ಕಲಬುರಗಿ: ಇಲ್ಲಿನ ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿ, ಶರಣಬಸವೇಶ್ವರ ವಿಶ್ವವಿದ್ಯಾಲಯದ ಕುಲಾಧಿಪತಿಯಾಗಿದ್ದ ಡಾ.ಶರಣಬಸವಪ್ಪ ಅಪ್ಪ (90) ಅವರು ಗುರುವಾರ ರಾತ್ರಿ 9.23ಕ್ಕೆ ನಿಧನರಾದರು.
ಅಲ್ಪಕಾಲದ ಅನಾರೋಗ್ಯದಿಂದಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗುರುವಾರ ಸಂಜೆ ಆಸ್ಪತ್ರೆಯಿಂದ ಅಪ್ಪ ಅವರ ನಿವಾಸ 'ಮಹಾಮನೆ'ಗೆ ಕರೆದೊಯ್ದ ಕೆಲ ಹೊತ್ತಿನಲ್ಲಿ ಕೊನೆಯುಸಿರೆಳೆದರು.
ಅವರಿಗೆ ಪತ್ನಿ ದಾಕ್ಷಾಯಣಿ ಎಸ್. ಅಪ್ಪ, ಏಳು ಜನ ಪುತ್ರಿಯರು, ಪುತ್ರ, ಸಂಸ್ಥಾನದ 9ನೇ ಪೀಠಾಧಿಪತಿ ದೊಡ್ಡಪ್ಪ ಅಪ್ಪ ಇದ್ದಾರೆ.
2018ರಲ್ಲಿ ಕಲಬುರಗಿಯ ಶರಣಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದ ರಾಹುಲ್ ಗಾಂಧಿ ಅವರಿಗೆ ಸನ್ಮಾನಿಸಿದ್ದ ಶರಣಬಸವಪ್ಪ ಅಪ್ಪ
ಧಾರ್ಮಿಕ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವುದರ ಜೊತೆಗೆ ಶೈಕ್ಷಣಿಕ ಕ್ರಾಂತಿ ಮಾಡಿದ್ದ ಶರಣಬಸವಪ್ಪ ಅವರು ಶರಣಬಸವೇಶ್ವರ ವಿಶ್ವವಿದ್ಯಾಲಯ, ಶರಣಬಸವೇಶ್ವರ ರೆಸಿಡೆನ್ಷಿಯಲ್ ಪಬ್ಲಿಕ್ ಸ್ಕೂಲ್, ಅಪ್ಪ ಪಬ್ಲಿಕ್ ಸ್ಕೂಲ್, ಗೋದುತಾಯಿ ಮಹಿಳಾ ಕಾಲೇಜು, ಎಂಜಿನಿಯರಿಂಗ್, ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಕಾಲೇಜುಗಳನ್ನು ಆರಂಭಿಸಿ ಹೊಸ ಎತ್ತರಕ್ಕೆ ಕೊಂಡೊಯ್ದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಅವರಿಗೆ ಶರಣಬಸವಪ್ಪ ಅವರು ಸ್ಮರಣಿಕೆ ನೀಡಿದ್ದರು
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ಡಾ.ಶರಣಬಸವಪ್ಪ ಅಪ್ಪ ಅವರು ನಂತರ ಅದೇ ವಿ.ವಿ.ಯ ಸಿಂಡಿಕೇಟ್ ಸದಸ್ಯರಾಗಿದ್ದರು. ಈ ಸಂದರ್ಭದಲ್ಲಿ ಗುಲಬರ್ಗಾದಲ್ಲಿ ಕವಿವಿಯ ಸ್ನಾತಕೋತ್ತರ ಕೇಂದ್ರ ಆರಂಭಿಸುವ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ಹೇರಿದ್ದರು. ನಂತರ ಗುಲಬರ್ಗಾದಲ್ಲಿ ಸ್ವತಂತ್ರ ವಿಶ್ವವಿದ್ಯಾಲಯ ಮಂಜೂರಾತಿಗೆ ಶ್ರಮಿಸಿದ್ದ ಅಪ್ಪ ಅವರು ವಿ.ವಿ. ಆರಂಭಕ್ಕೆ ಅಗತ್ಯವಾದ ಭೂಮಿ ಹಾಗೂ ಇತರ ಸೌಕರ್ಯಗಳನ್ನು ಗುರುತಿಸಲು ಸರ್ಕಾರ ನೇಮಕ ಮಾಡಿದ್ದ ಸಮಿತಿಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.
ಶರಸಬಸವಪ್ಪ ಅವರು ಪತ್ನಿ ದಾಕ್ಷಾಯಣಿ ಅಪ್ಪ ಅವರೊಂದಿಗೆ
1983ರಲ್ಲಿ ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿಯಾಗಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿ ಅಪ್ಪಾಜಿ ಅವರು ಪೀಠಾರೋಹಣ ಮಾಡಿದ ನಂತರ ಈ ಭಾಗದಲ್ಲಿ ಸಂಘವು ಶಿಕ್ಷಣದಲ್ಲಿ ಗುಣಮಟ್ಟವನ್ನು ಖಾತರಿಪಡಿಸಲು ಶ್ರಮಿಸಿದರು.
ಯಾದಗಿರಿ ಜಿಲ್ಲೆಯ ಸುರಪುರ ಪಟ್ಟಣದಲ್ಲಿ ಎಂಜಿನಿಯರಿಂಗ್ ಕಾಲೇಜು ಸ್ಥಾಪಿಸಿದರು. ಯಾದಗಿರಿ, ಬೀದರ್ ಮತ್ತು ಕಲಬುರಗಿ ಜಿಲ್ಲೆಗಳ ಗ್ರಾಮೀಣ ಪ್ರದೇಶಗಳಲ್ಲಿ ಪದವಿ ಕಾಲೇಜುಗಳು ಮತ್ತು ಇತರ ಶಿಕ್ಷಣ ಸಂಸ್ಥೆಗಳ ಸರಪಳಿಯನ್ನು ಪ್ರಾರಂಭಿಸಿದ್ದರು.
ಕಲಬುರಗಿ ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿ ಶರಣಬಸವಪ್ಪ ಅವರು ಪುತ್ರ, 9ನೇ ಪೀಠಾಧಿಪತಿ ದೊಡ್ಡಪ್ಪ ಅಪ್ಪ ಅವರೊಂದಿಗೆ
ಹೈದರಾಬಾದ್ ಕರ್ನಾಟಕ ಶಿಕ್ಷಣ ಸೊಸೈಟಿಯ ಅಧ್ಯಕ್ಷರಾಗಿಯೂ ಶರಣಬಸವಪ್ಪ ಅವರು ಕಾರ್ಯನಿರ್ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.