ADVERTISEMENT

ಲೈಂಗಿಕ ಕಿರುಕುಳ ಆರೋಪ: ಬಿಜೆಪಿ ಸದಸ್ಯತ್ವ ಪಡೆದಿದ್ದ ಆರೋಪಿ ಚೇತನ್ ರೆಡ್ಡಿ!

ಪೋಕ್ಸೊ: ಪ್ರಾಚಾರ್ಯ ಸೇರಿ ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2022, 11:24 IST
Last Updated 13 ಸೆಪ್ಟೆಂಬರ್ 2022, 11:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಿಂಚೋಳಿ (ಕಲಬುರಗಿ): ತಾಲ್ಲೂಕಿನ ಶಾಲೆಯೊಂದರ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಪೋಕ್ಸೊ ಪ್ರಕರಣ ದಾಖಲಾಗುತ್ತಿದ್ದಂತೆಯೇ ಮಂಗಳವಾರ ವಸತಿ ಶಾಲೆಯ ಪ್ರಾಚಾರ್ಯ ಚೇತನ್ ರೆಡ್ಡಿ ಮತ್ತು ಕಂಪ್ಯೂಟರ್ ಆಪರೇಟರ್ ಸಂಗಮೇಶ ಎಂಬುವರನ್ನು ಬಂಧಿಸಿ‌ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ವಸತಿ ಶಾಲೆಗೆ ಮಂಗಳವಾರ ಭೇಟಿ ನೀಡಿದ ಸಂದರ್ಭದಲ್ಲಿ ಈ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್, ‘ಇಬ್ಬರೂ ಆರೋಪಿಗಳನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ’ ಎಂದರು.‌

'ಶಾಲೆಗೆ ಮಹಿಳಾ ವಾರ್ಡನ್, ಮಹಿಳಾ ಕಂಪ್ಯೂಟರ್ ಆಪರೇಟರ್ ಮತ್ತು ಮಹಿಳಾ ಪ್ರಾಂಶುಪಾಲರನ್ನು ನಿಯೋಜಿಸಲು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ' ಎಂದರು.

ADVERTISEMENT

ಸಮಾಜ ಕಲ್ಯಾಣ ಇಲಾಖೆಯಲ್ಲಿ‌ ಮಹಿಳಾ ಅಧಿಕಾರಿ ಲಭ್ಯವಾಗದಿದ್ದರೆ ಸಾರ್ವಜನಿಕ ಶಿಕ್ಷಣ ಇಲಾಖೆಯವರಿಗೆ ಪ್ರೌಢ ಶಾಲೆ ಮುಖ್ಯ ಶಿಕ್ಷಕಿ ಅವರನ್ನು ನಿಯೋಜಿಸಲು ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್ ಅಂಜುಮ್ ತಬಸ್ಸುಮ್ ಅವರಿಗೆ ಸೂಚಿಸಿದರು. ಶಿಕ್ಷಣ ಇಲಾಖೆಯವರಿಗೆ ಪತ್ರ ಬರೆದು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಶಾಲೆಗೆ ಭೇಟಿ ನೀಡಿದ ಡಾ. ಉಮೇಶ ಜಾಧವ ಮಾತನಾಡಿ, ‘ವಸತಿ ಶಾಲೆಯ ನೂತನ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಲಾಗಿದ್ದು ಹಣ ಮಂಜೂರಾಗಿರುತ್ತದೆ. ಆದರೆ ಕೋವಿಡ್ ಕಾರಣದಿಂದ ಟೆಂಡರ್ ಪ್ರಕ್ರಿಯೆ ನಡೆದಿರಲಿಲ್ಲ. ಈಗ ಕಟ್ಟಡ ನಿರ್ಮಾಣ ವೆಚ್ಚ ಹೆಚ್ಚಳವಾಗಿದ್ದರಿಂದ ಮತ್ತೆ ಅನುದಾನ ಮಂಜೂರಾತಿಗೆ ಸಚಿವರಿಗೆ ಮನವಿ ಮಾಡಿದ್ದೇವೆ’ ಎಂದು ತಿಳಿಸಿದರು.

ಕೋಡ್ಲಿ, ಕೊಟಗಾ ಹಾಗೂ ಅಣವಾರದಲ್ಲಿ ಬೃಹತ್ ವಸತಿ ಶಾಲೆ ಕಟ್ಟಡ ನಿರ್ಮಿಸಲಾಗಿದೆ. ಇಲ್ಲಿಯೂ ಕಟ್ಟಡ ಮಂಜೂರಾಗಲಿದೆ ಎಂದರು.

ಬಿಜೆಪಿ ಸದಸ್ಯತ್ವ ಪಡೆದ ಆರೋಪಿ
ಬಂಧನಕ್ಕೊಳಗಾದ ಬಳಿಕ ವಸತಿ ಶಾಲೆಯ ಪ್ರಾಚಾರ್ಯ ಹುದ್ದೆಯಿಂದ ಅಮಾನತುಗೊಂಡಿರುವ ಚೇತನ್ ರೆಡ್ಡಿ ಬಿಜೆಪಿ ಪಕ್ಷದ ಸದಸ್ಯತ್ವ ಪಡೆದಿರುವ ಅಂಶ ಬೆಳಕಿಗೆ ಬಂದಿದೆ. ಅಲ್ಲದೇ, ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬಂದಿದ್ದ ವಸತಿ ಸಚಿವ ವಿ. ಸೋಮಣ್ಣ ಅವರೊಂದಿಗೆ ಸೆಲ್ಫಿ ತೆಗೆಸಿಕೊಂಡಿದ್ದಾರೆ. ಬಿಜೆಪಿ ಪಕ್ಷದ ಚಿಹ್ನೆ ಇರುವ ಶಾಲು ಹಾಕಿಕೊಂಡು ಕಾರ್ಯಕರ್ತರೊಂದಿಗೆ ಇರುವ ಚಿತ್ರಗಳು ಬಹಿರಂಗವಾಗಿವೆ.

-ಚೇತನ್ ರೆಡ್ಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.