ADVERTISEMENT

ಶಹಾಬಾದ್‌ನಲ್ಲಿ ಎರಡು ರೈಲು ನಿಲುಗಡೆ ಪುನರಾರಂಭ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2024, 5:00 IST
Last Updated 4 ಮಾರ್ಚ್ 2024, 5:00 IST
ಶಹಾಬಾದ್ ರೈಲು ನಿಲ್ದಾಣದಲ್ಲಿ ಭಾನುವಾರ ಬೆಳಿಗ್ಗೆ ಸಂಸದ ಡಾ. ಉಮೇಶ್ ಜಾಧವ್ ಅವರು ಚೆನ್ನೈ–ಮುಂಬೈ ರೈಲಿಗೆ ಹಸಿರು ನಿಶಾನೆ ತೋರಿಸಿದರು
ಶಹಾಬಾದ್ ರೈಲು ನಿಲ್ದಾಣದಲ್ಲಿ ಭಾನುವಾರ ಬೆಳಿಗ್ಗೆ ಸಂಸದ ಡಾ. ಉಮೇಶ್ ಜಾಧವ್ ಅವರು ಚೆನ್ನೈ–ಮುಂಬೈ ರೈಲಿಗೆ ಹಸಿರು ನಿಶಾನೆ ತೋರಿಸಿದರು   

ಶಹಾಬಾದ್: ಕೋವಿಡ್ ಸಂದರ್ಭದಲ್ಲಿ ಶಹಾಬಾದ್ ನಿಲ್ದಾಣದಲ್ಲಿ ನಿಲುಗಡೆ ರದ್ದುಗೊಂಡಿದ್ದ ಮುಂಬೈ–ಚೆನ್ನೈ ರೈಲಿಗೆ ಹಸಿರು ನಿಶಾನೆ ತೋರಿಸುವ ಮೂಲಕ ಭಾನುವಾರ ಸಂಸದ ಡಾ. ಉಮೇಶ್ ಜಾಧವ್ ಅವರು ಮೂರು ರೈಲುಗಳ ನಿಲುಗಡೆಗೆ ಚಾಲನೆ ನೀಡಿದರು.

ಕೋವಿಡ್ ಮುಗಿದ ಬಳಿಕವೂ ಮೂರು ಪ್ರಮುಖ ರೈಲುಗಳಾದ ಮುಂಬೈ–ಚೆನ್ನೈ ಎಕ್ಸ್‌ಪ್ರೆಸ್, ಕೋನಾರ್ಕ್ ಎಕ್ಸ್‌ಪ್ರೆಸ್ ಹಾಗೂ ವಿಜಯಪುರ–ಹೈದರಾಬಾದ್ ರೈಲುಗಳಿಗೆ ನಿಲುಗಡೆ ಇರಲಿಲ್ಲ. ಇದನ್ನು ಖಂಡಿಸಿ ಶಹಾಬಾದ್ ಹೋರಾಟ ಸಮಿತಿ ನೇತೃತ್ವದಲ್ಲಿ ಹಲವು ಪ್ರತಿಭಟನೆಗಳು ನಡೆದಿದ್ದವು. ಈ ಕುರಿತು ಸಂಸದ ಡಾ. ಉಮೇಶ್ ಜಾಧವ್ ಅವರಿಗೂ ಮನವಿ ಸಲ್ಲಿಸಿದ್ದರು. 

ಸಂಸದ ಜಾಧವ್ ಅವರು ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಹಾಗೂ ಇಲಾಖೆಯ ಅಧಿಕಾರಿಗಳ ಜೊತೆ ಸತತ ಸಂಪರ್ಕ ಮಾಡಿ ಮಾತುಕತೆ ನಡೆಸಿದ ಪರಿಣಾಮವಾಗಿ ಕೊನೆಗೂ ಶಹಬಾದ್ ರೈಲು ನಿಲ್ದಾಣದಲ್ಲಿ ಮೂರು ರೈಲು ನಿಲುಗಡೆಗೆ ಇಲಾಖೆಯು ಒಪ್ಪಿಗೆ ನೀಡಿದ್ದರು. 

ADVERTISEMENT

ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಡಾ. ಉಮೇಶ್ ಜಾಧವ್, ಶಹಾಬಾದ್ ರೈಲು ನಿಲ್ದಾಣವನ್ನು ಅಮೃತ ಭಾರತ ಯೋಜನೆ ಅಡಿ ₹ 30 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಇಲಾಖೆ ಕಾರ್ಯ ಪ್ರಾರಂಭಿಸಿದೆ. ಇಲ್ಲಿನ ರೈಲು ನಿಲ್ದಾಣಕ್ಕೆ ಅಗತ್ಯವಾದ ಅಂಡರ್ ಪಾಸ್ ವ್ಯವಸ್ಥೆಯ ನಿರ್ಮಾಣಕ್ಕೆ ಕೂಡಲೇ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ರೈಲು ವಿಭಾಗದ ಹಿರಿಯ ಡಿಸಿಎಂ ಗಳಾದ ಸಿ.ಕೆ. ರಾಯನ್ ವಾಲೆ ಮತ್ತು ಯೋಗೀಶ್ ಪಾಟೀಲ್, ಎಸಿಎಂ ಸುದರ್ಶನ್ ಕುಲಕರ್ಣಿ, ಎಡಿಎನ್ ಸರ್ವನ್ ಲಾಲ್ ಭೀಮ್ ಮತ್ತು ರೈಲ್ವೆ ಇನ್‌ಸ್ಪೆಕ್ಟರ್‌ ಹಾಗೂ ಸಿಬ್ಬಂದಿಯಾದ ನಿಂಗಣ್ಣ ಹುಳುಗೋಳ್ಕರ್, ಬಿಜೆಪಿಯ ಶಹಾಬಾದ್ ಘಟಕದ ಅಧ್ಯಕ್ಷ ದಿನೇಶ್ ಗೌಳಿ, ಕಾರ್ಯದರ್ಶಿ ಕನಕಪ್ಪ ದಂಡುಳ್ಕರ್, ಶಿವರಾಜ್ ಇಂಗಿನಶೆಟ್ಟಿ, ಹೋರಾಟ ಸಮಿತಿಯ ಅಧ್ಯಕ್ಷ ಮೊಹಮ್ಮದ್ ಉಬೇದುಲ್ಲಾ, ಚಂದ್ರಕಾಂತ ಗೊಬ್ಬೂರಕರ್, ಶರಣು ವಸ್ತ್ರದ, ಕುಮಾರ ಚೌಹಾಣ್, ಭೀಮ ರಾವ್ ಸಾಳುಂಕೆ, ಹಾಸಮ ಖಾನ, ಅರುಣ್ ಕುಮಾರ್ ಪಟ್ಟಣಕರ, ಅಹ್ಮದ್ ಪಟೇಲ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.