗೆ ಮನವಿ ಮಾಡಿದರು. ಶಾಲೆಯ ಪಕ್ಕದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಮಾಡುವುದರಿಂದ ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿರುತ್ತದೆ. ಅಲ್ಲದೆ ಅಧ್ಯಯನದ ದೃಷ್ಟಿಕೋನದಿಂದಲೂ ತೊಂದರೆಯಾಗುತ್ತದೆ. ಹೀಗಾಗಿ ಯಾವುದೇ ಕಾರಣಕ್ಕೂ ಸ್ಥಾಪಿಸಬಾರದು ಎಂದು ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಪಟ್ಟು ಹಿಡಿದರು.
‘ಅಲ್ಲದೆ ಗುಣಮಟ್ಟದ ಆಹಾರ ಕೊಡಬೇಕು. ಹೊಸಬರನ್ನು ನೇಮಿಸಿಕೊಂಡು, ಶಾಲೆಯಲ್ಲಿ ಊಟ ನೀಡಬೇಕು’ ಎಂದು ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಉಮಾಪತಿರಾಜು ಅವರಲ್ಲಿ ಮನವಿ ಮಾಡಿದರು. ಪಂಚಾಯಿತಿ ಸದಸ್ಯರು, ಶಾಲಾ ಎಸ್‌ಡಿಎಂಸಿ, ಮುಖ್ಯಶಿಕ್ಷಕರು ಸೇರಿ ಅಡುಗೆ ಸಹಾಯಕರನ್ನು ನೇಮಿಸಿ ನನಗೆ ವರದಿ ನೀಡಿದಲ್ಲಿ ಶೀಘ್ರವೇ ಹೊಸ ಅಡುಗೆ ಕೇಂದ್ರ ಮಂಜೂರು ಮಾಡುವುದಾಗಿ ಭರವಸೆ ನೀಡಿದರು.
‘ಗ್ರಾಮದಲ್ಲಿರುವ ಕುಡಿವ ನೀರಿನ ಘಟಕದಲ್ಲಿ ನಮಗೆ ನೀರು ಕೊಡುತ್ತಿಲ್ಲ. ನೀರು ಕೇಳಿದರೆ ಹಣ ಕೊಡುವಂತೆ ಹೇಳುತ್ತಿದ್ದಾರೆ. ಅಧಿಕಾರಿಗಳು ನಮಗೆ ಶುದ್ಧ ಕುಡಿಯುವ ನೀರು ಪೂರೈಸುವ ಕೆಲಸ ಮಾಡಬೇಕು’ ಎಂದು ವಿದ್ಯಾರ್ಥಿಗಳು ಅಲವತ್ತುಕೊಂಡರು.
‘ಸರ್ಕಾರದ ಸ್ಮಶಾನ ಜಾಗ ಬೇರೆ ಕಡೆ ಇದ್ದು, ಆ ಸ್ಥಳದಲ್ಲೇ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಬೇಕು. ಇದರಿಂದ ಯಾರಿಗೂ ತೊಂದರೆ ಆಗುವುದಿಲ್ಲ’ ಎಂದು ಗ್ರಾಮಸ್ಥರು ಮನವಿ ಮಾಡಿದಾಗ, ತಾಲ್ಲೂಕು ಪಂಚಾಯಿತಿ ಅಧಿಕಾರಿ ನರಸಪ್ಪ ಪರಿಶೀಲಿಸುವುದಾಗಿ ಹೇಳಿದರು. ಕೆಲ ಬೇಡಿಕೆ ಈಡೇರಿಕೆಗೆ ಅಧಿಕಾರಿಗಳು ಭರವಸೆ ನೀಡಿದಾಗ ಮನವಿ ಪತ್ರ ಸಲ್ಲಿಸಿ, ಪ್ರತಿಭಟನೆ ಕೈ ಬಿಟ್ಟು ಶಾಲಾ ತರಗತಿಗೆ ತೆರಳಿದರು.
ಪಂಚಾಯಿತಿ ಕಾರ್ಯದರ್ಶಿ ಜೈಪಾಲಸಿಂಗ ಠಾಕೂರ, ಗ್ರಾಮ ಪಂಚಾಯಿತಿ ಸದಸ್ಯರಾದ ಚಂದಮ್ಮ ಬೇಡರ, ಉಮಾದೇವಿ ಕೇಸರಟಗಿ ಅಶೋಕ ಸಾಹು,ಮಂಜುನಾಥ ಸಾಹು, ಶಿವಶರಣಪ್ಪ ಜಮಾದರ, ಗಣೇಶ ನೀಲಹಳ್ಳಿ, ದೇವಪ್ಪ ನಾಯಿಕೋಡಿ, ರವಿ ನಾಯಕ, ಸಾಬಣ್ಣ ಸುಬ್ಬಕ್ಕನೋರ, ಕಾಶಿನಾಥ ಮಡಿವಾಳ, ಚಂದ್ರಕಾಂತ ತೊಟ್ನಳ್ಳಿ, ಪೀರಪ್ಪ ನಾಯಿಕೋಡಿ ಹಾಜರಿದ್ದರು.
ಪಿಡಿಒ ಸದಸ್ಯರ ಮಾತೇ ಕೇಳಲ್ಲ
ಗ್ರಾಮದ ವಿವಿಧ ಬಡಾವಣೆಯಲ್ಲಿ ಮುಳ್ಳುಕಂಟಿ ಕಡಿಯುವುದು ನಾಲೆ ಸ್ವಚ್ವಗೊಳಿಸುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಮನವಿ ಮಾಡಲಾಗಿತ್ತು. ಆದರೆ ಯಾವುದೇ ಕೆಲಸವನ್ನು ಮಾಡುತ್ತಿಲ್ಲ. ಗ್ರಾಮದ ಸಮಸ್ಯೆಗಳ ಬಗ್ಗೆ ಹೇಳಿದಲ್ಲಿ ನಮ್ಮ ಮಾತೇ ಕೇಳುವುದಿಲ್ಲ ಎಂದು ಗ್ರಾಮ ಪಂಚಾಯಿತಿ ಸದಸ್ಯರಾದ ಚಂದಮ್ಮ ಬೇಡರ ಉಮಾದೇವಿ ಕೇಸರಟಗಿ ಬೇಸರ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.