ADVERTISEMENT

ಪಿಡಿಒಗಳ ಅಮಾನತು ಮಾಡಿ, ಕ್ರಿಮಿನಲ್‌ ಮೊಕದ್ದಮೆ ಹಾಕಿ: ಶ್ರೀರಾಮ ಸೇನೆ ಆಗ್ರಹ

ಪಿಡಿಒಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ದಿನವಿಡೀ ಧರಣಿ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2023, 6:08 IST
Last Updated 29 ಡಿಸೆಂಬರ್ 2023, 6:08 IST
ಕಲಬುರಗಿಯಲ್ಲಿರುವ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಶ್ರೀರಾಮ ಸೇನೆ ಜಿಲ್ಲಾ ಘಟಕದಿಂದ ಗುರುವಾರ ಧರಣಿ ನಡೆಸಲಾಯಿತು
ಕಲಬುರಗಿಯಲ್ಲಿರುವ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಶ್ರೀರಾಮ ಸೇನೆ ಜಿಲ್ಲಾ ಘಟಕದಿಂದ ಗುರುವಾರ ಧರಣಿ ನಡೆಸಲಾಯಿತು   

ಕಲಬುರಗಿ: ಜಿಲ್ಲೆಯ ವಿವಿಧ ಪಂಚಾಯಿತಿಗಳಲ್ಲಿ ಭ್ರಷ್ಟಾಚಾರ ನಡೆಸಿರುವ ಪಿಡಿಒಗಳ ಅಮಾನತು ಹಾಗೂ ಅವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವಂತೆ ಆಗ್ರಹಿಸಿ ಶ್ರೀರಾಮ ಸೇನೆ ಜಿಲ್ಲಾ ಘಟಕದಿಂದ ಇಲ್ಲಿನ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಗುರುವಾರ ದಿನವಿಡೀ ಧರಣಿ ನಡೆಸಲಾಯಿತು.

‘ಹಿರೋಳ್ಳಿ ಪಂಚಾಯಿತಿಯಲ್ಲಿ ಕರ್ತವ್ಯಲೋಪವೆಸಗಿದ್ದ ಹಾಗೂ ಹಿಪ್ಪರಗಾ (ಎಸ್.ಎನ್) ಪಂಚಾಯಿತಿಯಲ್ಲಿ ₹ 21 ಲಕ್ಷ ವಂಚಿಸಿರುವ ಆನಂದಕುಮಾರ ದೊಡಮನಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಸಾಥಖೇಡ್ ಪಿಡಿಒ ಅಮಾನತು ಮಾಡಬೇಕು. ಪಿಡಿಒ, ಅಧ್ಯಕ್ಷರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಆಂದೋಲಾ ಪಿಡಿಒ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಆಲೂರ ಪಂಚಾಯಿತಿಯ ಡಿಇಒ ಮತ್ತು ಮೂವರು ಪಿಡಿಒಗಳನ್ನು ಅಮಾನತು ಮಾಡಬೇಕು’ ಎಂದು ಆಗ್ರಹಿಸಲಾಯಿತು.

‘ಸಂಜೆ ವೇಳೆಗೆ ಧರಣಿ ನಿರತರನ್ನು ಭೇಟಿ ಮಾಡಿದ ಸಂಸದ ಡಾ.ಉಮೇಶ ಜಾಧವ ಪ್ರತಿಭಟನಾನಿರತರಿಂದ ಅಹವಾಲು ಆಲಿಸಿದರು. ಬಳಿಕ ಜಿಲ್ಲಾ ಪಂಚಾಯಿತಿ ಸಿಇಒ ಭಂವರ್ ಸಿಂಗ್‌ ಮೀನಾ ಅವರೊಂದಿಗೆ ಚರ್ಚಿಸಿದರು. ಅಂತಿಮವಾಗಿ ರಾತ್ರಿ 9.30ರ ವೇಳೆಗೆ ಜಿಲ್ಲಾ ಪಂಚಾಯಿತಿ ಸಿಇಒ ಅವರು ಈ ಪ್ರಕರಣಗಳಿಗೆ ಸಂಬಂಧಿಸಿದಂತೆ  ಶುಕ್ರವಾರ ಕಾನೂನು ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ. ಅವರ ಭರವಸೆ ಹಿನ್ನೆಲೆಯಲ್ಲಿ ಸದ್ಯ ಧರಣಿ ಕೈಬಿಡಲಾಗಿದೆ. ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳದಿದ್ದರೆ ಮತ್ತೆ ಧರಣಿ ನಡೆಸುತ್ತೇವೆ’ ಎಂದು ಶ್ರೀರಾಮ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಮಹೇಶ ಗೊಬ್ಬೂರ ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.