ಕಲಬುರಗಿ: ‘ಜೀವನದ ಸಮಸ್ಯೆಗಳಿಗೆ ಆತ್ಮಹತ್ಯೆಯೊಂದೇ ಪರಿಹಾರವಲ್ಲ ಎಂಬ ಕಥಾಹಂದರವುಳ್ಳ ‘ಸೆಪ್ಟೆಂಬರ್ 10’ ಸಿನಿಮಾವು ಜುಲೈ ಎರಡನೇ ವಾರ ತೆರೆ ಕಾಣಲಿದೆ’ ಎಂದು ಸಿನಿಮಾದ ನಿರ್ದೇಶಕ ಓಂ ಸಾಯಿಪ್ರಕಾಶ್ ತಿಳಿಸಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿಶ್ವ ಆತ್ಮಹತ್ಯೆ ತಡೆ ದಿನವನ್ನೇ ಸಿನಿಮಾದ ಶೀರ್ಷಿಕೆಯಾಗಿ ಇಡಲಾಗಿದೆ. ಇದು ನಾನು ನಿರ್ದೇಶಿಸಿದ 105ನೇ ಸಿನಿಮಾ. ರೈತರ, ಪ್ರೇಮಿಗಳ, ವ್ಯಾಪಾರಿಗಳ, ಪರೀಕ್ಷೆ ಎದುರಿಸಲಾಗದ ವಿದ್ಯಾರ್ಥಿಗಳ ಮತ್ತು ಪೋಷಕರು ನಿರೀಕ್ಷಿಸಿದ ಅಂಕ ಗಳಿಸದ ಮಕ್ಕಳ ಆತ್ಮಹತ್ಯೆಯ ಈ 5 ಪ್ರಮುಖ ಅಂಶಗಳ ಮೇಲೆ ಚಿತ್ರಕಥೆ ಹೆಣೆಯಲಾಗಿದೆ. ನಿಮ್ಹಾನ್ಸ್ ವೈದ್ಯರಿಗೆ ಈ ಚಿತ್ರವನ್ನು ತೋರಿಸಿದ್ದು, ಆತ್ಮಹತ್ಯೆ ತಡೆಗೆ ಉತ್ತಮ ಸಂದೇಶದ ಚಿತ್ರವೆಂದು ಶ್ಲಾಘಿಸಿದ್ದಾರೆ’ ಎಂದರು.
‘ಶ್ರೀದೇವಿ ಪಿಕ್ಚರ್ಸ್ ಬ್ಯಾನರ್ ಅಡಿ ಇ.ರಾಜಮ್ಮ ಸಾಯಿಪ್ರಕಾಶ್ ಅವರು ಸಿನಿಮಾ ನಿರ್ಮಾಣ ಮಾಡಿದ್ದಾರೆ. ವಿ. ನಾಗೇಂದ್ರಪ್ರಸಾದ್–ಸಂಗೀತ, ಜೆ.ಜಿ. ಕೃಷ್ಣ–ಛಾಯಾಗ್ರಹಣ, ಬಿ.ಎ.ಮಧು –ಸಂಭಾಷಣೆ ಚಿತ್ರಕ್ಕಿದೆ. ರಮೇಶ್ ಭಟ್, ಶಶಿಕುಮಾರ್, ಶ್ರೀನಿವಾಸ ಮೂರ್ತಿ, ರವೀಂದ್ರನಾಥ್, ಶಿವಕುಮಾರ್, ಗಣೇಶರಾವ್ ಕೇಸರಕರ್, ಸಿಹಿಕಹಿ ಚಂದ್ರು, ಮೀಸೆ ಅಂಜಿನಪ್ಪ, ಜೋಸೈಮನ್, ಮನಮೋಹನ್, ಪದ್ಮಾ ವಾಸಂತಿ, ಶ್ರೀರಕ್ಷಾ, ಅನಿತಾರಾಣಿ ಹಾಗೂ ಜಯಸಿಂಹ ಆರಾಧ್ಯ ಹೀಗೆ ಅನೇಕ ಅನುಭವಿ ಕಲಾವಿದರೇ ನಟಿಸಿದ್ದಾರೆ. ಮ್ಯೂಸಿಕ್ ಬಜಾರ್ ಈ ಚಿತ್ರದ ಹಾಡುಗಳನ್ನ ಹೊರತಂದಿದೆ’ ಎಂದು ತಿಳಿಸಿದರು.
ಚಿತ್ರದಲ್ಲಿನ ತಮ್ಮ ಪಾತ್ರಗಳನ್ನು ಪರಿಚಯಿಸಿದ ನಟರಾದ ಗಣೇಶರಾವ್ ಕೇಸರಕರ್ ಮತ್ತು ಜಯಸಿಂಹ, ಜನ ಕುಟುಂಬಸಮೇತರಾಗಿ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ ಪ್ರೋತ್ಸಾಹಿಸುವಂತೆ ಕೋರಿದರು.
ಶಾಸಕ ಬಸವರಾಜ ಮತ್ತಿಮಡು ಮಾತನಾಡಿ, ‘ಚಿತ್ರವನ್ನು ನಾನು ವೀಕ್ಷಿಸುವ ಜೊತೆಗೆ ನನ್ನ ಕ್ಷೇತ್ರದ ಶಾಲಾ–ಕಾಲೇಜು ವಿದ್ಯಾರ್ಥಿಗಳ ವೀಕ್ಷಣೆಗೆ ಕ್ರಮವಹಿಸುತ್ತೇನೆ’ ಎಂದರು.
ಶಿವಶಕ್ತಿ ದಾಲಮಿಲ್‌ನ ಬಸವರಾಜ ಪಾಟೀಲ, ಕಲ್ಯಾಣಪ್ಪ ಸನ್ನತಿ, ಮಲ್ಲಿಕಾರ್ಜುನ ಪಾಟೀಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.