ADVERTISEMENT

ಸೇಡಂ ಪುರಸಭೆ: ₹37 ಲಕ್ಷ ತೆರಿಗೆ ಸಂಗ್ರಹಿಸಿದ ಮಹಿಳೆಯರು

ಅವಿನಾಶ ಬೋರಂಚಿ
Published 26 ಜುಲೈ 2025, 7:14 IST
Last Updated 26 ಜುಲೈ 2025, 7:14 IST
ಸೇಡಂ ಪಟ್ಟಣದಲ್ಲಿ ಚಾಮುಂಡಿ ಸ್ವ-ಸಹಾಯ ಸಂಘದ ಪದಾಧಿಕಾರಿಗಳು ತೆರಿಗೆ ಸಂಗ್ರಹದಲ್ಲಿ ತೊಡಗಿರುವುದು
ಸೇಡಂ ಪಟ್ಟಣದಲ್ಲಿ ಚಾಮುಂಡಿ ಸ್ವ-ಸಹಾಯ ಸಂಘದ ಪದಾಧಿಕಾರಿಗಳು ತೆರಿಗೆ ಸಂಗ್ರಹದಲ್ಲಿ ತೊಡಗಿರುವುದು   

ಸೇಡಂ: ಪುರಸಭೆಗೆ ಬರಬೇಕಾದ ತೆರಿಗೆಯನ್ನು ಮಹಿಳಾ ಸ್ವ-ಸಹಾಯ ಸಂಘದ ಪದಾಧಿಕಾರಿಗಳು ಮನೆಗಳಿಗೆ ಭೇಟಿ ನೀಡಿ, ₹37 ಲಕ್ಷ ತೆರಿಗೆಯನ್ನು ಜನರಿಂದ ತೆರಿಗೆಯನ್ನು ಪುರಸಭೆಗೆ ಪಾವತಿಸುವಂತೆ ಮಾಡಿ ಗಮನ ಸೆಳೆದಿದ್ದಾರೆ.

ಸೇಡಂ ಪುರಸಭೆ ನೋಂದಾಯಿತ ಚಾಮುಂಡಿ ಸ್ವ-ಸಹಾಯ ಸಂಘದ ಪದಾಧಿಕಾರಿಗಳು ಕಳೆದ ನಾಲ್ಕು ತಿಂಗಳಲ್ಲಿ ಪುರಸಭೆಗೆ ಬರಬೇಕಾದ ಆಸ್ತಿ ಮತ್ತು ನೀರಿನ ತೆರಿಗೆಯನ್ನು ಸಂಗ್ರಹಿಸಿದ್ದಾರೆ. ಮಾರ್ಚ್-ಜೂನ್ ವರೆಗೆ ಜನರ ಮನವೊಲಿಸಿ ಸುಮಾರು ₹37 ಲಕ್ಷ ತೆರಿಗೆಯನ್ನು ಪಾವತಿಸುವಂತೆ ಮಾಡಿದ್ದಾರೆ.

‘ಪುರಸಭೆ ವ್ಯಾಪ್ತಿಯಡಿ ಸುಮಾರು 17ಸಾವಿರಕ್ಕೂ ಅಧಿಕ ಮನೆಗಳಿದ್ದು, ಕರವಸೂಲಿಗೆ ಎರಡು ಹುದ್ದೆಗಳ ಮಂಜೂರಾತಿಯಿದೆ. ಅದರಲ್ಲಿ ಒಂದು ಭರ್ತಿಯಿದ್ದು, ಇನ್ನೊಂದು ಖಾಲಿಯಿದೆ. ಕಚೇರಿ ಕೆಲಸದ ಒತ್ತಡದಲ್ಲಿ ತೆರಿಗೆ ಸಂಗ್ರಹ ಸಾಧ್ಯವಾಗದ ಕಾರಣ ಮಹಿಳಾ ಸಂಘದವರಿಗೆ ನೀಡುವ ವಿನೂತನ ನಿರ್ಧಾರವನ್ನು ಪುರಸಭೆ ಮುಖ್ಯಾಧಿಕಾರಿ ಶರಣಯ್ಯಸ್ವಾಮಿ ಅವರ ಮಾರ್ಗದರ್ಶನದ ಮೇರೆಗೆ ಮಾಡಲಾಗಿದೆ. ಅಂದಾಜು ₹2 ಕೋಟಿಗೂ ಅಧಿಕ ತೆರಿಗೆ ಹಣ ಬರಬೇಕಾಗಿದ್ದು, ಅದರಲ್ಲಿ ₹37 ಲಕ್ಷ ಸಂಗ್ರಹಿಸಿದ್ದಾರೆ’ ಎಂದು ಕಂದಾಯ ಅಧಿಕಾರಿ ಶಂಭುಲಿಂಗ ಕಣ್ಣಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ತೆರಿಗೆ ಸಂಗ್ರಹಕ್ಕೆ ಮಹಿಳಾ ಸಂಘದವರಿಗೆ ಸಭೆ ಕರೆದಾಗ ಸುಮಾರು 40ಕ್ಕೂ ಅಧಿಕ ಸಂಘದವರು ಪಾಲ್ಗೊಂಡಿದ್ದರು. ಕರವಸೂಲಿಯ ಕುರಿತು ಮಾಹಿತಿ ನೀಡಿದಾಗ ಎರಡು ಸಂಘದ ಪದಾಧಿಕಾರಿಗಳು ಆಸಕ್ತಿ ತೋರಿಸಿದ್ದು, ಚಾಮುಂಡಿ ಮಹಿಳಾ ಸ್ವ-ಸಹಾಯ ಸಂಘದ ವ್ಯವಹಾರ ಪರಿಶೀಲಿಸಿ, ಅವರು ನಮ್ಮ ನಿಯಮಗಳಿಗೆ ಒಪ್ಪಿದ್ದರಿಂದ ಅವರಿಗೆ ಸಂಗ್ರಹಿಸುವ ಜವಾಬ್ದಾರಿ ನೀಡಲಾಯಿತು. ವಿವಿಧ ಬಡಾವಣೆಗಳಿಂದ ಬರಬೇಕಾದ ಬಾಕಿ ತೆರಿಗೆ ಮಾಹಿತಿಯನ್ನು ಅವರಿಗೆ ನೀಡಲಾಗಿದೆ’ ಎಂದು ತಿಳಿಸಿದರು.

ಸಮುದಾಯ ಸಂಘಟನಾಧಿಕಾರಿ ಗ್ವಾಲೇಶ ಹೊನ್ನಳ್ಳಿ, ‘ಸಂಘದ ಮಹಿಳಾ ಪದಾಧಿಕಾರಿಗಳ ಕೆಲಸಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಸಂಗ್ರಹಿಸಿದ ಮೊತ್ತ ₹37ಲಕ್ಷದಲ್ಲಿ ಶೇ 5ರಷ್ಟು ವಿವಿಧ ಉಪಕರ ಕಡಿತಗೊಳಿಸಿ ₹1.45 ಲಕ್ಷ ಪ್ರೋತ್ಸಾಹಧನವನ್ನು ಚಾಮುಂಡಿ ಸಂಘದ ಖಾತೆಗೆ ಜಮಾ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

ಶರಣಯ್ಯಸ್ವಾಮಿ ಪುರಸಭೆ ಮುಖ್ಯಾಧಿಕಾರಿ
ಪುರಸಭೆಗೆ ಬರಬೇಕಾದ ಬಾಕಿ ತೆರಿಗೆ ಸಂಗ್ರಹವನ್ನು ಮಹಿಳಾ ಸಂಘದದ ಸದಸ್ಯರು ಪ್ರಾಮಾಣಿಕತೆಯಿಂದ ಜನರ ವಿಶ್ವಾಸಗಳಿಸಿ ಬಾಕಿ ಪಾವತಿಸುವಂತೆ ಮಾಡಿದ್ದಾರೆ.
ಶರಣಯ್ಯಸ್ವಾಮಿ ಪುರಸಭೆ ಮುಖ್ಯಾಧಿಕಾರಿ
ತೆರಿಗೆ ಸಂಗ್ರಹಕ್ಕೆ ಸುಮಾರು 2ಸಾವಿರಕ್ಕೂ ಅಧಿಕ ಮನೆಗಳಿಗೆ ಭೇಟಿ ನೀಡಿದ್ದೇವೆ. ಜನರು ಉತ್ತಮ ಪ್ರತಿಕ್ರಿಯೆ ನೀಡಿ ತೆರಿಗೆ ಪಾವತಿಸುತ್ತಿದ್ದಾರೆ.
ಬಸವರಾಜೇಶ್ವರಿ ಅಧ್ಯಕ್ಷೆ ಚಾಮುಂಡಿ ಮಹಿಳಾ ಸ್ವ-ಸಹಾಯ ಸಂಘ
ಬಸವರಾಜೇಶ್ವರಿ ಅಧ್ಯಕ್ಷೆ ಚಾಮುಂಡಿ ಮಹಿಳಾ ಸ್ವ-ಸಹಾಯ ಸಂಘ
ಸಂಘದ ಮಹಿಳೆಯರು ಮನೆಗೆ ಭೇಟಿ ನೀಡಿ ತೆರಿಗೆ ಪಾವತಿಸುವ ಕುರಿತು ಜನರಿಗೆ ಮನವೊಲಿಸಿ ಪಾವತಿಸುವಂತೆ ಮಾಡುತ್ತಿರುವ ಕಾರ್ಯ ಶ್ಲಾಘನೀಯ
ವೀರೇಂದ್ರ ರುದ್ನೂರ ಅಧ್ಯಕ್ಷ ಪುರಸಭೆ ಸೇಡಂ
ವೀರೇಂದ್ರ ರುದ್ನೂರ ಅಧ್ಯಕ್ಷ ಪುರಸಭೆ ಸೇಡಂ
ಜನರ ಸ್ಪಂದನೆ-ಸಹಕಾರವಿದೆ
ನಾವು ಪುರಸಭೆಯ ತೆರಿಗೆ ಪಾವತಿಸುವಂತೆ ಜನರಿಗೆ ಮನವೊಲಿಸಲು ಹೋದಾಗ ಆರಂಭದಲ್ಲಿ ಗೊತ್ತಾಗುತ್ತಿರಲಿಲ್ಲ. ಕೆಲದಿನಗಳಾದ ಮೇಲೆ ಅನುಭವ ಮತ್ತು ಧೈರ್ಯ ಬಂತು. ತೆರಿಗೆ ಕುರಿತು ಜನರಿಗೆ ಹೆಚ್ಚು ತಿಳಿಸಿ ಪಾವತಿಸುವಂತೆ ಜಾಗೃತಿ ಮೂಡಿಸಿದ್ದೇವೆ. ನಾನು ಮತ್ತು ಸಂಘದ ಪಾರ್ವತಿ ನಿಂಗದಾಳ ಮತ್ತು ಸುಜಾತಾ ಹಿರೇಮಠ ಮೂವರು ಕೂಡಿಕೊಂಡು ಕೆಲಸ ಮಾಡುತ್ತಿದ್ದು ಜನರಿಂದ ಸ್ಪಂದನೆ ಸಿಗುತ್ತಿದೆ. ಜೊತೆಗೆ ನಮ್ಮ ಕಾರ್ಯಕ್ಕೆ ಪುರಸಭೆಯಿಂದ ಪ್ರೋತ್ಸಾಹಧನ ನೀಡಿದ್ದಾರೆ ಎಂದು ಸಂಘದ ಅಧ್ಯಕ್ಷೆ ಬಸವರಾಜೇಶ್ವರಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.