ಕಲಬುರಗಿ ನಗರದ ಗೋದುತಾಯಿ ಬಡಾವಣೆಯಲ್ಲಿರುವ ಮದರ್ ತೆರೆಸಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಮಕ್ಕಳು ಕೃಷ್ಣನ ವಿವಿಧ ವೇಷ ತೊಟ್ಟು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು
ಕಲಬುರಗಿ: ನಗರದ ಸ್ಟೇಷನ್ ಬಜಾರ್ ಬಡಾವಣೆಯ ವಿಠ್ಠಲ ರುಕ್ಮಿಣಿ ಮಂದಿರ, ವಿದ್ಯಾನಗರ ಬಡಾವಣೆಯ ಶ್ರೀಕೃಷ್ಣ ಮಂದಿರ, ಸ್ಟೇಷನ್ ರಸ್ತೆಯ ಜಿಡಿಎ ಕಚೇರಿ ಎದುರಿನ ಇಸ್ಕಾನ್ ಮಂದಿರ, ಪೂರ್ವ ಪ್ರಾಥಮಿಕ ಶಾಲೆಗಳು ಸೇರಿದಂತೆ ಶನಿವಾರ ಪುಟಾಣಿ ಮಕ್ಕಳಿದ್ದ ಮನೆ, ಮನೆಯಲ್ಲೂ ಶ್ರೀಕೃಷ್ಣ ಜನ್ಮಾಷ್ಟಮಿಯ ಸಡಗರ ಮನೆ ಮಾಡಿತ್ತು.
ತಲೆಯಲ್ಲಿನ ಕಿರೀಟದಲ್ಲಿ ನವಿಲುಗರಿ ಸಿಕ್ಕಿಸಿಕೊಂಡು, ಕೈಯಲ್ಲಿ ಕೊಳಲನ್ನು ಹಿಡಿದು, ಬಾಯೆಲ್ಲಾ ಮೊಸರು ಮಾಡಿಕೊಂಡು ಬಾಲಗೋಪಾಲ ಕಿಲಕಿಲ ಎನ್ನುತ್ತಿದ್ದರೆ, ಮಡಿಕೆ ಹಿಡಿದು ಪುಟಾಣಿ ರಾಧೆಯರು ಸಂಭ್ರಮಿಸುತ್ತಿದ್ದರು. ದೇಗುಲಗಳ ಆವರಣದಲ್ಲಿ ಕೃಷ್ಣಾ ನೀ ಬೇಗನೆ ಬಾರೋ ಎನ್ನುವ ಜತೆಗೆ ಪುರಂದರ ದಾಸರ ಕೀರ್ತನೆಗಳು ಕೇಳಿಬರುತ್ತಿದ್ದವು.
ಮನೆಗಳಷ್ಟೇ ಅಲ್ಲದೇ ವಿವಿಧ ಶಾಲೆಗಳಲ್ಲೂ ಮಕ್ಕಳನ್ನು ಕೃಷ್ಣ, ರಾಧೆಯರಂತೆ ಸಿಂಗರಿಸಿ ಸಂಭ್ರಮಿಸಲಾಯಿತು. ಅಲ್ಲಲ್ಲಿ ಬಲರಾಮನೂ ಕಾಣಿಸಿಕೊಳ್ಳುತ್ತಿದ್ದ. ವಿದ್ಯಾರ್ಥಿಗಳನ್ನು ಕೃಷ್ಣ, ರಾಧೆಯರ ವೇಷದಲ್ಲಿ ಕಣ್ತುಂಬಿಕೊಳ್ಳುತ್ತಿದ್ದ ಶಿಕ್ಷಕಿಯರು ತಾವೇ ಯಶೋಧೆ ಎಂದು ಬೀಗುತ್ತಿದ್ದರು. ಕೃಷ್ಣನನ್ನೂ ದೇವಕಿ ಹೆತ್ತರೂ ಸಾಕಿದ್ದು ಯಶೋಧೆ ಅಲ್ಲವೇ ಎಂಬ ಗತ್ತು ಕಾಣಿಸುತ್ತಿತ್ತು.
ಭಗವದ್ಗೀತೆಯ ಮೂಲಕ ಜಗತ್ತಿಗೆ ಜ್ಞಾನದ ಬೆಳಕು ನೀಡಿದ ಶ್ರೀಕೃಷ್ಣ ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ಜನಿಸಿದ ಎಂದು ಪುರಾಣ ಹೇಳುತ್ತದೆ. ಅಂದು ಮಧ್ಯರಾತ್ರಿ 12ಗಂಟೆಗೆ ಕಾರಾಗೃಹದಲ್ಲಿ ಕೃಷ್ಣ ಜನಿಸಿದ ಎಂದು ಹೇಳಲಾಗುತ್ತದೆ. ಈ ಹಿನ್ನೆಲೆಯಲ್ಲಿ ಇಸ್ಕಾನ್ ಮಂದಿರದಲ್ಲಿ ರಾತ್ರಿ 12ಗಂಟೆಗೆ ಮಹಾ ಆರತಿ ನೆರವೇರಿತು.
ವಾಸ್ತವಿಕತೆ ತಿಳಿದಾಗ ಸನಾತನ ಧರ್ಮದ ಹಿರಿಮೆ ಗರಿಮೆಗಳ ಅರಿವಾಗುತ್ತದೆ. ಶ್ರೀಕೃಷ್ಣ ನಾಮಸ್ಮರಣೆ ಪ್ರಸಾದ ಪ್ರವಚನ ಸಮಾಜಕ್ಕೆ ಮಂಗಲವನ್ನುಂಟು ಮಾಡುತ್ತವೆಉದ್ಧವ ಆನಂದ, ಕಲಬುರಗಿ ಇಸ್ಕಾನ್ ಪ್ರಮುಖ ಪ್ರಚಾರಕ
ಕಲಬುರಗಿಯ ವಿದ್ಯಾನಗರ ಬಡಾವಣೆಯಲ್ಲಿರುವ ಶ್ರೀಕೃಷ್ಣ ಮಂದಿರ ಹಾಗೂ ಹನುಮ ಭೀಮ ಮಧ್ವರ ದೇವಸ್ಥಾನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ದಿನವಿಡೀ ವಿಶೇಷ ಪೂಜೆ, ಪಾರಾಯಣ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತಿಮಯ ವಾತಾವರಣ ಸೃಷ್ಟಿಸಿದ್ದವು. ಅಲ್ಲದೇ ಎಸ್‌ಪಿಸಿ ಆರೋಗ್ಯ ಫೌಂಡೇಷನ್ ಆರೋಗ್ಯ ಉಚಿತ ಶಿಬಿರವನ್ನೂ ಆಯೋಜಿಸಿತ್ತು.
9ದಿನ ನಿರಂತರ ಭಜನೆ: ನಗರದ ಸ್ಟೇಷನ್ ಬಜಾರ್‌ನಲ್ಲಿರುವ 1717ರಲ್ಲಿ ಸ್ಥಾಪಿತವಾದ ವಿಠ್ಠಲ ಮಂದಿರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ವಿಠ್ಠಲ ರುಕ್ಮಿಣಿ ವಿಗ್ರಹಗಳಿಗೆ ವಿಶೇಷ ಅಲಂಕಾರಗಳನ್ನು ಮಾಡಿ, ಮಹಾಮಂಗಳಾರತಿ ನೆರವೇರಿಸಲಾಯಿತು. ದೇವಸ್ಥಾನವನ್ನು ತಳಿರು ತೋರಣ ಹಾಗೂ ದೀಪಾಲಂಕಾರದಿಂದ ಸಿಂಗರಿಸಲಾಗಿತ್ತು. ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಕರ್ಮಳಾ ತಾಲ್ಲೂಕಿನ ಬಿಟ್ಟರಗಾಂವ್‌ನ 70 ಜನರ ಭಜನಾ ತಂಡ ಆ.9ರಿಂದ ನಿರಂತರ ಭಜನೆ, ಕೀರ್ತನೆಯಲ್ಲಿ ತೊಡಗಿತ್ತು. ಶ್ರೀಕೃಷ್ಣ ಜನ್ಮಾಷ್ಟಮಿಯಂದು ಪಲ್ಲಕ್ಕಿ ಮೆರವಣಿಗೆಯೊಂದಿಗೆ ಸಂಪನ್ನಗೊಳಿಸಿತು.
ಇಸ್ಕಾನ್ ಮಂದಿರ: ಸ್ಟೇಷನ್ ರಸ್ತೆಯ ಜಿಡಿಎ ಕಚೇರಿ ಎದುರಿನ ಇಸ್ಕಾನ್ ಮಂದಿರದಲ್ಲೂ ಬೆಳಿಗ್ಗೆಯಿಂದಲೇ ವಿವಿಧ ಕಾರ್ಯಕ್ರಮಗಳು ನಡೆದವು. ಭಕ್ತರು ಬಂದು ಪ್ರಸಾದ ಸ್ವೀಕರಿಸಿ, ಭಜನೆಯಲ್ಲಿ ತೊಡಗುತ್ತಿದ್ದರು. ‘ವಿಷ್ಣುವಿನ ದಶಾವತಾರಗಳಲ್ಲಿ ಕೃಷ್ಣನು ಎಂಟನೇ ಅವತಾರವೆಂದು ಪರಿಗಣಿತನಾಗಿದ್ದಾನೆ. ದೇವಕಿಗೆ ಜನಿಸಿದರೂ ಕೃಷ್ಣನ ಸಾಕುತಾಯಿ ಯಶೋಧೆ. ಕೃಷ್ಣ ರಾಜಕೀಯ ಮಾಡಿದ, ಅನೈತಿಕ ಕಾರ್ಯ ಮಾಡಿದ ಎಂದು ಸಮಾಜದಲ್ಲಿ ಇನ್ನೂ ತಪ್ಪು ನಂಬಿಕೆಗಳಿವೆ. ಅಪನಂಬಿಕೆಗಳನ್ನು ದೂರ ಮಾಡುವುದೇ 130ಕ್ಕೂ ಅಧಿಕ ದೇಶಗಳಲ್ಲಿರುವ ಇಸ್ಕಾನ್ ಕಾರ್ಯ’ ಎಂದು ಕಲಬುರಗಿ ಇಸ್ಕಾನ್ ಪ್ರಮುಖ ಪ್ರಚಾರಕ ಉದ್ಧವ ಆನಂದ ವಿವರಿಸುತ್ತಿದ್ದರು.
ಮೊಸರುಗಡಿಗೆ ಒಡೆಯೋದೇಕೆ?
ವಿಟ್ಲಪಿಂಡಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಮುಖ ಆಕರ್ಷಣೆಯಾಗಿರುತ್ತದೆ. ಶ್ರೀಕೃಷ್ಣ ಸಣ್ಣವನಿದ್ದಾಗ ಮನೆ ಮನೆಗೆ ನುಗ್ಗಿ ಬೆಣ್ಣೆ ಕದಿಯುತ್ತಿದ್ದ. ಇವನ ಕಾಟ ತಾಳಲಾರದೆ ಜನರು ಮೊಸರು ಹಾಗೂ ಬೆಣ್ಣೆಯನ್ನು ಕೃಷ್ಣನ ಕೈಯಿಂದ ತಪ್ಪಿಸಲು ಮಡಿಕೆಯಲ್ಲಿ ಸಂಗ್ರಹ ಮಾಡಿ ಮೇಲೆ ಕಟ್ಟುತ್ತಿದ್ದರು. ಆದ್ರೆ ಕೃಷ್ಣ ಬಲು ತುಂಟನಾದ ಕಾರಣ ಸ್ನೇಹಿತರ ಬೆನ್ನ ಮೇಲೆ ಹತ್ತಿ ಮಡಿಕೆ ಒಡೆದು ಬೆಣ್ಣೆ ತಿನ್ನುತ್ತಿದ್ದ ಈ ರೀತಿಯ ಚೇಷ್ಟೆ ನೆನಪಿಸುವ ಸಲುವಾಗಿಯೇ ಮಡಿಕೆ ಕಟ್ಟಿ ಒಡೆಯುವ ಆಚರಣೆಯನ್ನು ಮಾಡಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.