
ಕಲಬುರಗಿ: 12ನೇ ಶತಮಾನದ ಶರಣರು ಕಾಯಕದಿಂದ ಬಂದ ಒಂದಷ್ಟು ಭಾಗವನ್ನು ದಾಸೋಹ ಮಾಡುತ್ತಿದ್ದರು ಎಂದು ಕೇಳಿದ್ದೇವೆ. ಅದರಂತೆ ಇಲ್ಲಿನ ಕುಟುಂಬವೊಂದು ಕಾಯಕಯೋಗಿ ಸೇವಾ ಸಂಸ್ಥೆ ಹೆಸರಿನಲ್ಲಿ ನಿರ್ಗತಿಕರ ಹಸಿವು ನೀಗಿಸುವ ಕೆಲಸ ಮಾಡುತ್ತಿದೆ. ನಿರಾಶ್ರಿತರಿಗೆ ನಿತ್ಯ 25 ಊಟ ವಿತರಿಸುತ್ತಿದೆ.
ಸಂಸ್ಥೆ ಅಧ್ಯಕ್ಷ ಕೇದಾರನಾಥ ಕುಲಕರ್ಣಿ ಇದರ ರೂವಾರಿ. ಅವರ ಕಾರ್ಯಕ್ಕೆ ಕುಟುಂಬ ಸಾಥ್ ನೀಡುತ್ತಿದೆ. ಪ್ರತಿದಿನ ಬೆಳಿಗ್ಗೆ 7.30ಕ್ಕೆ ಸ್ವಾರಗೇಟ್ ನಗರದ ಮನೆಯಿಂದ ಊಟದ ಪೊಟ್ಟಣಗಳು ಹೋಗುತ್ತವೆ.
ಕುಟುಂಬದ ಮಹಿಳೆಯರು ಪ್ರತಿದಿನ ಬೆಳಕು ಮೂಡುವಷ್ಟರಲ್ಲಿ 25 ಊಟಕ್ಕಾಗಿ ರೊಟ್ಟಿ ಬಡಿಯುತ್ತಾರೆ. ಜೊತೆಗೆ ಪಲ್ಯ ಸಿದ್ಧಪಡಿಸುತ್ತಾರೆ. ಒಂದು ಊಟದಲ್ಲಿ 2 ರೊಟ್ಟಿ, ಹಿಂಡಿ, ಪಲ್ಯ, ಉಪ್ಪಿನಕಾಯಿ, ಸಾಂಬಾರು ಇರುತ್ತದೆ. ಕೆಲ ಬಾರಿ ಅನ್ನ, ಉಪ್ಪಿಟ್ಟು, ಸಿಹಿ ಕೊಡಲಾಗುತ್ತದೆ.
ತಲಾ ₹3 ಸಾವಿರ: 2015ರಲ್ಲಿ ಕಾಯಕಯೋಗಿ ಸೇವಾ ಸಂಸ್ಥೆ ರಚಿಸಿದ್ದು, ಕುಟುಂಬಸ್ಥರೇ ಇದಕ್ಕೆ ಪದಾಧಿಕಾರಿಗಳು. ನಿರ್ಗತಿಕರ ಆಹಾರಕ್ಕಾಗಿ ಪ್ರತಿ ತಿಂಗಳು ಸಂಸ್ಥೆಯ 6 ಜನ ತಲಾ ₹3 ಸಾವಿರದಂತೆ ₹18 ಸಾವಿರ ಕೂಡಿಸುತ್ತಾರೆ.
ನಂದೂರಿನಲ್ಲಿ ಪಾಲುದಾರಿಕೆಯಲ್ಲಿ ನೀರಿನ ಘಟಕ ಹಾಕಿರುವ ಕೇದಾರನಾಥ, ಖಾಸಗಿ ಕಂಪನಿಯಲ್ಲೂ ಕೆಲಸ ಮಾಡುತ್ತಾರೆ. ಜಮೀನು ಕೆಲಸ ನೋಡಿಕೊಳ್ಳುವ ತಂದೆ ಶರಣಬಸಪ್ಪ ಕುಲಕರ್ಣಿ, ಗೃಹರಕ್ಷಕ ದಳದಲ್ಲಿರುವ ಅಣ್ಣ ಸುರೇಶ ಕುಲಕರ್ಣಿ, ತಾಜ್ ಕಾಲೇಜಿನ ಪ್ರಾಂಶುಪಾಲರಾಗಿರುವ ಅತ್ತಿಗೆ ಅನಿತಾ ಕುಲಕರ್ಣಿ, ಗೃಹಿಣಿ ಅಕ್ಕ ನಾಗವೇಣಿ, ಶ್ರೀಶೈಲ ಮಲ್ಲಿಕಾರ್ಜುನ ಸಂವರ್ಧದಲ್ಲಿ ಕೆಲಸ ಮಾಡುವ ಪತ್ನಿ ಶಾಂತಾಬಾಯಿ ಎಲ್ಲರೂ ದುಡಿಮೆಯ ಒಂದಷ್ಟು ಹಣವನ್ನು ತೆಗೆದಿಡುತ್ತಾರೆ. ತಾಯಿ ಭಾಗೀರಥಿ ಮೇಲ್ವಿಚಾರಣೆ ಮಾಡಿಕೊಂಡು ಹೋಗುತ್ತಾರೆ.
ನಿಲ್ಲದ ದಾಸೋಹ
‘ಕುಟುಂಬಸ್ಥರು ಊರಿಗೆ ಹೋದಾಗ, ಮನೆಯಲ್ಲಿ ಊಟ ಸಿದ್ಧಪಡಿಸಲು ಆಗದಿದ್ದಾಗ ‘ರೊಟ್ಟಿ ಮಹಾದೇವಿ’ ಅವರ ಹತ್ತಿರ ದಿನಕ್ಕೆ ₹500ರಂತೆ 25 ಊಟ ತಂದು ಹಂಚುತ್ತೇನೆ. ನಾನೂ ಬೇರೆಡೆ ಹೋದರೆ ಸ್ನೇಹಿತರಿಗೆ ಊಟ ಹಂಚಲು ತಿಳಿಸುತ್ತೇನೆ. ಈ ಕಾರ್ಯಕ್ಕೆ ಯಾರಿಂದಲೂ ಹಣ ಪಡೆಯುವುದಿಲ್ಲ’ ಎನ್ನುತ್ತಾರೆ ಕೇದಾರನಾಥ.
ದೇಹದಾನಕ್ಕೆ ವಾಗ್ದಾನ: ಶಾಂತಾಬಾಯಿ ಮತ್ತು ಕೇದಾರನಾಥ ದಂಪತಿ ಮರಣದ ನಂತರ ದೇಹದಾನಕ್ಕೆ ಜಿಮ್ಸ್ ಆಸ್ಪತ್ರೆಗೆ ವಾಗ್ದಾನ ಮಾಡಿದ್ದಾರೆ. ಕೇದಾರನಾಥ ರಕ್ತದಾನ ಶಿಬಿರ ಕೂಡ ಆಯೋಜಿಸುತ್ತಾರೆ.
ಅಪ್ಪ ಅಡತ್‌ನಲ್ಲಿ ಮುನಿಮ್ ಇದ್ದರು. ಅಲ್ಲಿ ಬರುವ ರೈತರಿಗೆ ತಮ್ಮ ಕೈಲಾದಷ್ಟು ಊಟ ಹಂಚುತ್ತಿದ್ದರು. ಅದನ್ನು ಈಗ ನಿರಾಶ್ರಿತರಿಗೆ ಊಟ ಕೊಡುವ ಮೂಲಕ ಮುಂದುವರಿಸಿಕೊಂಡು ಹೋಗುತ್ತಿದ್ದೇವೆ– ಕೇದಾರನಾಥ ಕುಲಕರ್ಣಿ, ಸಮಾಜ ಸೇವಕ
ಕಾಲಕ್ಕನುಗುಣ ಸೇವೆ...
ಕಾಯಕಯೋಗಿ ಸೇವಾ ಸಂಸ್ಥೆ ವತಿಯಿಂದ ಕಾಲಗಳಿಗೆ ಅನುಗುಣವಾಗಿ ವಿವಿಧ ಸಮಾಜಸೇವಾ ಕಾರ್ಯಗಳನ್ನೂ ನಡೆಸಿಕೊಂಡು ಬರಲಾಗುತ್ತಿದೆ. ಪ್ರಸ್ತುತ ಚಳಿಗಾಲ ಇರುವುದರಿಂದ ನಿರಾಶ್ರಿತರಿಗೆ ಶಾಲು ಬೆಡ್‌ಶೀಟ್ ಟೋಪಿ ಸ್ವೆಟರ್ ಹಂಚಲಾಗಿದೆ. ಮಳೆಗಾಲದಲ್ಲಿ ಸಸಿ ನೆಡುವ ಮತ್ತು ವಿತರಣೆ ಕಾರ್ಯ ಮಾಡಲಾಗಿದೆ. ಹಕ್ಕಿಪಕ್ಷಿಗಳಿಗೆ ಕಾಳು–ನೀರು ಒದಗಿಸಲು ಗಿಡಗಳಿಗೆ ತೊಟ್ಟಿ ಕಟ್ಟುವ ಕಾಯಕವೂ ನಡೆಯುತ್ತದೆ. ಈ ಕಾರ್ಯ ಬೇಸಿಗೆಯಲ್ಲಿ ಹೆಚ್ಚು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.