ADVERTISEMENT

ಕಲಬುರ್ಗಿ: ದೂರದಿಂದಲೇ ನಮಿಸಿ ಶ್ರಾವಣ ಮಾಸಕ್ಕೆ ಚಾಲನೆ

ಕೊರೊನಾ: ದೇವಸ್ಥಾನಗಳ ಬಾಗಿಲು ಬಂದ್‌

​ಪ್ರಜಾವಾಣಿ ವಾರ್ತೆ
Published 20 ಜುಲೈ 2020, 16:23 IST
Last Updated 20 ಜುಲೈ 2020, 16:23 IST
ಲಾಕ್‌ಡೌನ್‌ ಪ್ರಯುಕ್ತ ಕಲಬುರ್ಗಿಯ ಶರಣಬಸವೇಶ್ವರ ದೇವಸ್ಥಾನವನ್ನು ಬಂದ್‌ ಮಾಡಲಾಗಿದ್ದು, ಶ್ರಾವಣ ಮಾಸದ ನಿಮಿತ್ತ ಸೋಮವಾರ ದೇವಸ್ಥಾನದತ್ತ ಬಂದ ವಾಹನಗಳಲ್ಲಿ ಬಂದ ಭಕ್ತರು, ಸಾರ್ವಜನಿಕರನ್ನು ಸ್ವಯಂಸೇವಕರು ವಾಪಸ್ ಕಳಿಸಿದರು
ಲಾಕ್‌ಡೌನ್‌ ಪ್ರಯುಕ್ತ ಕಲಬುರ್ಗಿಯ ಶರಣಬಸವೇಶ್ವರ ದೇವಸ್ಥಾನವನ್ನು ಬಂದ್‌ ಮಾಡಲಾಗಿದ್ದು, ಶ್ರಾವಣ ಮಾಸದ ನಿಮಿತ್ತ ಸೋಮವಾರ ದೇವಸ್ಥಾನದತ್ತ ಬಂದ ವಾಹನಗಳಲ್ಲಿ ಬಂದ ಭಕ್ತರು, ಸಾರ್ವಜನಿಕರನ್ನು ಸ್ವಯಂಸೇವಕರು ವಾಪಸ್ ಕಳಿಸಿದರು   

ಕಲಬುರ್ಗಿ: ಕೊರೊನಾ ವೈರಾಣುವಿನ ಭೀತಿಯಿಂದ ನಗರದ ಎಲ್ಲ ದೇವಸ್ಥಾನಗಳ ಬಾಗಿಲುಗಳು ಮುಚ್ಚಿದ್ದರಿಂದ, ಭಕ್ತರು ಸೋಮವಾರ ದೂರದಿಂದಲೇ ನಮಿಸಿ ಶ್ರಾವಣ ಮಾಸವನ್ನು ಆರಂಭಿಸಿದರು.

ನಾಗರ ಅಮವಾಸ್ಯೆಯೊಂದಿಗೆ ಶ್ರಾವಣದ ಪವಿತ್ರ ತಿಂಗಳು ಶುರುವಾಗಿದ್ದರೂ ದೇವರ ದರ್ಶನ ಸಿಗುವುದು ದುರ್ಲಭವಾಯಿತು. ದೇವಸ್ಥಾನದ ಎದುರಿಗೆ ತೆರಳಿ ತೆಂಗಿನಕಾಯಿ ಒಡೆದು ಕರ್ಪೂರ, ಧೂಪ, ಊದಿನಕಡ್ಡಿಯನ್ನು ಬೆಳಗಿದರು. ನಗರದ ಮಹಾದಾಸೋಹಿ ಶರಣಬಸವೇಶ್ವರ ದೇವಾಲಯಕ್ಕೆ ಬೆಳಗ್ಗೆ ಭಕ್ತರ ದಂಡು ಆಗಮಿಸಿತ್ತು. ಆದರೆ, ಸರ್ಕಾರದ ಆದೇಶದಂತೆ ಬಂದ್ ಮಾಡಿದ್ದರಿಂದ ಭಕ್ತರು ಮುಖ್ಯರಸ್ತೆಯಲ್ಲಿರುವ ದೇವಾಲಯದ ಪ್ರವೇಶ ದ್ವಾರಕ್ಕೆ ಹೂವು–ಕಾಯಿ ಅರ್ಪಿಸಿದರು. ಅಲ್ಲಿಂದಲೇ ಶರಣರನ್ನು ಸ್ಮರಿಸಿದರು. ಶರಣಬಸವೇಶ್ವರ ದೇವಾಲಯ ಮುಂಭಾಗದಲ್ಲಿರುವ ಜಾತ್ರಾ ಮೈದಾನದಲ್ಲಿರುವ ಬೇವಿನ ಮರದ ಕೆಳಗಿನಿಂದಲೇ ಪೂಜೆ ಮಾಡಲು ದೇವಾಲಯದವರು ಹೇಳಿದ್ದಾರೆ ಎಂದು ಪೊಲೀಸರು ಹೇಳಿದ್ದರಿಂದ ಬಳಿಕ ಭಕ್ತರು ಪ್ರವೇಶ ಬಾಗಿಲಿನಿಂದ ಬೇವಿನ ಮರದ ಬಳಿ ಹೋಗಿ ಅಲ್ಲಿ ಪೂಜೆ ಮಾಡಿದರು.

ನಸುಕಿನ ಜಾವದಲ್ಲಿಯೇ ಹಲವು ಭಕ್ತರು ಸ್ನಾನ ಮಾಡಿಕೊಂಡು ಬರಿಗಾಲಲ್ಲಿ ನಡೆದುಕೊಂಡು ಬಂದು ಶರಣಬಸವೇಶ್ವರರ ದರ್ಶನ ಪಡೆದುಕೊಂಡು ಹೋದರು. ಇನ್ನೂ ಕೆಲವು ಹಳ್ಳಿಗಳಿಂದ ಭಕ್ತರು ಪಾದಯಾತ್ರೆ ಮೂಲಕ ದೇವಸ್ಥಾನಕ್ಕೆ ಆಗಮಿಸಿ ನಮಿಸಿದರು.

ಶ್ರಾವಣ ಮಾಸದಲ್ಲಿ ಪುರಾಣಗಳನ್ನು ಮೊದಲಾದವನ್ನು ಎಲ್ಲಿಯೂ ಆಯೋಜಿಸಿಲ್ಲ. ಜಿಲ್ಲೆಯಾದ್ಯಂತ ಇರುವ ಎಲ್ಲ ಬಹುತೇಕ ದೇವಾಲಯಗಳಲ್ಲಿ ಸಾಂಕೇತಿಕವಾಗಿ ಶ್ರಾವಣದ ವಿಶೇಷ ಪೂಜೆಗಳು ನಡೆದವು.

ADVERTISEMENT

ದೇವಸ್ಥಾನದಲ್ಲಿ ಸಂಪ್ರದಾಯ ಪಾಲನೆ ಶ್ರಾವಣ ಮಾಸದ ಆರಂಭದ ದಿನವಾದ ಸೋಮವಾರ ಕಲಬುರ್ಗಿಯ ಶರಣಬಸವೇಶ್ವರ ದೇವಾಲಯದಲ್ಲಿ ವಿಶೇಷ ಅಭಿಷೇಕ ಹಾಗೂ ಪೂಜೆ ನಡೆಸಲಾಯಿತು. ದಾಸೋಹ ಸಂಸ್ಥಾನದ ಪೀಠಾಧಿಪತಿಗಳಾದ ಡಾ. ಶರಣಬಸವಪ್ಪ ಅಪ್ಪ, 9ನೇ ಪೀಠಾಧಿಪತಿ ದೊಡ್ಡಪ್ಪ ಅಪ್ಪ, ದಾಕ್ಷಾಯಣಿ ಎಸ್‌. ಅಪ್ಪ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಅವರ ನೇತೃತ್ವದಲ್ಲಿ ವಿಶೇಷ ಪೂಜೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು. ಪಲ್ಲಕ್ಕಿಗೂ ಪೂಜೆ ಸಲ್ಲಿಸಿ ಸಾಂಕೇತಿಕವಾಗಿ ದೇವಾಲಯದೊಳಗೆ ಮಾಡುವ ಸಂಪ್ರದಾಯ ಪಾಲಿಸಲಾಯಿತು. ಲಾಕ್‌ಡೌನ್ ಜಾರಿಯಲ್ಲಿರುವುದರಿಂದ ಭಕ್ತರಿಗೆ ದೇವಾಲಯ ಪ್ರವೇಶ ಇಲ್ಲದಿರುವುದರಿಂದ ದೇವಸ್ಥಾನದವರೇ ಪ್ರತಿನಿತ್ಯ ಶರಣರ ಪೂಜೆ, ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿಕೊಂಡು ಹೋಗುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.