ADVERTISEMENT

ಸಂವಿಧಾನಕ್ಕೆ ಸಮಾಜವಾದ, ಜಾತ್ಯಾತೀತ ಜೀವಾಳ: ಉಪನ್ಯಾಸಕ ಕರಿಗೂಳೇಶ್ವರ

​ಪ್ರಜಾವಾಣಿ ವಾರ್ತೆ
Published 31 ಜುಲೈ 2025, 5:24 IST
Last Updated 31 ಜುಲೈ 2025, 5:24 IST
ವಾಡಿ ಪಟ್ಟಣದ ಡಾ.ಬಿ.ಆರ್‌.ಅಂಬೇಡ್ಕರ್‌ ಸ್ಮಾರಕ ಭವನದಲ್ಲಿ ಸಂಚಲನ ವೇದಿಕೆಯಿಂದ ಭಾನುವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಉಪನ್ಯಾಸಕ ಕರಿಗೂಳೇಶ್ವರ ಮಾತನಾಡಿದರು
ವಾಡಿ ಪಟ್ಟಣದ ಡಾ.ಬಿ.ಆರ್‌.ಅಂಬೇಡ್ಕರ್‌ ಸ್ಮಾರಕ ಭವನದಲ್ಲಿ ಸಂಚಲನ ವೇದಿಕೆಯಿಂದ ಭಾನುವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಉಪನ್ಯಾಸಕ ಕರಿಗೂಳೇಶ್ವರ ಮಾತನಾಡಿದರು   

ವಾಡಿ: ‘ಭಾರತದ ಸಂವಿಧಾನಕ್ಕೆ ಸಮಾಜವಾದ ಮತ್ತು ಜಾತ್ಯಾತೀತ ತತ್ವಗಳು ಜೀವಾಳವಾಗಿವೆ’ ಎಂದು ಮಹಾಗಾಂವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಕರಿಗೂಳೇಶ್ವರ ಹೇಳಿದರು.

ಪಟ್ಟಣದ ಡಾ.ಬಿ.ಆರ್‌ ಅಂಬೇಡ್ಕರ್ ಸ್ಮಾರಕ ಭವನದಲ್ಲಿ ಭಾನುವಾರ ಸಂಚಲನ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ವತಿಯಿಂದ ಆಯೋಜಿಸಿದ್ದ ಸಮಾಜವಾದ ಮತ್ತು ಜಾತ್ಯಾತೀತತೆ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಮಾಜದಲ್ಲಿನ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆ ತೆಗೆದುಹಾಕಿ ಪ್ರತಿಯೊಬ್ಬ ವ್ಯಕ್ತಿಗೆ ಸಮಾನ ಅವಕಾಶ ನೀಡುವುದೇ ಸಮಾಜವಾದದ ಆಶಯವಾಗಿದ್ದು ಸಂವಿಧಾನ ಇದನ್ನು ಸಾರುತ್ತದೆ’ ಎಂದರು.

ADVERTISEMENT

‘ಅಂಬೇಡ್ಕರ್ ಅವರು ಭಾರತದ ಎಲ್ಲಾ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯ, ಅಭಿವ್ಯಕ್ತಿ, ನಂಬಿಕೆ, ಧರ್ಮ ಮತ್ತು ಉಪಾಸನೆಯ ಸ್ವಾತಂತ್ರ್ಯವನ್ನು ನೀಡುವ ಮೂಲಕ ಪೀಠಿಕೆಯಲ್ಲಿ ಸ್ಪಷ್ಟವಾಗಿ ದಾಖಲಿಸಿದ್ದಾರೆ. ಇಡೀ ಸಂವಿಧಾನ ಸಮಾಜವಾದ ಮತ್ತು ಜಾತ್ಯಾತೀತತೆ ಆಶಯದ ಮೇಲೆ ನಿಂತಿದೆ’ ಎಂದರು.

ವಿಜಯಪುರ ಒಡಲ ಧ್ವನಿ ಮಹಿಳಾ ಒಕ್ಕೂಟದ ಸಂಸ್ಥಾಪಕಿ, ಮಹಿಳಾ ಹೋರಾಟಗಾರ್ತಿ ಭುವನೇಶ್ವರಿ ಕಾಂಬಳೆ ಮಾತನಾಡಿ, ‘ಸಮಾಜವಾದ ಸಿದ್ದಾಂತ ಇಂದಿನ ಬಂಡವಾಳಶಾಹಿ ವ್ಯವಸ್ಥೆಗೆ ಪರ್ಯಾಯವಾಗಿ ಅವಶ್ಯಕವಾಗಿದೆ. ಜಾತ್ಯಾತೀತತೆ ಎಲ್ಲಾ ಜಾತಿ-ಧರ್ಮಗಳಿಗೆ ಸಮಾನತೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ನೀಡುತ್ತದೆ. ಹೀಗಾಗಿ ಈ ಎರಡು ಪದಗಳು ಪಟ್ಟಭದ್ರ ಹಿತಾಸಕ್ತಿ, ಸಂಪ್ರದಾಯವಾದಿಗಳಿಗೆ ವಿರುದ್ಧವಾಗಿದ್ದು ಸಹಜವಾಗಿ ಅವರು ವಿರೋಧಿಸುತ್ತಾರೆ’ ಎಂದರು.

ಮಹಾತ್ಮಗಾಂಧಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಶೇಖ್ ಅನ್ವರ್, ಸಂಚಲನ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಶ್ರಾವಣಕುಮಾರ ಮೋಸಲಗಿ, ವಿಕ್ರಮ ತೇಜಸ್ ಮಾತನಾಡಿದರು.

ಮುಖಂಡ ರವಿ ಸಿಂಗೆ, ಸಂಚಲನ ವೇದಿಕೆಯ ರವಿಕುಮಾರ ಕೊಳಕೂರ, ರಘುವೀರ ಪವಾರ, ದೇವಿಂದ್ರ ಕರದಳ್ಳಿ, ಸಿದ್ಧಯ್ಯಶಾಸ್ತ್ರೀ ನಂದೂರಮಠ, ಹರಿಶ್ಚಂದ್ರ ಕರಣಿಕ, ಖೇಮಲಿಂಗ ಬೆಳಮಗಿ, ದಯಾನಂದ ಖಜೂರಿ, ರಾಯಪ್ಪ ಕೊಟಗಾರ, ರವಿ ಮುತ್ತಗಿ, ಅಲ್ಲಾಭಕ್ಷ, ಸಿದ್ದರಾಮ ನಡಗೇರಿ, ಆನಂದಕುಮಾರ ನಿಂಬರ್ಗಾ, ವೀರಣ್ಣ ಯಾರಿ, ಭೀಮಶಾ ಮೈನಾಳಕರ, ಸುಜಾತಾ ಮೋಸಲಗಿ, ಗೀತಾ ಹೊಸಮನಿ, ಪಾರ್ವತಿ ನಿಂಬರ್ಗಾ, ರಮಾ ದೊಡ್ಡಮನಿ, ಮಹೆಬೂಬಿ, ಸುನಿತಾ ಖಜೂರಿ ಸೇರಿದಂತೆ ಇತರರಿದ್ದರು. ಜಗನ್ನಾಥ ಹಂದರ್ಕಿ ಸ್ವಾಗತಿಸಿದರು. ಸಂತೋಷ ಕೋಮಟೆ ನಿರೂಪಿಸಿದರು. ಸಿದ್ಧಾರ್ಥ ಗಂಗನೋರ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.