ADVERTISEMENT

‘ಏಕಕಾಲಕ್ಕೆ ಚುನಾವಣೆಯಿಂದ ಕೋಟ್ಯಂತರ ಉಳಿತಾಯ’: ಸಚಿವ ಸೋಮಣ್ಣ

​ಪ್ರಜಾವಾಣಿ ವಾರ್ತೆ
Published 1 ಜೂನ್ 2025, 16:21 IST
Last Updated 1 ಜೂನ್ 2025, 16:21 IST
ಕಲಬುರಗಿಯ ಕೆಕೆಸಿಸಿಐ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಒಂದು ದೇಶ ಒಂದು ಚುನಾವಣೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾರ್ವಜನಿಕರು       ಪ್ರಜಾವಾಣಿ ಚಿತ್ರ
ಕಲಬುರಗಿಯ ಕೆಕೆಸಿಸಿಐ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಒಂದು ದೇಶ ಒಂದು ಚುನಾವಣೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾರ್ವಜನಿಕರು       ಪ್ರಜಾವಾಣಿ ಚಿತ್ರ   

ಕಲಬುರಗಿ: ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ನೇತೃತ್ವದ ಸಮಿತಿಯು ದೇಶದಲ್ಲಿ ಲೋಕಸಭೆ, ಎಲ್ಲ ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸಲು ಶಿಫಾರಸು ಮಾಡಿದೆ. ಇದರಿಂದಾಗಿ ಕೋಟ್ಯಂತರ ರೂಪಾಯಿ ಹಣ, ಸಮಯ ಹಾಗೂ ಗುಂಪುಗಾರಿಕೆ ನಡೆಸುವುದು ತಪ್ಪಲಿದೆ ಎಂದು ರೈಲ್ವೆ ಹಾಗೂ ಜಲಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅಭಿಪ್ರಾಯಪಟ್ಟರು.

ನಗರದಲ್ಲಿ ಭಾನುವಾರ ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಆಯೋಜಿಸಿದ್ದ ಒಂದು ದೇಶ, ಒಂದು ಚುನಾವಣೆ: ಒಂದು ರಾಷ್ಟ್ರೀಯ ದೃಷ್ಟಿಕೋನ ಕುರಿತ ವಿಚಾರ ಸಂಕಿರಣದಲ್ಲಿ ಅವರು ಉಪನ್ಯಾಸ ನೀಡಿದರು.

‘ಏಕಕಾಲಕ್ಕೆ ಚುನಾವಣೆ ನಡೆಸಬೇಕು ಎಂಬುದು ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಅವರ ಕನಸಾಗಿತ್ತು. ಅದನ್ನು ನನಸು ಮಾಡಲು ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರು ಮುಂದಾಗಿದ್ದಾರೆ. ಏಕಕಾಲಕ್ಕೆ ಚುನಾವಣೆಗಳು ಎದುರಾದರೆ 12,03,800 ಮತಗಟ್ಟೆಗಳನ್ನು ತೆರೆಯಬೇಕಾಗುತ್ತದೆ. 70 ಲಕ್ಷ ಸರ್ಕಾರಿ ಸಿಬ್ಬಂದಿಯನ್ನು ಚುನಾವಣೆ ಕೆಲಸಕ್ಕೆ ನಿಯೋಜಿಸಬೇಕಾಗುತ್ತದೆ. ಲೋಕಸಭೆ, ವಿಧಾನಸಭೆ ಚುನಾವಣೆಗಳು ನಡೆದ ತಕ್ಷಣ ಮತ್ತೊಂದು ಸುತ್ತಿನಲ್ಲಿ ಮಹಾನಗರ ಪಾಲಿಕೆ, ನಗರ ಸಭೆ, ಜಿಲ್ಲಾ, ತಾಲ್ಲೂಕು ಹಾಗೂ ಗ್ರಾ.ಪಂ. ಚುನಾವಣೆಗಳನ್ನು ನಡೆಸಿದರೆ ಐದು ವರ್ಷ ನಿಶ್ಚಿಂತೆಯಿಂದ ಆಡಳಿತ ನಡೆಸಬಹುದಾಗುತ್ತದೆ’ ಎಂದರು.

ADVERTISEMENT

ಭಾರತ ಸರ್ಕಾರದ ಈ ಪ್ರಸ್ತಾವಕ್ಕೆ 162 ಪಕ್ಷಗಳ ಅಭಿಪ್ರಾಯವನ್ನು ಕೇಳಲಾಗಿದೆ. ಅದರಲ್ಲಿ 32 ಪಕ್ಷಗಳು ಏಕಕಾಲಕ್ಕೆ ಚುನಾವಣೆ ನಡೆಸಲು ಒಲವು ತೋರಿಸಿವೆ. ಅಮೆರಿಕದಲ್ಲಿ ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಚುನಾವಣೆ ನಡೆಯುತ್ತದೆ. ಇಲ್ಲಿಯೂ ಒಂದೇ ಬಾರಿ ಚುನಾವಣೆ ನಡೆಸುವುದರಿಂದ ಭಾರಿ ಪ್ರಮಾಣದ ಖರ್ಚು ಉಳಿಸಬಹುದಾಗಿದೆ ಎಂದು ಸೋಮಣ್ಣ ಪ್ರತಿಪಾದಿಸಿದರು.

ಕೈಕೊಟ್ಟ ವಿದ್ಯುತ್:

ಸಚಿವ ಸೋಮಣ್ಣ ಮಾತು ಶುರು ಮಾಡಿದ ಕೆಲ ಕ್ಷಣಗಳಲ್ಲಿಯೇ ಕೆಕೆಸಿಸಿಐನ ರಘೋಜಿ ಸಭಾಂಗಣದಲ್ಲಿ ವಿದ್ಯುತ್ ಕೈಕೊಟ್ಟಿತು. ತಾಂತ್ರಿಕ ದೋಷದಿಂದಾಗಿ ಕರೆಂಟ್ ಕೈಕೊಟ್ಟಿತ್ತು. ಕತ್ತಲಲ್ಲಿಯೇ ಕೆಲ ಹೊತ್ತು ಭಾಷಣ ಮುಂದುವರಿಸಿದರು. ಶಾಸಕ ಶರಣು ಸಲಗರ ಮಧ್ಯಪ್ರವೇಶಿಸಿ, ‘ನೀವು ಹೇಳುತ್ತಿರುವ ವಿಷಯ ಮಹತ್ವದ್ದಾಗಿದ್ದು, ಎಲ್ಲರಿಗೂ ಕೇಳಿಸಬೇಕು. ಹಾಗಾಗಿ, ಕರೆಂಟ್ ಬರುವವರೆಗೆ ಕಾಯಿರಿ’ ಎಂದು ಕೋರಿದರು. ಸೋಮಣ್ಣ ಕೆಲ ಹೊತ್ತು ಕುಳಿತುಕೊಂಡರು. 

ವಿದ್ಯುತ್ ಸಂಪರ್ಕ ಕಲ್ಪಿಸುವ ಎಲ್ಲ ಪ್ರಯತ್ನಗಳು ವಿಫಲವಾದ ಬಳಿಕ ಕೆಕೆಸಿಸಿಐ ಅಧ್ಯಕ್ಷ ಶರಣು ಪಪ್ಪಾ ಅವರು ವೇದಿಕೆಗೆ ಬಂದು, ‘ವಿದ್ಯುತ್ ವ್ಯವಸ್ಥೆ ಮರುಸ್ಥಾಪಿಸಲು ಕೆಲ ಹೊತ್ತು ಬೇಕಾಗಲಿದೆ. ಆದ್ದರಿಂದ ಸಚಿವರು ಉಪನ್ಯಾಸ ಮುಂದುವರೆಸಬೇಕು’ ಎಂದು ಮನವಿ ಮಾಡಿದರು. ಸಿಂಗಲ್ ಲೈನ್ ಇದ್ದಿದ್ದರಿಂದ ವಿದ್ಯುಪ್ ದೀಪ ಉರಿಯದಿದ್ದರೂ ಎಸಿಗಳು ಚಾಲೂ ಇದ್ದವು. ಹೀಗಾಗಿ, ಸಚಿವರು ತಮ್ಮ ಉಪನ್ಯಾಸ ಮುಂದುವರಿಸಿದರು. ಇದೇ ಅವಧಿಯಲ್ಲಿ ಮಹಿಳೆಯೊಬ್ಬರು ಕೆಕೆಸಿಸಿಐ ಕಟ್ಟಡದ ಲಿಫ್ಟ್‌ನಲ್ಲಿ ಕೆಲ ಹೊತ್ತು ಸಿಲುಕಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.