ADVERTISEMENT

ಪರಿಹಾರ ಕೇಂದ್ರ ತೆರೆಯಲು ಸೂಚನೆ

ಟೆಂಗಳಿ ಗ್ರಾಮದ ಪ್ರವಾಹ ಪರಿಸ್ಥಿತಿ ವೀಕ್ಷಿಸಿದ ಶಶಿಕಲಾ ಟೆಂಗಳಿ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2020, 14:46 IST
Last Updated 22 ಸೆಪ್ಟೆಂಬರ್ 2020, 14:46 IST
ಟೆಂಗಳಿ ಗ್ರಾಮದಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿಯನ್ನು ಶಶಿಕಲಾ ಟೆಂಗಳಿ ಅವರು ಮಂಗಳವಾರ ಪರಿಶೀಲಿಸಿದರು
ಟೆಂಗಳಿ ಗ್ರಾಮದಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿಯನ್ನು ಶಶಿಕಲಾ ಟೆಂಗಳಿ ಅವರು ಮಂಗಳವಾರ ಪರಿಶೀಲಿಸಿದರು   

ಕಲಬುರ್ಗಿ: ನಿರಂತರ ಮಳೆಯಿಂದಾಗಿ ಟೆಂಗಳಿ ಗ್ರಾಮದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ನಿರಾಶ್ರಿತರಿ ಊಟ, ವಸತಿಗಾಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಯೇ ಪರಿಹಾರ ಕೇಂದ್ರ ತೆರೆಯಬೇಕು ಎಂದುಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ಟೆಂಗಳಿ ಸೂಚಿಸಿದರು.

ಅತಿವೃಷ್ಠಿಯಿಂದಾಗಿ ಟೆಂಗಳಿ ಗ್ರಾಮದಲ್ಲಿ ಉಂಟಾದ ಪ್ರವಾಹ ಹಾನಿಯನ್ನು ಮಂಗಳವಾರ ಖುದ್ದು ಪರಿಶೀಲಿಸಿದ ನಂತರ ಅವರು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

ನೆರೆಯಿಂದಾಗಿ ಹಲವು ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದಾರೆ. ಹಲವರು ನಿರಾಶ್ರಿತರಾಗಿದ್ದಾರೆ. ಸಾಕಷ್ಟು ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ. ಬಟ್ಟೆ, ಕಾಳುಕಡಿ, ಗೃಹೋಪಯೋಗಿ ವಸ್ತುಗಳು ಹಾಳಾಗಿವೆ. ಹಾಗಾಗಿ, ಅವರಿಗೆ ತಕ್ಷಣ ಸಹಾಯ ಹಸ್ತ ಚಾಚಬೇಕು ಎಂದೂ ಅವರು ತಿಳಿಸಿದರು.

ADVERTISEMENT

ಟೆಂಗಳಿ ಗ್ರಾಮದ ಸಣ್ಣ ಸೇತುವೆ ಹಾಳಾಗಿದೆ. ಇದರ ದುರಸ್ತಿಗೆ ಕೆಲವು ಅಡೆತಡೆಗಳಿವೆ. ಈ ಬಗ್ಗೆ ನ್ಯಾಯಾಲಯದಲ್ಲಿ ದಾವೆ ಕೂಡ ಇದ್ದು, ಅದನ್ನು ಕೂಡಲೇ ಪರಿಗರಿಸಿಕೊಳ್ಳಬೇಕು. ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು, ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕಾಮಗಾರಿ ಮುಂದುವರಿಸಬೇಕು ಎಂದೂ ಅವರು ಸೂಚಿಸಿದರು.

ನಂತರ ಅವರು, ‘ಸಮೃದ್ಧಿ’ ಯೋಜನೆಯ ಆಯ್ಕೆಯಾದ ಬೀದಿ ವ್ಯಾಪಾರಿಗಳಿಗೆ ತಲಾ ₹ 10 ಸಾವಿರದಂತೆ 22 ಫಲಾನುಭವಿಗಳಿಗೆ ಪ್ರೋತ್ಸಾಹ ಧನದ ಪ್ರಮಾಣಪತ್ರ ವಿತರಿಸಿದರು.

ಸೇಡಂ ವಲಯ ಸಹಾಯಕ ಆಯುಕ್ತ, ಕಾಳಗಿ ತಶೀಲ್ದಾರ್, ಟೆಂಗಳಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ತಲಾಟಿ, ಗ್ರಾಮ ಪಂಚಾಯಿತಿ ಸದಸ್ಯರು, ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.