ADVERTISEMENT

ಅರುಣ ಪುತ್ತಿಲ ಗಡೀಪಾರಿಗೆ ವಿರೋಧ

ಸಿಎಂಗೆ ಪತ್ರ ಬರೆದ ಸೌಹಾರ್ದ ಕರ್ನಾಟಕ ಸಂಘಟನೆ ಮುಖಂಡರು

​ಪ್ರಜಾವಾಣಿ ವಾರ್ತೆ
Published 4 ಜೂನ್ 2025, 16:18 IST
Last Updated 4 ಜೂನ್ 2025, 16:18 IST

ಕಲಬುರಗಿ: ‘ಪುತ್ತೂರಿನ ಅರುಣ ಪುತ್ತಿಲ ಎಂಬ ಕೋಮುವಾದಿಯನ್ನು ದಕ್ಷಿಣಕನ್ನಡ ಜಿಲ್ಲೆಯಿಂದ ಕಲಬುರಗಿ ಜಿಲ್ಲೆಯ ಶಹಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಗೆ ಯಾವುದೇ ಕಾರಣಕ್ಕೂ ಗಡೀಪಾರು ಮಾಡಬಾರದು’ ಎಂದು ಸೌಹಾರ್ದ ಕರ್ನಾಟಕ ಸಂಘಟನೆ ಮುಖಂಡರು ಆಗ್ರಹಿಸಿದ್ದಾರೆ.

ಈ ಸಂಬಂಧ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಸೌಹಾರ್ದ ಕರ್ನಾಟಕ ಸಂಘಟನೆ ಪತ್ರ ಬರೆದಿದೆ.

‘ಕಲಬುರಗಿ ಸೌಹಾರ್ದದ ನಾಡು. ಹಿಂದೂ, ಮುಸ್ಲಿಂ, ಸಿಖ್, ಇಸಾಯಿ ಎಲ್ಲರೂ ಕೂಡಿ ಬದುಕುವ ಬಹುಸಂಸ್ಕೃತಿಯ ಪರಂಪರೆ ನಮ್ಮ ಮಣ್ಣಿನ ಗುಣ. ಆದರೆ, ಅರ್ಧ ಕರ್ನಾಟಕಕ್ಕೆ ಬೆಂಕಿಯಿಟ್ಟ ಕೋಮುವಾದಿ ಕೊಲೆಗಡುಕ ಸಂಸ್ಕೃತಿಯವರನ್ನು ನಮ್ಮ ನಾಡಿಗೆ ಗಡೀಪಾರು ಮಾಡಿದರೆ ನಮ್ಮ ನಾಡಿನ ಪರಿಸ್ಥಿತಿ ಏನಾಗಬೇಡ? ಕರಾವಳಿ ಪ್ರದೇಶದಲ್ಲಿನ ಭಾವೈಕ್ಯ ನಾಶ ಮಾಡಲೆಂದೇ ಜನ್ಮವೆತ್ತಿರುವ ಅರುಣ ಪುತ್ತಿಲ ಎಂಬ ಕೋಮುವಾದಿಯನ್ನು ನಮ್ಮ ಪ್ರದೇಶದಲ್ಲಿ ಇರಲು ಬಿಟ್ಟರೆ ಅವರ ಕೋಮುಹಿಂಸಕ ಪ್ರಯೋಗ ಶಾಲೆ ಇಲ್ಲಿಗೂ ವಿಸ್ತರಿಸಲು ಅವಕಾಶ ಮಾಡಿಕೊಟ್ಟಂತೆ. ಅವರಿಂದ ಈ ನಾಡಿನ ಸಾಂಸ್ಕೃತಿಕ ಪರಂಪರೆಗೆ ಧಕ್ಕೆ ಬರುತ್ತದೆ’ ಎಂದು ಮುಖಂಡರು ಕಳವಳ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಇವರು ಸಮಾಜ ಕಂಟಕರು ಎಂಬ ಕಾರಣಕ್ಕಾಗಿಯೇ ಗಡೀಪಾರು ಮಾಡುವುದಾದರೆ ನೇರವಾಗಿ ಜೈಲಿಗೆ ಕಳುಹಿಸಲಿ. ನಮ್ಮ ನಾಡಿಗೆ ಬೇಡ. ಎಲ್ಲ ಜಾತ್ಯತೀತ ಮನಸುಳ್ಳವರು, ಶರಣ–ಸೂಫಿ–ಸಂತ ಪರಂಪರೆಯುಳ್ಳವರು ಅರುಣ ಪುತ್ತಿಲ ಶಹಾಬಾದ್‌ಗೆ ಗಡೀಪಾರು ಮಾಡುತ್ತಿರುವುದನ್ನು ವಿರೋಧಿಸಬೇಕು’ ಎಂದು ಆರ್‌.ಕೆ.ಹುಡಗಿ, ಮೀನಾಕ್ಷಿ ಬಾಳಿ, ಕೆ.ನೀಲಾ, ಪ್ರಭು ಖಾನಾಪುರ, ಕಾಶೀನಾಥ ಅಂಬಲಗಿ, ಅರ್ಜುನ ಭದ್ರೆ, ಬಸಣ್ಣ ಸಿಂಗೆ, ಮರೆಪ್ಪ ಹಳ್ಳಿ, ದತ್ತಾತ್ರೇಯ ಇಕ್ಕಳಕಿ, ಶ್ರೀಶೈಲ ಘೂಳಿ, ಮಾರುತಿ ಗೋಖಲೆ ಸೇರಿದಂತೆ 25ಕ್ಕೂ ಅಧಿಕ ಮುಖಂಡರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.