ADVERTISEMENT

ಬೇಕು ಭಿನ್ನ ಆಲೋಚನೆ, ತಾಂತ್ರಿಕ ಕೌಶಲ

ಗೋದುತಾಯಿ ಕಾಲೇಜಿನ ಅಂತರರಾಷ್ಟ್ರೀಯ ವಿಚಾರಸಂಕಿರಣ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2019, 16:02 IST
Last Updated 13 ಫೆಬ್ರುವರಿ 2019, 16:02 IST
ಕಲಬುರ್ಗಿಯ ಗೋದುತಾಯಿ ದೊಡ್ಡಪ್ಪ ಅಪ್ಪ ಮಹಾವಿದ್ಯಾಲಯ ಹಮ್ಮಿಕೊಂಡಿದ್ದ ವಿಚಾರಸಂಕಿರಣವನ್ನು ಬಸವರಾಜ ದೇಶಮುಖ ಉದ್ಘಾಟಿಸಿದರು
ಕಲಬುರ್ಗಿಯ ಗೋದುತಾಯಿ ದೊಡ್ಡಪ್ಪ ಅಪ್ಪ ಮಹಾವಿದ್ಯಾಲಯ ಹಮ್ಮಿಕೊಂಡಿದ್ದ ವಿಚಾರಸಂಕಿರಣವನ್ನು ಬಸವರಾಜ ದೇಶಮುಖ ಉದ್ಘಾಟಿಸಿದರು   

ಕಲಬುರ್ಗಿ: ವಿಭಿನ್ನ ಆಲೋಚನೆ, ತಾಂತ್ರಿಕ ಕೌಶಲದಿಂದ ವಿದ್ಯಾರ್ಥಿಗಳು ಯಶಸ್ವಿ ಉದ್ಯಮಿಗಳಾಗಬಹುದು ಎಂದು ಅಮೆರಿಕೆಯ ಸ್ಯಾನ್ ಫ್ರಾನ್ಸಿಸ್ಕೊದ ಕೆಜಿಐ ಮಿನರ್ವಾ ಶಾಲೆಯ ಉದ್ಯಮಶೀಲತೆ ಮಾಹಿತಿ ವಿದೇಶಿ ಪರಿಣತರಾದ ಮೆಗಾನ್ ಹೇಳಿದರು.

ಇಲ್ಲಿಯ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯ ಮಂಗಳವಾರ ಆಯೋಜಿಸಿದ್ದ ‘ವಿದ್ಯಾರ್ಥಿಗಳನ್ನು ಯುವ ಉದ್ಯಮಿಗಳನ್ನಾಗಿ ರೂಪಿಸುವ ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಕ್ರಮ’ ಎಂಬ ಒಂದು ದಿನದ ಅಂತರರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

‘ಭಾರತದಲ್ಲಿ ಉದ್ಯೋಗಾವಕಾಶಗಳ ಕೊರತೆ ಇದೆ. ವಿದ್ಯಾರ್ಥಿಗಳು ಹೊಸ ಹೊಸ ಅನ್ವೇಷಣೆಯ ತುಡಿತದೊಂದಿಗೆ ನವೋದ್ಯಮಗಳಾಗಿ ಬೆಳೆಯಲು ಸಾಧ್ಯ’ ಎಂದರು.

ADVERTISEMENT

ಹೈದರಾಬಾದ್‌ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಅಮರನಾಥ ಸಿ.ಪಾಟೀಲ ಮಾತನಾಡಿ, ‘ವಿದ್ಯಾರ್ಥಿಗಳು ಕಲಿಕೆಯ ಜೊತೆಗೆ ಉದ್ಯಮಶೀಲತೆಯನ್ನೂ ಮೈಗೂಡಿಸಿಕೊಳ್ಳಬೇಕು. ವ್ಯಾಸಂಗದ ಹಂತದಲ್ಲೇ ಸ್ವಯಂ ಉದ್ಯೋಗ ಮತ್ತು ನವ ಉದ್ಯಮ ಸ್ಥಾಪನೆಯ ಕನಸು ಕಾಣಬೇಕು. ನಿಮ್ಮ ಉದ್ಯಮಶೀಲತೆಯ ಕನಸು ನನಸಾಗಲು ಎಚ್‌ಕೆಸಿಸಿಐ ಸದಾ ನೆರವು ನೀಡುತ್ತದೆ’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯೆ ಡಾ.ನೀಲಾಂಬಿಕಾ ಶೇರಿಕಾರ, ‘ಶರಣಬಸವೇಶ್ವರ ಸಂಸ್ಥಾನ ಹೆಣ್ಣುಮಕ್ಕಳ ಸಬಲೀಕರಣಕ್ಕಾಗಿ ಸಾಕಷ್ಟು ಕೆಲಸ ಮಾಡುತ್ತಿದೆ. ಡಾ.ಶರಣಬಸವಪ್ಪ ಅಪ್ಪ ಅವರು ಹೆಣ್ಣುಮಕ್ಕಳು ಸ್ವಯಂ ಉದ್ಯಮಿಗಳಾಗಬೇಕು ಎಂದು ಚಿಂತಿಸುತ್ತಿರುತ್ತಾರೆ.ಅವರಿಗಾಗಿ ಹಲವಾರು ತಾಂತ್ರಿಕ ಕಾಲೇಜುಗಳನ್ನು ಆರಂಭಿಸಿದ್ದಾರೆ. ನಮ್ಮ ವಿದ್ಯಾರ್ಥಿಗಳು ಹೊರ ದೇಶಗಳಿಗೆ ಹೋಗಿ ಉದ್ಯಮಶೀಲತೆಯ ವಿಚಾರ ವಿನಿಮಯ ಮಾಡಿಕೊಳ್ಳಬೇಕು’ ಎಂದರು.

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ವಿಚಾರ ಸಂಕಿರಣ ಉದ್ಘಾಟಿಸಿದರು.

ಹೈದರಾಬಾದ್‌ನ ಎಝಡ್‌ಆರ್‌ ಸಲ್ಯೂಷನ್‌ನ ಶ್ರೀಶ್‌ ಮಾತನಾಡಿದರು. ಪ್ರೊ.ಶಾಂತಲಾ ನಿಷ್ಠಿ, ವಿಜಯಲಕ್ಷ್ಮಿ ಶೀಲವಂತ, ಉದ್ಯಮಿ ದೊಡ್ಡಪ್ಪ ನಿಷ್ಠಿ ವೇದಿಕೆಯಲ್ಲಿದ್ದರು.

ನವ ಉದ್ಯಮಿಗಳಾದ ಅಂಗಲಿನಾ, ತೆಸ್ಸಾ ಒವನ್ಸ್, ಬ್ಯುಂಗ್‍ಚುಲ್, ಮಾರ್ಟಿನಾ, ಯಾಪ್ ವೈಟಿಂಗ್, ಪೀಟರ್, ಸಂಸ್ಥೆಯ ಎಲ್ಲ ಕಾಲೇಜುಗಳ ಪ್ರಾಚಾರ್ಯರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಡಾ. ಸಿದ್ದಮ್ಮ ಗುಡೇದ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ಡಾ.ಇಂದಿರಾ ಶೇಟಕಾರ ವಂದಿಸಿದರು. ಪ್ರೊ.ಸಾವಿತ್ರಿ ಜಂಬಲದಿನ್ನಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.